ಆ್ಯಪ್ನಗರ

'7 ದಿನದೊಳಗೆ ಮನೆ ಕೆಡವಿ', ಚಂದ್ರಬಾಬು ನಾಯ್ಡು ನಿವಾಸಕ್ಕೆ ತೆರವಿನ ನೋಟಿಸ್‌

ಈ ಹಿಂದೆ ಜೂನ್‌ 27ರಂದು ಮನೆಯ ಮಾಲಿಕರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಈ ನೋಟಿಸ್‌ಗೆ ನೀಡಿದ ಉತ್ತರ ತೃಪ್ತಕರವಾಗಿಲ್ಲ ಎಂದಿರುವ ಪ್ರಾಧಿಕಾರ ಇದೀಗ ತೆರವಿನ ನೋಟಿಸ್‌ನ್ನು ಜಾರಿ ಮಾಡಿದೆ.

THE ECONOMIC TIMES 22 Sep 2019, 1:47 pm
ಅಮರಾವತಿ: ನಗರದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ನಾಯಕ ಎನ್‌ ಚಂದ್ರಬಾಬು ನಾಯ್ಡು ಉಳಿದುಕೊಂಡಿರುವ ನಿವಾಸಕ್ಕೆ ಆಂಧ್ರ ಪ್ರದೇಶ ಸರಕಾರ ತೆರವಿನ ನೋಟಿಸ್‌ ಜಾರಿಗೊಳಿಸಿದೆ.
Vijaya Karnataka Web TDP president Chandrababu Naidu


ಲಿಂಗಮನೇನಿ ರಮೇಶ್‌ ಅವರಿಗೆ ಸೇರಿದ ಇಲ್ಲಿನ ಉಂಡವಳ್ಳಿ ಗ್ರಾಮದಲ್ಲಿರುವ ಮನೆಯಲ್ಲಿ ಚಂದ್ರಬಾಬು ನಾಯ್ಡು ಉಳಿದುಕೊಂಡಿದ್ದು, ಅನಧಿಕೃತ ನಿರ್ಮಾಣವನ್ನು 7 ದಿನಗಳ ಒಳಗೆ ತೆರವು ಮಾಡುವಂತೆ 'ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ' ಶನಿವಾರ ನೋಟಿಸ್‌ ಜಾರಿ ಮಾಡಿದೆ.

ಒಂದೊಮ್ಮೆ ತೆರವು ಮಾಡುವಲ್ಲಿ ವಿಫಲವಾದಲ್ಲಿ ನಾವೇ ಅದನ್ನು ನೆಲಸಮ ಮಾಡುತ್ತೇವೆ ಎಂಬುದಾಗಿ ಪ್ರಾಧಿಕಾರ ಎಚ್ಚರಿಸಿದೆ. ನೋಟಿಸ್‌ನ್ನು ಸ್ವೀಕರಿಸಲು ಚಂದ್ರಬಾಬು ನಾಯ್ಡು ಮತ್ತು ಕುಟುಂಬಸ್ಥರು ನಿರಾಕರಿಸಿದ ಕಾರಣ ಪ್ರಾಧಿಕಾರದ ಆಯುಕ್ತರು ನೋಟಿಸ್‌ನ್ನು ಉಂಡವಳ್ಳಿ ಗ್ರಾಮದಲ್ಲಿರುವ ಮನೆಯ ಗೋಡೆಗೆ ಅಂಟಿಸಿ ಬಂದಿದ್ದಾರೆ.

ಈ ಹಿಂದೆ ಜೂನ್‌ 27ರಂದು ಮನೆಯ ಮಾಲಿಕರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಈ ನೋಟಿಸ್‌ಗೆ ನೀಡಿದ ಉತ್ತರ ತೃಪ್ತಕರವಾಗಿಲ್ಲ ಎಂದಿರುವ ಪ್ರಾಧಿಕಾರ ಇದೀಗ ತೆರವಿನ ನೋಟಿಸ್‌ನ್ನು ನೀಡಿದೆ.

ಆದೇಶದ ಪ್ರಕಾರ ಪ್ರಾಧಿಕಾರದ ಸಿಬ್ಬಂದಿಗಳು ಪರಿಶೀಲನೆಗೆ ಬಂದಿದ್ದಾಗ ಸ್ಥಳದಲ್ಲಿ ಅನಧಿಕೃತ ನಿರ್ಮಾಣವನ್ನು ಗಮನಿಸಿದ್ದಾರೆ. ಈಜುಕೊಳ ಮೊದಲಾದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎರಡು ಮಹಡಿಗಳ 1.318 ಎಕರೆ ವಿಸ್ತೀರ್ಣದ ಬೃಹತ್‌ ಮನೆ ಕೃಷ್ಣಾ ನದಿಯ ಗರಿಷ್ಠ ಪ್ರವಾಹ ಮಿತಿಯೊಳಗೆ ಇದೆ ಎಂಬುದಾಗಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ನಾಯ್ಡು ನಿವಾಸದ ಪಕ್ಕದಲ್ಲೇ ಇದ್ದ ಸರಕಾರಿ ಕಟ್ಟಡ ಪ್ರಜಾ ವೇದಿಕೆಯನ್ನು ಈಗಾಗಲೇ ಪ್ರಾಧಿಕಾರ ನೆಲಸಮ ಮಾಡಿದ್ದು ಬೆನ್ನಿಗೆ ಈ ನೋಟಿಸ್‌ ನೀಡಲಾಗಿದೆ. ಹೈದರಾಬಾದ್‌ನಿಂದ 2016ರಲ್ಲಿ ಆಂಧ್ರ ಪ್ರದೇಶದ ರಾಜಧಾನಿಯನ್ನು ಅಮರಾವತಿಗೆ ವರ್ಗಾವಣೆ ಮಾಡಿದಂದಿನಿಂದ ಚಂದ್ರಬಾಬು ನಾಯ್ಡು ಇದೇ ನಿವಾಸದಲ್ಲಿ ಉಳಿದುಕೊಂಡಿದ್ದಾರೆ.

ಜೂನ್‌ನಲ್ಲಿ ಮನೆ ಪಕ್ಕದಲ್ಲಿದ್ದ ಪ್ರಜಾ ವೇದಿಕೆ ಕೆಡವಲು ಆದೇಶ ನೀಡಿದ್ದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ, ನಾಯ್ಡು ಕೂಡ ಅಕ್ರಮ ನಿರ್ಮಾಣಗೊಂಡ ಮನೆಯಲ್ಲಿ ವಾಸವಾಗಿದ್ದಾರೆ ಎಂಬುದಾಗಿ ಆರೋಪಿಸಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ವಿರೋಧ ಪಕ್ಷ ಟಿಡಿಪಿ ಸರಕಾರಿ ರಾ ಜಕೀಯ ಧ್ವೇಷ ಸಾಧನೆ ಮಾಡುತ್ತಿದೆ ಎಂದು ಆರೋಪಿಸಿತ್ತು. ಇದೀಗ ಈ ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದರೂ ಸರಕಾರ ನೋಟಿಸ್‌ ಜಾರಿ ಮಾಡುತ್ತಿದೆ ಎಂಬುದಾಗಿ ವಿರೋಧ ಪಕ್ಷ ಜಗನ್‌ ಸರಕಾರದ ವಿರುದ್ಧ ಕಿಡಿಕಾರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ