ಆ್ಯಪ್ನಗರ

ದೇಶದ ಮೊದಲ ಅತಿ ಉದ್ದದ ಸೇತುವೆ: ಏನಿದರ ವಿಶೇಷತೆ?

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದೇ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 2002ರಲ್ಲಿ ವಾಜಪೇಯಿ ಸರಕಾರ ಈ ಸೇತುವೆಯ ಕಾಮಗಾರಿ ಆರಂಭಿಸಿತ್ತು. ಸೇತುವೆಗೆ ಅಡಿಗಲ್ಲು ಹಾಕಿದವರು 1997ರಲ್ಲಿ ಪ್ರಧಾನಿಯಾಗಿದ್ದ ಎಚ್‌.ಡಿ ದೇವೇಗೌಡ ಅವರು. 5,900 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ, 120 ವರ್ಷಗಳ ಕಾಲ ಬಳಕೆಗೆ ಯೋಗ್ಯವಾಗಿರಲಿದೆ.

Vijaya Karnataka Web 25 Dec 2018, 5:06 pm
ಹೊಸದಿಲ್ಲಿ: ಬ್ರಹ್ಮಪುತ್ರಾ ನದಿಗೆ ಅಡ್ಡವಾಗಿ ಕಟ್ಟಿದ ದೇಶದ ಅತಿ ಉದ್ದದ (4.9 ಕಿ.ಮೀ) ರೈಲು ಮತ್ತು ರಸ್ತೆ ಸೇತುವೆಯನ್ನು ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು.

ಅರುಣಾಚಲ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿಯ ಉತ್ತರ ದಂಡೆಯಲ್ಲಿರುವ ನಹರ್‌ಲಗುನ್ ಎಂಬಲ್ಲಿ ತೀನ್‌ಸುಕಿಯಾದಿಂದ ಹೊರಡುವ ಮೊದಲ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ಪ್ರಧಾನಿ ಜತೆಗೆ ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಕೂಡ ನೂತನ ಸೇತುವೆಯ ಮೇಲೆ ಕೆಲವು ಮೀಟರ್‌ಗಳಷ್ಟು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದರು.

ದೇಶದ ಅತಿ ಉದ್ದದ ರೈಲ್‌ರೋಡ್‌ ಸೇತುವೆ ಪ್ರಧಾನಿಯಿಂದ ಲೋಕಾರ್ಪಣೆ

ಈ ಸೇತುವೆ ಬಗ್ಗೆ ನೀವು ತಿಳಿಯಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ:

* ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದೇ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 2002ರಲ್ಲಿ ವಾಜಪೇಯಿ ಸರಕಾರ ಈ ಸೇತುವೆಯ ಕಾಮಗಾರಿ ಆರಂಭಿಸಿತ್ತು. ಸೇತುವೆಗೆ ಅಡಿಗಲ್ಲು ಹಾಕಿದವರು 1997ರಲ್ಲಿ ಪ್ರಧಾನಿಯಾಗಿದ್ದ ಎಚ್‌.ಡಿ ದೇವೇಗೌಡ ಅವರು.

* ಈ ಸೇತುವೆ 1997-98ರಲ್ಲಿ ರೂಪಿಸಲಾದ ಅಸ್ಸಾಂ ಒಪ್ಪಂದದ ಭಾಗವಾಗಿದ್ದು, ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿ ಭಾಗಕ್ಕೆ ಭದ್ರತಾ ಪಡೆಗಳು ಮತ್ತು ರಕ್ಷಣಾ ಸಾಮಗ್ರಿಗಳ ತ್ವರಿತ ರವಾನೆಗೆ ಈ ಸೇತುವೆ ನೆರವಾಗಲಿದೆ.

* 5,900 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ, 120 ವರ್ಷಗಳ ಕಾಲ ಬಳಕೆಗೆ ಯೋಗ್ಯವಾಗಿರಲಿದೆ. ಅಸ್ಸಾಂನ ದಿಬ್ರೂಗಢ ನಗರದಿಂದ 17 ಕಿ.ಮೀ ದೂರದಲ್ಲಿ ಈ ಸೇತುವೆಯಿದ್ದು, ದ್ವಿಪಥ ಬ್ರಾಡ್‌ಗೇಜ್‌ ರೈಲು ಮಾರ್ಗ ಹಾಗೂ ತ್ರಿಪಥ ರಸ್ತೆ ಮಾರ್ಗವನ್ನು ಹೊಂದಿದೆ.

* ರಸ್ತೆ ಮಾರ್ಗದಲ್ಲಿ ದಿಬ್ರೂಗಢ ಮತ್ತು ಇಟಾನಗರದ ನಡುವಣ ಅಂತರ 150 ಕಿ.ಮೀ ಕಡಿಮೆಯಾದರೆ ರೈಲಿನ ಮೂಲಕ ಪ್ರಯಾಣಿಸುವವರಿಗೆ 750 ಕಿ.ಮೀ ಅಂತರ ಕಡಿಮೆಯಾಗುತ್ತದೆ. ದಿಬ್ರೂಗಢದಿಂದ ಬ್ರಹ್ಮಪುತ್ರಾ ನದಿಯ ಉತ್ತರ ದಂಡೆಯ ಮೂಲಕವಾಗಿ ದಿಲ್ಲಿ ಮತ್ತು ಕೋಲ್ಕೊತಾಗೆ ರಂಗಿಯಾ ಮಾರ್ಗವಾಗಿ ಅತ್ಯಂತ ಸಮೀಪದ ಸಂಪರ್ಕ ಕಲ್ಪಿಸುತ್ತದೆ.

* ಬ್ರಹ್ಮಪುತ್ರಾ ನದಿಯ ಉತ್ತರ ದಂಡೆಯ ನಿವಾಸಿಗಳಿಗೆ ಈ ವರೆಗೆ ಇದ್ದ ಸಂಪರ್ಕದ ಸಮಸ್ಯೆ ಈಗ ನಿವಾರಣೆಯಾಗಿದೆ ಎಂದು ಈ ಸೇತುವೆ ನಿರ್ಮಾಣದ ವಾಸ್ತು ಮತ್ತು ವಿನ್ಯಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಧಿಕಾರಿಯೊಬ್ಬರು ತಿಳಿಸಿದರು.

* ದಕ್ಷಿಣದಿಂದ ಉತ್ತರದ ಕಡೆಗೆ ಸೇನಾಪಡೆಯ ಸುಲಭ ಹಾಗೂ ತ್ವರಿತ ರವಾನೆಗೆ ಈ ಸೇತುವೆ ಅನುಕೂಲವಾಗಿದೆ. ಚೀನಾದ ಜತೆಗಿನ ಭಾರತದ ಅತಿ ದೂರದ ಗಡಿಪ್ರದೇಶಕ್ಕೆ ಸುಲಭ ಸಂಪರ್ಕ ಸಾಧ್ಯವಾಗಿದೆ.

* ವಿದ್ಯಾರ್ಥಿಗಳು ಮತ್ತು ರೋಗಿಗಳು ಇದುವರೆಗೆ ದೋಣಿಯ ಮೂಲಕ ನದಿ ದಾಟಿ ದಿಬ್ರೂಗಢ ಯುನಿವರ್ಸಿಟಿ ಹಾಗೂ ಅಸ್ಸಾಂ ಮೆಡಿಕಲ್ ಕಾಲೇಜಿಗೆ ಬರಬೇಕಿತ್ತು. ಇದೀಗ ರಸ್ತೆ ಮೂಲಕವೇ ಸುಲಭವಾಗಿ ಬರಬಹುದಾಗಿದೆ.

* ಪೂರ್ಣವಾಗಿ ವೆಲ್ಡಿಂಗ್ ಮೂಲಕ ಜೋಡಿಸಲಾದ ದೇಶದ ಮೊದಲ ಸೇತುವೆ ಎಂಬ ಖ್ಯಾತಿ ಬೋಗಿಬೀಲ್ ಸೇತುವೆಯದ್ದಾಗಿದೆ. ಐರೋಪ್ಯ ಮಾನದಂಡಗಳ ಅನುಸಾರ ಭಾರತದಲ್ಲಿ ನಿರ್ಮಾಣಗೊಂಡ ಮೊದಲ ವೆಲ್ಡಿಂಗ್ ಸೇತುವೆ ಇದಾಗಿದೆ.

* ಬೋಗಿಬೀಲ್ ಸೇತುವೆ ಭೂಕಂಪ ವಲಯ-5ರಲ್ಲಿ ಬರುತ್ತದೆ. 7.0 ತೀವ್ರತೆಯ ಭೂಕಂಪ ಸಂಭವಿಸಬಹುದಾದ ವಲಯ ಇದಾಗಿದ್ದು, ಅತ್ಯಂತ ಬಲಿಷ್ಠ ಕಂಪನ ನಿರೋಧಕ (1,700 ಎಂಟಿ) ಉಕ್ಕನ್ನು ಬಳಸಲಾಗಿದೆ.

* ಈ ಸೇತುವೆಯ ವ್ಯೂಹಾತ್ಮಕ ಮಹತ್ವ ಮನಗಂಡು, ಇದನ್ನು ರಾಷ್ಟ್ರೀಯ ಯೋಜನೆಯಾಗಿ 2007ರಲ್ಲಿ ಸರಕಾರ ಘೋಷಿಸಿತ್ತು. ಆ ಬಳಿಕ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ನಿಧಿ ಲಭ್ಯವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ