ಆ್ಯಪ್ನಗರ

ಪಿಲಾಟಸ್‌ ಖರೀದಿ ಅಕ್ರಮ, 14 ಕಡೆ ಇಡಿ ದಾಳಿ; ರಾಬರ್ಟ್‌ ವಾದ್ರಾಗೂ ಕಂಟಕ?

2009 - 13 ನಡುವೆ ಅಂದರೆ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ವಿಮಾನ ಖರೀದಿ ಅಕ್ರಮ ಇದಾಗಿದ್ದು, ಹಲವು ಖ್ಯಾತನಾಮರ ಹೆಸರು ಪ್ರಕರಣದೊಂದಿಗೆ ತಳುಕು ಹಾಕಿಕೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ರಕ್ಷಣಾ ಇಲಾಖೆಯಲ್ಲಿನ ಹಲವು ಹಿರಿಯ ಅಧಿಕಾರಿಗಳಿಗೆ ಸಂಸ್ಥೆ ಲಂಚ ನೀಡಿರುವುದು ಗೊತ್ತಾಗಿದೆ.

THE ECONOMIC TIMES 7 Aug 2020, 9:43 pm
ಹೊಸದಿಲ್ಲಿ: ವಾಯುಸೇನೆಗೆ ಸ್ವಿಟ್ಜರ್ಲೆಂಡ್‌ನ ಪಿಲಾಟಸ್‌ ಏರ್‌ಕ್ರಾಫ್ಟ್‌ ಲಿಮಿಟೆಡ್‌ ಕಂಪನಿಯ ತರಬೇತಿ ವಿಮಾನ ಖರೀದಿ ಮಾಡುವ ವೇಳೆ ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಸ್‌ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಶುಕ್ರವಾರ ಒಂದೇ ದಿನ 14 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
Vijaya Karnataka Web pilatous


2009ರಿಂದ 2012ರ ನಡುವೆ ಅಂದರೆ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ವಿಮಾನ ಖರೀದಿ ಅಕ್ರಮ ಇದಾಗಿದ್ದು, ಹಲವು ಖ್ಯಾತನಾಮರ ಹೆಸರು ಪ್ರಕರಣದೊಂದಿಗೆ ತಳುಕು ಹಾಕಿಕೊಂಡಿದೆ. ಈ ಅವ್ಯವಹಾರದ ಬಗ್ಗೆ ಸಿಬಿಐ ಕೇಸ್‌ ದಾಖಲಾಗಿದ್ದು, ಪಿಲಾಟಸ್‌ ಸಂಸ್ಥೆಯು ವಾಯುಸೇನೆ, ರಕ್ಷಣಾ ಇಲಾಖೆಯಲ್ಲಿನ ಹಲವು ಹಿರಿಯ ಅಧಿಕಾರಿಗಳಿಗೆ ಲಂಚ ನೀಡಿರುವುದು ಪ್ರಾರಂಭಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಆ ಸಂಸ್ಥೆಗೆ ಕಳೆದ ವರ್ಷ ನಿಷೇಧ ಹೇರಲಾಗಿತ್ತು. ಈ ಅಕ್ರಮದ ಕುರಿತು ಹಣಕಾಸು ಅವ್ಯವಹಾರ ನಿಯಂತ್ರಣ ಕಾಯಿದೆಯಡಿ (ಪಿಎಮ್‌ಎಲ್‌ಎ) ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ಮೋಸದ ಜಾಡು ಹಿಡಿದು ಹೋಗುತ್ತಿದ್ದಾರೆ. ಅದರಂತೆ ದಿಲ್ಲಿಯ 12 ಕಡೆ ಹಾಗೂ ಗುರುಗ್ರಾಮ ಹಾಗೂ ಸೂರತ್‌ನಲ್ಲಿ ತಲಾ ಒಂದು ಕಡೆ ದಾಳಿ ನಡೆಸಿದ್ದಾರೆ.

ಪಿಲಾಟಸ್‌ ಕಂಪನಿಯು ಭಾರತದ ಜತೆ ಒಪ್ಪಂದ ಮಾಡಿಕೊಳ್ಳುವ ಉದ್ದೇಶದಿಂದ ದೊಡ್ಡ ಮೊತ್ತದ ಕಮಿಷನ್‌ ಅನ್ನು ಹಲವರಿಗೆ ನೀಡಿದೆ ಎಂಬುದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್‌ ವಾದ್ರಾ ಹೆಸರೂ ಕೇಳಿಬಂದಿದ್ದರೂ, ನೇರವಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಮಧ್ಯವರ್ತಿ ಸಂಜಯ್‌ ಭಂಡಾರಿ ಹಾಗೂ ಇನ್ನಿಬ್ಬರ ವಿರುದ್ಧ ಪಿಎಮ್‌ಎಲ್‌ಎ ಕೇಸ್‌ ದಾಖಲಿಸಿರುವ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌‌ ಸಿದ್ಧಪಡಿಸಿದೆ. ವಿಚಾರಣೆ ವೇಳೆ ವಾದ್ರಾ ಕುರಿತು ಸಾಕ್ಷ್ಯಾಧಾರಗಳು ಲಭ್ಯವಾದಲ್ಲಿ ಈ ಹಗರಣ ಅವರ ಕೊರಳಿಗೂ ಸುತ್ತಿಕೊಳ್ಳುವುದು ಖಚಿತವಾಗಿದೆ.

ಮಧ್ಯವರ್ತಿ ಮೂಲಕ ಅಕ್ರಮ

ಭ್ರಷ್ಟಾಚಾರ ಪ್ರಕರಣದಲ್ಲಿ ಮಧ್ಯವರ್ತಿ ಸಂಜಯ್‌ ಭಂಡಾರಿ ಎಂಬವನ ವಿರುದ್ಧ ಕಳೆದ ವರ್ಷ ಜೂನ್‌ನಲ್ಲಿ ಸಿಬಿಐ ಅಧಿಕಾರಿಗಳು ಕೇಸು ದಾಖಲಿಸಿದ್ದರು. ಆಫ್‌ಸೆಟ್‌ ಇಂಡಿಯಾ ಸೊಲ್ಯೂಶನ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯ ನಿರ್ದೇಶಕನಾಗಿದ್ದ ಸಂಜಯ್‌ ಭಂಡಾರಿ ಹಾಗೂ ಬಿಮಲ್‌ ಸರೀನ್‌ ಎಂಬುವವರು 2009ರಲ್ಲಿ ನಡೆದ ಒಪ್ಪಂದದ ವೇಳೆ ಮಧ್ಯಸ್ಥಿಕೆ ವಹಿಸಿದ್ದರು. ಇದು ಸೇನಾ ಖರೀದಿ ನಿಯಮದ ಉಲ್ಲಂಘನೆ ಎಂದು ಸಿಬಿಐ ಆರೋಪಿಸಿದೆ. ಅದಕ್ಕಾಗಿ ಸಂಜಯ್‌ಗೆ ಸೇರಿದ ದುಬೈನ ಬ್ಯಾಂಕ್‌ ಖಾತೆಗೆ 10 ಲಕ್ಷ ಸ್ವಿಸ್‌ ಫ್ರಾಂಕ್‌ ಸಂದಾಯವಾಗಿತ್ತು. ಹೆಚ್ಚುವರಿಯಾಗಿ 2011ರಿಂದ 15ರ ಒಳಗೆ 350 ಕೋಟಿ ರೂ. ಆಫ್‌ಸೆಟ್‌ ಇಂಡಿಯಾ ಸೊಲ್ಯೂಶನ್‌ನ ಖಾತೆಗೆ ವರ್ಗಾವಣೆಯಾಗಿದೆ ಎಂದು ಸಿಬಿಐ ಹೇಳಿದೆ.

ಈ ಒಪ್ಪಂದದ ಮಾಹಿತಿಯನ್ನು ಮುಚ್ಚಿಟ್ಟ ಪಿಲಾಟಸ್‌ 2012ರಲ್ಲಿ ರಕ್ಷಣಾ ಇಲಾಖೆಯೊಂದಿಗೆ 2,895.63 ರೂಪಾಯಿಗೆ ಒಪ್ಪಂದ ಮಾಡಿಕೊಂಡು 75 ತರಬೇತಿ ವಿಮಾನಗಳನ್ನು ಸರಬರಾಜು ಮಾಡಿದೆ. ಈ ವೇಳೆ ವಾಯುಸೇನೆ, ರಕ್ಷಣಾ ಸಚಿವಾಲಯ ಹಾಗೂ ಖರೀದಿಗೆ ಸಂಬಂಧಿಸಿದ ಹಲವು ಸರಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಲಂಚ ನೀಡಿರುವುದು ಸಿಬಿಐನ ಆರಂಭಿಕ ತನಿಖೆಯಲ್ಲಿ ಪತ್ತೆಯಾಗಿದೆ.

2012ರ ಅವಧಿಯಲ್ಲಿ ಸಂಜಯ್‌ ಭಂಡಾರಿಯ ಪತ್ನಿ ಸೋನಿಯಾ ಭಂಡಾರಿಗೂ 25.5 ಕೋಟಿ ರೂ. ನೀಡಲಾಗಿದೆ. ದೀಪಕ್‌ ಅಗರ್ವಾಲ್‌ ಹಾಗೂ ಹಿಮಾಂಶು ಶರ್ಮ ಎಂಬುವರ ಮೂಲಕ ನಗದು ವ್ಯವಹಾರ ನಡೆದಿದೆ ಎಂಬುದು ಸಿಬಿಐ ಹೇಳಿದೆ. ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ