ಆ್ಯಪ್ನಗರ

14,500 ಕೋಟಿ ವಂಚನೆ ಪ್ರಕರಣ, ಎರಡನೇ ಬಾರಿ ಅಹಮದ್‌ ಪಟೇಲ್‌ ವಿಚಾರಣೆ

ಗುಜರಾತಿನ ಫಾರ್ಮಾ ಕಂಪನಿ ಸ್ಟೆರ್ಲಿಂಗ್‌ ಬಯೋಟೆಕ್‌ 14,500 ಕೋಟಿ ರೂ. ಬ್ಯಾಂಕ್‌ ವಂಚನೆ ಎಸಗಿದ್ದು, ಮಾಲಿಕರೆಲ್ಲ ತಲೆಮರೆಸಿಕೊಂಡಿದ್ದಾರೆ. ಇವರೊಂದಿಗೆ ಹಣಕಾಸು ವ್ಯವಹಾರ ಹೊಂದಿರುವ ಅಹ್ಮದ್‌ ಪಟೇಲ್‌, ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಿಲುಕಿದ್ದಾರೆ.

Agencies 30 Jun 2020, 6:21 pm
ಹೊಸದಿಲ್ಲಿ: ಕಾಂಗ್ರೆಸ್‌ ಹಿರಿಯ ಮುಖಂಡ, ಸೋನಿಯಾ ಗಾಂಧಿ ಅವರ ಪರಮಾಪ್ತ ಅಹ್ಮದ್‌ ಪಟೇಲ್‌ ಅವರನ್ನು ಬ್ಯಾಂಕ್‌ ವಂಚನೆ ಮತ್ತು ಅಕ್ರಮ ಹಣ ಪರಭಾರೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮಂಗಳವಾರ ಮತ್ತೊಂದು ಸುತ್ತಿನ ಸುದೀರ್ಘ ವಿಚಾರಣೆಗೆ ಒಳಪಡಿಸಿದರು.
Vijaya Karnataka Web Ahmed Patel
ಹಿರಿಯ ಕಾಂಗ್ರೆಸ್‌ ನಾಯಕ, ಸೋನಿಯಾ ಗಾಂಧಿ ಪರಮಾಪ್ತ ಅಹಮದ್‌ ಪಟೇಲ್‌


ಸಂದೇಸರಾ ಸಹೋದರರ ಬ್ಯಾಂಕ್‌ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಅಹ್ಮದ್‌ ಪಟೇಲ್‌ ಹೆಸರು ತಳುಕುಹಾಕಿಕೊಂಡಿದ್ದು, ತನಿಖಾ ಸಂಸ್ಥೆಗಳು ಅವರ ಬೆನ್ನು ಬಿದ್ದಿವೆ. ಕೊರೊನಾ ಸೋಂಕು ಹಾವಳಿ ನಡುವೆಯೇ ಮಂಗಳವಾರ ದಿಲ್ಲಿಯ ಅವರ ನಿವಾಸಕ್ಕೆ ದೌಡಾಯಿಸಿದ ಇಡಿ ಅಧಿಕಾರಿಗಳು, ಹಗರಣದ ಒಳಸುಳಿಗಳನ್ನು ಕೆದಕಿ ಅವರಿಂದ ಮಾಹಿತಿ ಪಡೆದರು.

ಕೇಂದ್ರ ತನಿಖಾ ದಳದ ಮೂವರು ಸದಸ್ಯರ ತಂಡವು ಇತರೆ ಅಧಿಕಾರಿಗಳ ಜತೆಗೂಡಿ ದಿಲ್ಲಿಯ ಪ್ರತಿಷ್ಠಿತ ಲುಟಿಯನ್ಸ್‌ ಪ್ರದೇಶದಲ್ಲಿರುವ ಪಟೇಲ್‌ ಅವರ ಮದರ್‌ ತೆರೇಸಾ ಕ್ರೆಸೆಂಟ್‌ ನಿವಾಸಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಿ, ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿತು. ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಂಡದ ಸದಸ್ಯರು ಫೈಲ್‌ ಹಿಡಿದು ಮಾಸ್ಕ್‌ ಧರಿಸಿದ್ದು ಕಾಣಿಸಿತು. ಈ ಪ್ರಕರಣದಲ್ಲಿ ಜೂನ್‌ 27ರಂದು ಪಟೇಲ್‌ ಅವರನ್ನು ಮೊದಲ ಬಾರಿ ಇಡಿ 8 ತಾಸು ವಿಚಾರಣೆಗೆ ಒಳಪಡಿಸಿತ್ತು.

70 ವರ್ಷದ ಅಹ್ಮದ್‌ ಪಟೇಲ್‌ ಅವರು ಇ.ಡಿ. ಕಚೇರಿಗೆ ಬಂದು ವಿಚಾರಣೆ ಎದುರಿಸಲು ನಿರಾಕರಿಸಿದ್ದರು. ಕೋವಿಡ್‌-19 ಮಾರ್ಗದರ್ಶಿ ಸೂತ್ರದ ಪ್ರಕಾರ ಹಿರಿಯ ನಾಗರಿಕರು ಮನೆಯಿಂದ ಹೊರ ಹೋಗದಂತೆ ಸೂಚಿಸಲಾಗಿದೆ. ಇದೇ ಅಂಶವನ್ನು ಅವರು, ಕಚೇರಿಗೆ ಬಂದು ವಿಚಾರಣೆ ಎದುರಿಸಲು ನಿರಾಕರಿಸಿದ್ದಕ್ಕೆ ಪುರಾವೆಯಾಗಿ ಬಳಸಿಕೊಂಡಿದ್ದರು. ಆದರೆ, ಪಟ್ಟು ಬಿಡದ ಇ.ಡಿ. ಅಧಿಕಾರಿಗಳು ಅವರನ್ನು ಇರುವ ತಾಣದಲ್ಲಿಯೇ ವಿಚಾರಣೆಗೆ ಒಳಪಡಿಸಿದೆ.

ಪಟೇಲ್‌ ನೀಡಿದ ಹೇಳಿಕೆಯ ಸಮಗ್ರ ವಿವರಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಿಸಿಕೊಳ್ಳಲಾಗಿದೆ ಎಂದು ಇ.ಡಿ. ಮಾಹಿತಿ ನೀಡಿದೆ.

ಕಾಂಗ್ರೆಸ್‌ ಪಕ್ಷದ ಖಜಾಂಚಿಯಾಗಿರುವ ಅಹ್ಮದ್‌ ಪಟೇಲ್‌, ಈ ಮೊದಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್‌ನ ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿದ್ದಾರೆ.

ವಂಚನೆ ಹೇಗೆ?

ಗುಜರಾತಿನ ವಡೋದರ ಮೂಲದ ಫಾರ್ಮಾ ಕಂಪನಿ ಸ್ಟೆರ್ಲಿಂಗ್‌ ಬಯೋಟೆಕ್‌ 14,500 ಕೋಟಿ ರೂ. ಬ್ಯಾಂಕ್‌ ವಂಚನೆ ಎಸಗಿತ್ತು. ವಂಚನೆ ಬಯಲಾದ ಬಳಿಕ ಕಂಪನಿ ಮಾಲೀಕರಾದ ನಿತಿನ್‌ ಜಯಂತಿಲಾಲ್‌ ಸಂದೇಸರಾ, ಚೇತನ್‌ಕುಮಾರ್‌ ಜಯಂತಿಲಾಲ್‌ ಸಂದೇಸರಾ ಮತ್ತು ದೀಪ್ತಿ ಸಂದೇಸರಾ ತಲೆಮರೆಸಿಕೊಂಡಿದ್ದಾರೆ. ಇವರೊಂದಿಗೆ ಹಣಕಾಸು ವ್ಯವಹಾರ ಹೊಂದಿರುವ ಅಹ್ಮದ್‌ ಪಟೇಲ್‌, ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಿಲುಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ