ಆ್ಯಪ್ನಗರ

ಯುಪಿಎಯ 'ಎ,ಬಿ,ಸಿ ಮನಸ್ಥಿತಿ' ವಿರುದ್ಧ ಪ್ರಧಾನಿ ಮೋದಿ ವಾಕ್ಪ್ರಹಾರ

'ಒಂದು ಸಮಸ್ಯೆಯಿಂದ ಪಲಾಯನ ಮಾಡುವ ಬದಲು ನಾವು ಅದನ್ನು ಎದುರಿಸಿದೆವು; ಅದನ್ನು ಹೂತು ಹಾಕುವ ಬದಲು ನಾವು ಅದನ್ನು ಮತ್ತಷ್ಟು ಅಗೆದು ಹೊರತೆಗೆದೆವು. ಅಲ್ಲದೆ ಜನತೆಯ ಜತೆ ಸಮಾಲೋಚನೆ ನಡೆಸಿದೆವು. ವ್ಯವಸ್ಥೆಯನ್ನು ಗೊಂದಲಕ್ಕೆ ದೂಡುವ ಬದಲು ಪರಿಹಾರ ಸಾಧ್ಯ ಎಂಬುದನ್ನು ನಾವು ತೋರಿಸಿಕೊಟ್ಟೆವು' ಎಂದು ಪ್ರಧಾನಿ ಮೋದಿ ಯಸ್ ಬ್ಯಾಂಕ್ ಮತ್ತು ಎಕನಾಮಿಕ್ ಟೈಮ್ಸ್ ಸಹಯೋಗದ ಜಾಗತಿಕ ವಾಣಿಜ್ಯ ಸಮ್ಮೇಳನದಲ್ಲಿ ನುಡಿದರು.

Vijaya Karnataka Web 24 Feb 2019, 10:45 am
ಹೊಸದಿಲ್ಲಿ: ಭ್ರಷ್ಟಾಚಾರ ಮತ್ತು ದುರಾಡಳಿತವೇ ಯುಪಿಎ ಸಾಧನೆಯಾಗಿತ್ತು; ತಮ್ಮ ಸರಕಾರ ಈ 'ಎ,ಬಿ,ಸಿ (A- avoiding, B- burying C- confusing) ಮನಸ್ಥಿತಿಯಿಂದ ಆಡಳಿತ ವ್ಯವಸ್ಥೆಯನ್ನು ಹೊರ ತಂದಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Vijaya Karnataka Web PM Modi


'ಒಂದು ಸಮಸ್ಯೆಯಿಂದ ಪಲಾಯನ ಮಾಡುವ ಬದಲು ನಾವು ಅದನ್ನು ಎದುರಿಸಿದೆವು; ಅದನ್ನು ಹೂತು ಹಾಕುವ ಬದಲು ನಾವು ಅದನ್ನು ಮತ್ತಷ್ಟು ಅಗೆದು ಹೊರತೆಗೆದೆವು. ಅಲ್ಲದೆ ಜನತೆಯ ಜತೆ ಸಮಾಲೋಚನೆ ನಡೆಸಿದೆವು. ವ್ಯವಸ್ಥೆಯನ್ನು ಗೊಂದಲಕ್ಕೆ ದೂಡುವ ಬದಲು ಪರಿಹಾರ ಸಾಧ್ಯ ಎಂಬುದನ್ನು ನಾವು ತೋರಿಸಿಕೊಟ್ಟೆವು' ಎಂದು ಪ್ರಧಾನಿ ಮೋದಿ ಯಸ್ ಬ್ಯಾಂಕ್ ಮತ್ತು ಎಕನಾಮಿಕ್ ಟೈಮ್ಸ್ ಸಹಯೋಗದ ಜಾಗತಿಕ ವಾಣಿಜ್ಯ ಸಮ್ಮೇಳನದಲ್ಲಿ ನುಡಿದರು.

ಈ ಕಾರ್ಯವಿಧಾನದಿಂದ ಸಾಮಾಜಿಕ ವಲಯದಲ್ಲಿ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದೆ. ಸಾಮಾಜಿಕ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ, ಅಭಿವೃದ್ಧಯಿಂದ ವಂಚಿತ ವಲಯಗಳನ್ನು ಅಭಿವೃದ್ಧಿಯ ತೆಕ್ಕೆಗೆ ಸೇರಿಸಿಕೊಳ್ಳುವ ಮೂಲಕ ಪ್ರಗತಿಯ ರಥ ಎರಡು ಹಳಿಗಳ ಮೇಲೆ ಓಡುವಂತೆ ಮಾಡಿದೆವು ಎಂದು ಪ್ರಧಾನಿ ಹೇಳಿದರು.

ಜಾಗತಿಕ ಹಾಗೂ ಭಾರತೀಯ ಸಿಇಓಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವಿವಿಧ ಆರ್ಥಿಕ ಮಾನದಂಡಗಳಲ್ಲಿ ಆದ ಸುಧಾರಣೆಗಳನ್ನು ಪಟ್ಟಿ ಮಾಡಿದರು. ಜನರ ಮನಸ್ಥಿತಿಯನ್ನು ಬದಲಿಸುವ ಮೂಲಕ ಹೆಚ್ಚು ಸಂತುಲಿತವಾದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಯುಪಿಎ ಅವಧಿಯಲ್ಲಿ ಭ್ರಷ್ಟಾಚಾರಕ್ಕಾಗಿ ಪೈಪೋಟಿ

'ಕೆಲವೊಂದು ವಿಷಯಗಳು ಭಾರತದಲ್ಲಿ ಸಾಧ್ಯವೇ ಇಲ್ಲ ಎಂಬಂತೆ ದಶಕಗಳ ಕಾಲ ವ್ಯಾಖ್ಯಾನಿಸಲಾಗುತ್ತಿತ್ತು. 2014ರಿಂದೀಚೆಗೆ ನಮ್ಮ ದೇಶದ ಪ್ರಗತಿ ನನ್ನ ಆತ್ಮವಿಶ್ವಾಸ ಹೆಚ್ಚಿಸಿದ್ದು, 130 ಕೋಟಿ ಭಾರತೀಯರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ನಂಬಿಕೆಯನ್ನು ಗಟ್ಟಿಗೊಳಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. 'ನಾಮುಮ್‌ಕಿನ್ ಅಬ್‌ ಮುಮ್‌ಕಿನ್ ಹೈ' (ಅಸಾಧ್ಯವಾದುದು ಈಗ ಸಾಧ್ಯವಾಗಿದೆ) ಎಂದು ಅವರು ಪ್ರತಿಪಾದಿಸಿದರು.

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವ ಮೊದಲು ದೇಶದ ಅರ್ಥವ್ಯವಸ್ಥೆ ಅಧ್ವಾನ ಸ್ಥಿತಿಯಲ್ಲಿತ್ತು. ಅತಿಕೆಟ್ಟ ಮಟ್ಟದ ಹಣದುಬ್ಬರವಿತ್ತು, ಚಾಲ್ತಿ ಖಾತೆ ಖೋತಾ ಮತ್ತು ವಿತ್ತೀಯ ಕೊರತೆ ಗರಿಷ್ಠ ಮಟ್ಟ ತಲುಪಿದ್ದವು. ಪರಿಣಾಮವಾಗಿ ದೇಶದ ಆರ್ಥಿಕತೆ ಆಪತ್ತಿಗೆ ಸಿಲುಕಿತ್ತು ಎಂದು ಕಾಂಗ್ರೆಸ್‌ ಆಡಳಿತದ ವೈಫಲ್ಯಗಳನ್ನು ಕಟು ವಿಮರ್ಶೆಗೆ ಒಳಪಡಿಸಿದರು.

ಹಿಂದೆ ಯುಪಿಎ ಆಡಳಿತಾವಧಿಯಲ್ಲಿ ಭಾರಿ ಪೈಪೋಟಿ ಇತ್ತು. ಅದು ಭ್ರಷ್ಟಾಚಾರಕ್ಕಾಗಿ ಸಚಿವರ ನಡುವೆ, ವ್ಯಕ್ತಿಗಳ ನಡುವೆ ಏರ್ಪಟ್ಟಿದ್ದ ಪೈಪೋಟಿ. ಭ್ರಷ್ಟಾಚಾರವನ್ನು ದೊಡ್ಡಮಟ್ಟದಲ್ಲಿ ವೇಗವಾಗಿ ವಿನೂತನ ರೀತಿಯಲ್ಲಿ ಮಾಡಲು ಅವರ ನಡುವೆ ಭಯಂಕರ ಪೈಪೋಟಿ ನಡೆದಿತ್ತು. ಆ ಪೈಪೋಟಿಯ ಸ್ವರೂಪ ಈಗ ಬದಲಾಗಿದೆ. ರಸ್ತೆಗಳ ಅಭಿವೃದ್ಧಿ, ಎಲ್ಲರಿಗೂ ಸೂರು, ಅಡುಗೆ ಅನಿಲ ಸಂಪರ್ಕ, ಸ್ವಚ್ಛತೆಗೆ ಆದ್ಯತೆ, ವಿದ್ಯುದೀಕರಣದಂತಹ ವಿಷಯದಲ್ಲಿ ನಮ್ಮ ಸರಕಾರ ಪೈಪೋಟಿಯ ಮೇಲೆ ಕೆಲಸ ಮಾಡಿದೆ. ಗುರಿ ಸಾಧನೆಗಾಗಿ ನಮ್ಮ ಸಚಿವರ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ