ಆ್ಯಪ್ನಗರ

ಡಿಕೆ ಶಿವಕುಮಾರ್‌ಗೆ ಸಿಗಲಿಲ್ಲ ಜಾಮೀನು, ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ, ಎರಡು ದಿನ ಜೈಲೇ ಗತಿ!

ಡಿಕೆ ಶಿವಕುಮಾರ್‌ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿದಾಗ 300 ಕೋಟಿ ರೂ. ಗಳಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿದ್ದವು.

Vijaya Karnataka Web 19 Sep 2019, 5:51 pm
ಹೊಸದಿಲ್ಲಿ: ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಮಾಜಿ ಡಿಕೆ ಶಿವಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.
Vijaya Karnataka Web DKShivakumar New


ಹೊಸದಿಲ್ಲಿಯ ರೋಸ್‌ ಅವೆನ್ಯೂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಶನಿವಾರ 11 ಗಂಟೆಗೆ ಮುಂದೂಡಿದರು.

ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆಎಂ. ನಟರಾಜ್‌ ಸುದೀರ್ಘ ವಾದ ಮಂಡಿಸಿದರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಟರಾಜ್ ವಾದಿಸಿದರು.

ಇಷ್ಟೊಂದು ಪ್ರಮಾಣದ ಆಸ್ತಿ ಗಳಿಕೆ ಹೇಗೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ಅಕ್ರಮ ಹಣದಿಂದ ಸಂಪಾದಿಸಿದ ಆಸ್ತಿ ಅಪರಾಧದ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ ಎಂದು ನಟರಾಜ್‌ ವಾದಿಸಿದರು.

ಬ್ರಹ್ಮಾಂಡ ಭ್ರಷ್ಟಾಚಾರದ ಸಣ್ಣ ತುಣಕೊಂದನ್ನು ಮಾತ್ರ ಮುಂದಿಡಲಾಗುತ್ತಿದೆ. ಇನ್ನು ಸಾಕಷ್ಟು ದಾಖಲೆಗಳಿವೆ. ಅಕ್ರಮದ ಎಲ್ಲ ದಾಖಲೆಗಳನ್ನೂ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದೆ. ಹೀಗಾಗಿ ಜಾಮೀನು ಅರ್ಜಿ ವಜಾಗೊಳಿಸಬೇಕು ಎಂದು ವಕೀಲರು ಮನವಿ ಮಾಡಿದರು.

ಅಲ್ಲದೇ ಇದೇ ಸಂದರ್ಭದಲ್ಲಿ ಜಾಮೀನು ಅರ್ಜಿ ನಿರಾಕರಣೆಗೆ ಹಲವಾರು ತೀರ್ಪುಗಳನ್ನು ವಕೀಲರು ಉಲ್ಲೇಖ ಮಾಡಿದರು. ಅಲ್ಲದೇ ಬಂಡಲ್‌ಗಟ್ಟಲೇ ದಾಖಲೆಗಳನ್ನು ನಟರಾಜ್‌ ಅವರು ನ್ಯಾಯಾಲಯದ ಮುಂದೆ ಸಲ್ಲಿಸಿದರು.

ವಾದ ಮಂಡನೆ ವೇಳೆ ಪಿ. ಚಿದಂಬರಂ ಪ್ರಕರಣವನ್ನು ವಕೀಲರು ಉಲ್ಲೇಖಿಸಿ, ಸುಪ್ರೀಂ ಕೋರ್ಟ್‌ ತೀರ್ಪು ಪ್ರಸ್ತಾಪ ಮಾಡಿದರು.

ಇವು ವೈಟ್‌ ಕಾಲರ್‌ ಅಪರಾಧಗಳು. ದಾಖಲೆ ಮುಂದಿಟ್ಟು ಆರೋಪಿಯ ವಿಚಾರಣೆ ನಡೆಸಲಾಗಿದೆ ಎಂದು ಇಡಿ ಪರ ವಕೀಲರು ಸ್ಪಷ್ಟಪಡಿಸಿದರು. ತನಿಖಾಧಿಕಾರಿಯ ಕೈಗಳನ್ನು ನ್ಯಾಯಾಲಯ ಕಟ್ಟಿಹಾಕುವಂತಿಲ್ಲ. ತನಿಖೆಯ ಸಮಯ, ಸ್ಥಳ ನಿಗದಿಪಡಿಸುವುದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದು ಎಂದು ವಕೀಲರು ವಾದಿಸಿದರು.

ವಿದೇಶಿ ಬ್ಯಾಂಕ್‌ಗಳಲ್ಲೂ ಡಿಕೆ ಶಿವಕುಮಾರ್‌ ಖಾತೆ ಹೊಂದಿರುವುದು ಪತ್ತೆಯಾಗಿದೆ. ಈ ಬ್ಯಾಂಕ್‌ಗಳಿಂದಲೂ ಮಾಹಿತಿ ಪಡೆಯಬೇಕಾಗಿದೆ ಎಂದು ತಿಳಿಸಿದರು.

ಸುದೀರ್ಘವಾಗಿ ವಾದ ಮಂಡಿಸಿದ ನಂತರ ಕೆಎಂ ನಟರಾಜ್, ಜಾಮೀನು ಅರ್ಜಿ ವಚಾ ಮಾಡಬೇಕು ಎಂದು ಮನವಿ ಮಾಡಿದರು.

ನೋಟ್‌ ಬ್ಯಾನ್‌ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ನಗದು ಬದಲಾವಣೆ ಮಾಡಿಕೊಳ್ಳಲಾಗಿದೆ. ಹಣ ವರ್ಗಾವಣೆ ಆಗಿದೆ ಎಂದು ವಕೀಲರು ದಾಖಲೆ ಸಲ್ಲಿಸಿದರು.

ಹವಾಲಾ ಹೇಗೆ ನಡೆದಿದೆ ಅನ್ನೋ ಬಗ್ಗೆ ತನಿಖೆ ಮುಂದುವರಿದಿದೆ. ಡಿಕೆಶಿ ಪುತ್ರಿಗೆ 40 ಕೋಟಿ ರೂ. ಸಾಲ ನೀಡಲಾಗಿದೆ ಎಂದು ದಾಖಲೆ ನೀಡಲಾಗಿದೆ. ಆದರೆ ಪುತ್ರಿಯನ್ನು ಈ ಬಗ್ಗೆ ವಿಚಾರಣೆಗೊಳಪಡಿಸಿದರೆ ಆಕೆಗೆ ಸಾಲ ಕೊಟ್ಟವರೇ ಯಾರೆಂದು ಗೊತ್ತೇ ಇಲ್ಲ ಎಂದು ನಟರಾಜ್‌ ತಿಳಿಸಿದರು.

ಕೃಷಿಕರಾಗಿದ್ದಾರೆಯೇ ಎಂದುಕೊಳ್ಳೋಣ. ಆದರೆ ಕಳೆದ ಕೆಲವು ವರ್ಷಗಳಿಂದ ರೈತರು ನಷ್ಟದಲ್ಲಿದ್ದಾರೆ. ಇವರು ಮಾತ್ರ 161 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ ಎಂದು ವಾದಿಸಿದರು.

ತಂದೆ ಕೆಂಪೇಗೌಡ ಸಾಲ ಪಡೆದಿರುವುದಾಗಿ ತೋರಿಸಲಾಗಿದೆ. ಆದರೆ ಕೆಂಪೇಗೌಡ ಯಾವುದೇ ರೀತಿಯಲ್ಲೂ ತೆರಿಗೆ ಪಾವತಿಸಿಲ್ಲ. ಗೌರವಮ್ಮ ಹೆಸರಿನಲ್ಲಿ 38 ಕೃಷಿ ಆಸ್ತಿ, ಡಿಕೆಶಿ ಹೆಸರಿನಲ್ಲಿ 24, ಡಿಕೆ ಸುರೇಶ್‌ ಹೆಸರಿನಲ್ಲಿ 27 ಆಸ್ತಿ ಮಾಡಲಾಗಿದೆ. ಈ ಎಲ್ಲ ಆಸ್ತಿಯನ್ನು ನಗದು ನೀಡಿ ಖರೀದಿ ಮಾಡಲಾಗಿದೆ ಎಂದು ವಕೀಲರು ವಾದಿಸಿದರು.

ಕೃಷಿ ಸಂಪಾದನೆಯಿಂದ ಆದಾಯ ಬಂದಿದ್ದರೆ ಒಳ್ಳೆಯದು. ಆದರೆ ಇಷ್ಟೊಂದು ಪ್ರಮಾಣದ ಆಸ್ತಿ ಬಂದಿರುವುದು ಹೇಗೆ. ಕೃಷಿಯಿಂದ 20 ವರ್ಷದಲ್ಲಿ 1 ಕೋಟಿ 38 ಲಕ್ಷ ರೂ. ಬಂದಿದೆ ಎಂದು ನಟರಾಜ್‌ ಮಾಹಿತಿ ನೀಡಿದರು.

ಡಿಕೆ ಶಿವಕುಮಾರ್‌ ಎರಡು ಬ್ಯಾಂಕ್‌ ಖಾತೆಗಳಿಂದ 168 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ. 4 ಬ್ಯಾಂಕ್‌ ಖಾತೆಗಳ ಬಗ್ಗೆ ಇನ್ನೂ ತನಿಖೆ ನಡೆಸಬೇಕಾಗಿದೆ ಎಂದು ನಟರಾಜ್‌ ದಾಖಲೆ ಸಮೇತ ವಾದಿಸಿದರು.

ಕಾಳಧನ ಸಕ್ರಮ ನಿಯಂತ್ರಣ ಕಾಯಿದೆ (ಪಿಎಂಎಲ್‌ಎ) ಸ್ವತಂತ್ರ ಕಾಯಿದೆ. ಎಷ್ಟು ತೆರಿಗೆ ಕಟ್ಟಿದ್ದಾರೆ ಎಂಬುದು ಇಲ್ಲಿ ಪ್ರಶ್ನೆಯಲ್ಲ. ತೆರಿಗೆ ಕಟ್ಟಿದ ಮಾತ್ರಕ್ಕೆ ಕಪ್ಪುಹಣ ಬಿಳಿ ಆಗುವುದಿಲ್ಲ ಎಂದು ನಟರಾಜ್ ವಾದಿಸಿದರು.

ಡಿಕೆ ಶಿವಕುಮಾರ್‌ಗೆ ಜಾರಿ ನಿರ್ದೇಶನಾಲಯ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ 14 ದಿನಗಳ ಕಾಲ (ಅಕ್ಟೋಬರ್‌ 1ರವರೆಗೆ) ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿತ್ತು.

ಡಿಕೆ ಶಿವಕುಮಾರ್‌ ಅವರ ನಿವಾಸ, ಕಚೇರಿಗಳ ಮೇಲೆ ಆಗಸ್ಟ್‌ 1, 2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಡಿಕೆಶಿಗೆ ಸೇರಿದ್ದ ಒಟ್ಟು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಹೊಸದಿಲ್ಲಿಯ ಡಿಕೆಶಿ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 8.9 ಕೋಟಿ ರೂ. ನಗದು ಪತ್ತೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ