ಆ್ಯಪ್ನಗರ

ಗುಹಾ ಸೇರಿ 50 ಸೆಲೆಬ್ರಿಟಿಗಳ ವಿರುದ್ಧ ದೇಶದ್ರೋಹ ಪ್ರಕರಣ

ಸುಧೀರ್‌ ಕುಮಾರ್‌ ಓಝಾ ಎಂಬ ಸ್ಥಳೀಯ ವಕೀಲರೊಬ್ಬರು ದಾಖಲಿಸಿದ್ದ ದೂರನ್ನು ಪರಿಗಣಿಸಿ ಆ.20ರಂದು ಎಫ್‌ಐಅರ್‌ ದಾಖಲಿಸಲು ಕೋರ್ಟ್‌ ಆದೇಶಿಸಿತ್ತು.

PTI 5 Oct 2019, 5:00 am
ಮುಜಫ್ಫರಪುರ್‌: ದೇಶದಲ್ಲಿಹೆಚ್ಚುತ್ತಿರುವ ಸಮೂಹ ಥಳಿತ ಪ್ರಕರಣಗಳ ವಿರುದ್ಧ ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದ ಇತಿಹಾಸ ತಜ್ಞ ಡಾ.ರಾಮಚಂದ್ರ ಗುಹಾ ಖ್ಯಾತ ನಿರ್ದೇಶಕ ಮಣಿರತ್ನಂ, ನಟಿ ಅಪರ್ಣಾ ಸೆನ್‌ ಸೇರಿದಂತೆ ಸುಮಾರು 50 ಸೆಲೆಬ್ರಿಟಿಗಳ ವಿರುದ್ಧ ದೇಶದ್ರೋಹ ಆರೋಪದ ಅಡಿಯಲ್ಲಿಎಫ್‌ಐಆರ್‌ ದಾಖಲಿಸಲಾಗಿದೆ.
Vijaya Karnataka Web maniratnam


ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ಸೂರ್ಯಕಾಂತ್‌ ತಿವಾರಿ ಅವರ ಆದೇಶದನ್ವಯ ಇಲ್ಲಿನ ಸಾದರ್‌ ಪೊಲೀಸ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಧೀರ್‌ ಕುಮಾರ್‌ ಓಝಾ ಎಂಬ ಸ್ಥಳೀಯ ವಕೀಲರೊಬ್ಬರು ದಾಖಲಿಸಿದ್ದ ದೂರನ್ನು ಪರಿಗಣಿಸಿ ಆ.20ರಂದು ಎಫ್‌ಐಅರ್‌ ದಾಖಲಿಸಲು ಕೋರ್ಟ್‌ ಆದೇಶಿಸಿತ್ತು. ದೇಶದ ಚಾರಿತ್ರ್ಯ ವಧೆಗೆ ಯತ್ನಿಸಿದ ಮತ್ತು ಪ್ರಧಾನಿ ಮೋದಿ ಅವರ ಕಾರ್ಯದಕ್ಷತೆಗೆ ಮಸಿ ಬಳಿಯುವ ಹುನ್ನಾರದಿಂದ ಈ ಪತ್ರ ಬರೆಯಲಾಗಿದೆ ಎಂದು ದೂರಿನಲ್ಲಿಓಝಾ ಆರೋಪಿಸಿದ್ದರು.

ಪತ್ರಕ್ಕೆ ಸಹಿ ಹಾಕಿದ್ದ ಸುಮಾರು 50 ಸೆಲೆಬ್ರಿಟಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ದೇಶದ್ರೋಹ, ಸಾರ್ವಜನಿಕರಿಗೆ ತೊಂದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಶಾಂತಿ ಕದಡಲು ಯತ್ನ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿಪ್ರಕರಣ ದಾಖಲಿಸಲಾಗಿದೆ.

ಮಣಿರತ್ನಂ, ಅನುರಾಗ್‌ ಕಶ್ಯಪ್‌, ಶ್ಯಾಮ್‌ ಬೆನೆಗಲ್‌, ಸೌಮಿತ್ರಾ ಚಟರ್ಜಿ, ಶುಭಾ ಮುದ್ಗಲ್‌ ಸೇರಿದಂತೆ 50 ಸೆಲೆಬ್ರಿಟಿಗಳು ಕಳೆದ ಜುಲೈನಲ್ಲಿಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು. ''ದಲಿತರು, ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಸಮೂಹ ಥಳಿತ ಪ್ರಕರಣಗಳು ತಕ್ಷಣ ನಿಲ್ಲಬೇಕು. ಭಿನ್ನಮತವಿಲ್ಲದೆ ಪ್ರಜಾಪ್ರಭುತ್ವವೇ ಇಲ್ಲ,'' ಎಂದು ಪತ್ರದಲ್ಲಿಹೇಳಲಾಗಿತ್ತು. ಅಲ್ಲದೆ, 'ಜೈ ಶ್ರೀರಾಮ್‌' ಎಂಬ ಘೋಷಣೆಯನ್ನು 'ಯುದ್ಧ ಪ್ರಚೋದಕ ಘೋಷಣೆ'ಯಾಗಿ ಬಳಸಲಾಗುತ್ತಿದೆ ಎಂದು ಪತ್ರದಲ್ಲಿಆರೋಪಿಸಲಾಗಿತ್ತು.

==================

ದನಿ ಎತ್ತಿದವರು ಜೈಲಿಗೆ: ರಾಹುಲ್‌ ವಾಗ್ದಾಳಿ


ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಿಜೆಪಿ ಹಾಗೂ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ''ನರೇಂದ್ರ ಮೋದಿ ಅಥವಾ ಬಿಜೆಪಿ ಸರಕಾರದ ವಿರುದ್ಧ ದನಿ ಎತ್ತಿದ ಎಲ್ಲರನ್ನೂ ಜೈಲಿಗಟ್ಟಲಾಗುತ್ತಿದೆ. ದೇಶದಲ್ಲಿಏನೆಲ್ಲಾನಡೆಯುತ್ತಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಯಾವುದೂ ರಹಸ್ಯವಾಗಿ ಉಳಿದಿಲ್ಲ. ನಾವು ನಿರಂಕುಶ ಪ್ರಭುತ್ವದತ್ತ ಸಾಗುತ್ತಿದ್ದೇವೆ ಎಂಬುದು ಸುಸ್ಪಷ್ಟ,'' ಎಂದು ರಾಹುಲ್‌ ವಯನಾಡಿನಲ್ಲಿಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ