ಆ್ಯಪ್ನಗರ

AB Vajpayee Death: ಅಜಾತ ಶತ್ರು, ನವ ಭಾರತದ ಹರಿಕಾರ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ

ಅಜಾತಶತ್ರು, ಕವಿ ಹೃದಯಿ, ನವ ಭಾರತದ ಹರಿಕಾರ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು.

Vijaya Karnataka Web 16 Aug 2018, 10:46 pm
ಹೊಸದಿಲ್ಲಿ: ಅಜಾತಶತ್ರು, ಕವಿ ಹೃದಯಿ, ನವ ಭಾರತದ ಹರಿಕಾರ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ (ಆಗಸ್ಟ್‌ 16) ಕೊನೆಯುಸಿರೆಳೆದರು.
Vijaya Karnataka Web atal bihari vajpayee


ಮಾಜಿ ಪ್ರಧಾನಿ ವಾಜಪೇಯಿ ಅವರು ಆಗಸ್ಟ್ 16ರ ಸಂಜೆ 5.05 ನಿಮಿಷಕ್ಕೆ ವಿಧಿವಶರಾದರು ಎಂದು ಏಮ್ಸ್ ಆಸ್ಪತ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಸಂಜೆ ಕೊನೆಯುಸಿರೆಳೆದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವಾಜಪೇಯಿ ಪಾರ್ಥಿವ ಶರೀರವನ್ನು ಶೀಘ್ರದಲ್ಲೇ ಏಮ್ಸ್ ಆಸ್ಪತ್ರೆಯಿಂದ ಕೃಷ್ಣ ಮೆನನ್ ರಸ್ತೆಯ ಅವರ ನಿವಾಸಕ್ಕೆ ರವಾನಿಸಲಾಯಿತು. ಶುಕ್ರವಾರ ಪಾರ್ಥಿವ ಶರೀರದ ಮೆರವಣಿಗೆಗೆ ಏರ್ಪಡು ಮಾಡಲಾಗಿದೆ. ನಂತರ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ನಂತರ ಮೆರವಣಿಗೆಯಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಪಾರ್ಥಿವ ಶರೀರ ಕೊಂಡೊಯ್ಯಲಾಗುವುದು. ಆ ನಂತರ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.


ವಾಜಪೇಯಿ ನಿವಾಸದಲ್ಲಿ ಗಣ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶುಕ್ರವಾರ ಬೆಳಗ್ಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಸಂಜೆ 4 ಗಂಟೆಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸಂದೇಶಗಳು ಹರಿದುಬಂದಿವೆ. ಅಮೆರಿಕ ರಾಯಭಾರ ಕಚೇರಿಯೂ ಅಗಲಿದ ನಾಯಕನಿಗೆ ಸಂತಾಪ ಸೂಚಿಸಿ ಸಂದೇಶ ನೀಡಿದೆ.

ಕೃಷ್ಣ ಮೆನನ್‌ ಮಾರ್ಗದಲ್ಲಿರುವ ವಾಜಪೇಯಿ ನಿವಾಸಕ್ಕೆ ಗಣ್ಯರ ದಂಡೇ ಆಗಮಿಸಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಎಲ್‌.ಕೆ. ಆಡ್ವಾಣಿ, ರಾಜನಾಥ್‌ ಸಿಂಗ್‌, ಸ್ಮೃತಿ ಇರಾನಿ, ಅಮಿತ್‌ ಶಾ, ಸುಷ್ಮಾ ಸ್ವರಾಜ್‌, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಬಂದು ಅಂತಿಮ ನಮನ ಸಲ್ಲಿಸಿದರು.


ಶುಕ್ರವಾರ ಸಂಜೆ ವಾಜಪೇಯಿ ಅಂತ್ಯಕ್ರಿಯೆ ನೆರವೇರಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಈ ನಡುವೆ ಕೇಂದ್ರ ಸರಕಾರ ಏಳು ದಿನಗಳ ಶೋಕಾಚರಣೆ ಘೋಷಿಸಿದೆ. ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲು ಸೂಚಿಸಲಾಗಿದೆ. ಈಗಾಗಲೇ ಕೆಲವು ರಾಜ್ಯಗಳು ಒಂದು ದಿನ ರಜೆಯನ್ನೂ ಘೋಷಿಸಿದೆ. ಕರ್ನಾಟಕ, ಹೊಸದಿಲ್ಲಿ, ಉತ್ತರಾಖಂಡ, ತಮಿಳುನಾಡಿನಲ್ಲಿ ರಜೆ ಘೋಷಣೆ ಮಾಡಲಾಗಿದೆ.


ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿಯವರಿಗೆ ಕಳೆದೆರಡು ದಿನಗಳಿಂದ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಿಲ್ಲಿಯಲ್ಲಿ ಅವರು ದಾಖಲಾಗಿದ್ದ ಆಸ್ಪತ್ರೆಗೆ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.



ವಾಜಪೇಯಿ 1996 ರಲ್ಲಿ 13 ದಿನ ಹಾಗೂ 1998 ರಿಂದ 2004ವರೆಗೆ (11 ತಿಂಗಳು ಹಾಗೂ ಪೂರ್ಣಾವಧಿ) ಪ್ರಧಾನಿಯಾಗಿ ಈ ದೇಶವನ್ನು ಮುನ್ನಡೆಸಿದ್ದು, ನವ ಭಾರತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಂತಹ ಆಡಳಿತವನ್ನು ನೀಡಿದ್ದರು. ಅಂದಿನ ಜನಸಂಘದಿಂದಲೇ ನಾಯಕನಾಗಿ ಗುರುತಿಸಿಕೊಂಡಿದ್ದ ವಾಜಪೇಯಿ, ಬಿಜೆಪಿಯ ಸ್ಥಾಪನೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಮೊರಾರ್ಜಿ ದೇಸಾಯಿ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿಯೂ ತಮ್ಮ ಛಾಪು ಬೀರಿದ್ದರು. [ ಭಾರತೀಯ ರಾಜಕೀಯ ರಂಗದ 'ಭಾರತ ರತ್ನ']



ಬುಧವಾರ ಸಂಜೆ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ, ಜೀವರಕ್ಷಣಾ ವ್ಯವಸ್ಥೆ (ಲೈಫ್ ಸಪೋರ್ಟ್) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಗುರುವಾರ ಬೆಳಗ್ಗೆಯೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ


ವಾಜಪೇಯಿ ಅನಾರೋಗ್ಯದ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ ಬುಧವಾರ ಸಂಜೆಯೇ 7.30ಕ್ಕೆ ಏಮ್ಸ್‌ಗೆ ಆಗಮಿಸಿ, ಅವರ ಆರೋಗ್ಯ ಪರಿಸ್ಥಿತಿಯ ಮಾಹಿತಿ ಪಡೆದಿದ್ದರು. [ ವಾಜಪೇಯಿ ಅವರ ಪ್ರಸಿದ್ಧ ಕವನಗಳು: ವೀಡಿಯೋ]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ