ಆ್ಯಪ್ನಗರ

ಆಂಧ್ರಪ್ರದೇಶಕ್ಕೆ ನಾಲ್ಕು ರಾಜಧಾನಿ?

ಇತ್ತೀಚೆಗೆ ಟಿಡಿಪಿ ತೊರೆದು ಬಿಜೆಪಿ ಸೇರಿರುವ ರಾಜ್ಯಸಭಾ ಸದಸ್ಯ ಟಿ.ಜಿ.ವೆಂಕಟೇಶ್‌ ಅವರ ಮೂಲಕ ಜಗನ್‌ ತಮ್ಮ ಯೋಜನೆಯನ್ನು ಬಿಜೆಪಿ ವರಿಷ್ಠರಿಗೆ ತಲುಪಿಸಿದ್ದಾರೆ.

PTI 27 Aug 2019, 5:00 am
ತಿರುಪತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ರಾಜ್ಯದ ನಾಲ್ಕು ವಲಯಗಳಲ್ಲಿ ನಾಲ್ಕು ರಾಜಧಾನಿಗಳನ್ನು ನಿರ್ಮಿಸುವ ಬಯಕೆ ಹೊಂದಿದ್ದಾರೆ. ಅಲ್ಲಿಗೆ, ತಮ್ಮ ಕನಸಿನ ಅಮರಾವತಿ ಯೋಜನೆಯನ್ನು ಹೊಸ ಸಿಎಂ ಕೈ ಬಿಡುತ್ತಾರೆ ಎಂಬ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಪಾರ್ಟಿ ವರಿಷ್ಠ ಎನ್‌.ಚಂದ್ರಬಾಬು ನಾಯ್ಡು ಅವರ ಆತಂಕ ನಿಜವಾಗಿದೆ.
Vijaya Karnataka Web 193111-jaganmohan-reddy


ಇತ್ತೀಚೆಗೆ ಟಿಡಿಪಿ ತೊರೆದು ಬಿಜೆಪಿ ಸೇರಿರುವ ರಾಜ್ಯಸಭಾ ಸದಸ್ಯ ಟಿ.ಜಿ.ವೆಂಕಟೇಶ್‌ ಅವರ ಮೂಲಕ ಜಗನ್‌ ತಮ್ಮ ಯೋಜನೆಯನ್ನು ಬಿಜೆಪಿ ವರಿಷ್ಠರಿಗೆ ತಲುಪಿಸಿದ್ದಾರೆ. ಬಿಜೆಪಿ ಹಾಗೂ ಕೇಂದ್ರ ಸರಕಾರದಿಂದ ಅಗತ್ಯ ನೆರವು ಸಿಗಲಿದೆ ಎಂಬ ವಿಶ್ವಾಸವನ್ನೂ ಅವರು ಹೊಂದಿದ್ದಾರೆ. ಈ ಸಂಬಂಧ ಸದ್ಯದಲ್ಲಿಯೇ ಅವರು ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಿದ್ದಾರೆ.

ಅಮರಾವತಿಯನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸುವುದನ್ನು ಜಗನ್‌ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದೆ. ರಾಜಧಾನಿಗಾಗಿ 33,000 ಎಕರೆ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡು ಫಲವತ್ತಾದ ಕೃಷ್ಣಾ ಜಲಾನಯನ ಪ್ರದೇಶವನ್ನು ಕಾಂಕ್ರೀಟ್‌ ಕಾಡನ್ನಾಗಿ ಪರಿವರ್ತಿಸುವುದು ಸರಿಯಲ್ಲ ಎನ್ನುವುದು ಪಕ್ಷದ ನಿಲುವಾಗಿತ್ತು. ಇದಲ್ಲದೇ ಟಿಡಿಪಿ ಸರಕಾರದ ಅವಧಿಯಲ್ಲಿ ಭೂಸ್ವಾಧೀನ, ಕಾಮಗಾರಿ ಗುತ್ತಿಗೆ ನೀಡುವಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದೂ ಪಕ್ಷ ಆರೋಪಿಸಿತ್ತು. ಅಮರಾವತಿ ನಿರ್ಮಾಣಕ್ಕಾಗಿ 1 ಲಕ್ಷ ಕೋಟಿ ರೂ. ಯೋಜನೆ ಸಿದ್ಧವಾಗಿದ್ದು, ಆ ಪೈಕಿ ಹಿಂದಿನ ಸರಕಾರ ಸುಮಾರು 38,000 ಕೋಟಿ ರೂ. ಖರ್ಚು ಮಾಡಿದೆ. ಮತ್ತಷ್ಟು ಹಣ ವ್ಯಯಿಸುವ ಬದಲು ಅದೇ ಮೊತ್ತದಲ್ಲಿ ಜನರಿಗೆ ತಾವು ನೀಡಿರುವ ಭರವಸೆಗಳನ್ನು ಈಡೇರಿಸಬಹುದು ಎನ್ನುವುದು ಜಗನ್‌ ಲೆಕ್ಕಾಚಾರವಾಗಿದೆ.

ಅಮರಾವತಿಗಾಗಿ 500 ದಶಲಕ್ಷ ಡಾಲರ್‌ ಸಾಲ ನೀಡುವ ಪ್ರಸ್ತಾವದಿಂದ ವಿಶ್ವ ಬ್ಯಾಂಕ್‌ ಮತ್ತು ಏಷ್ಯನ್‌ ಇನ್ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ಗಳು ಹಿಂದೆ ಸರಿದಿವೆ. ರಾಜ್ಯದ ಸಚಿವ ಬೊತ್ಸಾ ಸತ್ಯನಾರಾಯಣ ಆವರು ಕೆಲದಿನಗಳ ಹಿಂದೆ, ''ಅಮರಾವತಿ ಪ್ರವಾಹದ ಅಪಾಯ ಎದುರಿಸುವ ಪ್ರದೇಶದಲ್ಲಿದೆ,'' ಎನ್ನುವ ಮೂಲಕ ಅಮರಾವತಿ ಯೋಜನೆ ಕೈ ಬಿಡುವ ಸುಳಿವು ನೀಡಿದ್ದರು.

ವಲಯವಾರು ರಾಜಧಾನಿಗಳು
ಉತ್ತರ ಕರಾವಳಿ: ವಿಜಯನಗರಂ
ದಕ್ಷಿಣ ಕರಾವಳಿ: ಗುಂಟೂರು
ಗೋದಾವರಿ ಜಿಲ್ಲೆಗಳು: ಕಾಕಿನಾಡ
ರಾಯಲಸೀಮಾ: ಕಡಪಾ

ಅಧಿಕಾರ ವಿಕೇಂದ್ರೀಕರಣ
ಒಬ್ಬ ಉಪ ಮುಖ್ಯಮಂತ್ರಿಗೆ ಒಂದು ರಾಜಧಾನಿಯ ಹೊಣೆ ವಹಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡುವುದು ಜಗನ್‌ ಯೋಚನೆ. ಆಂಧ್ರಪ್ರದೇಶದಲ್ಲಿ ಸದ್ಯ ಐವರು ಉಪ ಮುಖ್ಯಮಂತ್ರಿಗಳಿದ್ದಾರೆ.

ಅಮರಾವತಿಯ ಕಥೆ
33,000 ಎಕರೆ: ಭೂಸ್ವಾಧೀನಕ್ಕೆ ನಿರ್ಧರಿಸಿದ್ದ ಟಿಡಿಪಿ ಸರಕಾರ
28,000 ಎಕರೆ: ಈವರೆಗೆ ನಡೆದಿರುವ ಭೂಸ್ವಾಧೀನ
1 ಲಕ್ಷ ಕೋಟಿ ರೂ.: ಅಮರಾವತಿ ನಿರ್ಮಾಣದ ಅಂದಾಜು ವೆಚ್ಚ
38,000 ಕೋಟಿ ರೂ.: ಈವರೆಗೆ ಆಗಿರುವ ವೆಚ್ಚ
800 ಕೋಟಿ ರೂ.: ಆಂಧ್ರಪ್ರದೇಶ ಸಚಿವಾಲಯ ನಿರ್ಮಾಣಕ್ಕೆ ನಿಗದಿಪಡಿಸಿರುವ ವೆಚ್ಚ

ಆಂಧ್ರದ ಹಣಕಾಸು ಸ್ಥಿತಿಗತಿ
2.59 ಲಕ್ಷ ಕೋಟಿ ರೂ.: ರಾಜ್ಯದ ಸಾಲ
40,000 ಕೋಟಿ ರೂ.: ಪ್ರತಿ ವರ್ಷ ಸಾಲ ನಿರ್ವಹಣೆಗೆ ಮಾಡುತ್ತಿರುವ ವೆಚ್ಚ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ