ಆ್ಯಪ್ನಗರ

ಸೋಷಿಯಲ್‌ ಮಿಡಿಯಾ ಖಾತೆಗಳಿಗೂ ಆಧಾರ್‌ ಜೋಡಣೆ ಕಡ್ಡಾಯ?

ಮದ್ರಾಸ್‌, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹಸ್ತಾಂತರಿಸಿಕೊಂಡು ಅವುಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

PTI 21 Aug 2019, 5:00 am
ಹೊಸದಿಲ್ಲಿ: ರಾಷ್ಟ್ರೀಯ ಹಿತಾಸಕ್ತಿಯಿಂದ ಸಾಮಾಜಿಕ ಜಾಲತಾಣಗಳ ಬಳಕೆದಾರರ ಪ್ರೊಫೈಲ್‌ಗಳ ಜತೆಗೆ ಆಧಾರ್‌ ಸಂಖ್ಯೆ ಜೋಡಿಸುವುದು ಅಗತ್ಯ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Vijaya Karnataka Web facebook


ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯಾಗುತ್ತಿದೆ. ಇದರ ಜತೆಗೆ ಹಿಂಸೆಗೆ ಪ್ರಚೋದನೆ, ನೀಲಿ ಚಿತ್ರ ಹಾಗೂ ಅಶ್ಲೀಲ ಸಂದೇಶಗಳ ಪ್ರಸರಣ ಮೊದಲಾದವುಗಳಿಗೂ ಇದು ಬಳಕೆಯಾಗುತ್ತಿದೆ. ಹೀಗಾಗಿ ಅವಕ್ಕೆ ಕಡಿವಾಣ ಹಾಕಲು ಆಧಾರ್‌ ಜೋಡಣೆ ಕಡ್ಡಾಯ ಎಂದು ಸೈಬರ್‌ಕ್ರೈಮ್‌ ವಿಭಾಗದ ಹಿರಿಯ ಕಾನೂನು ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದೇ ಪ್ರಕರಣದ ವಿಚಾರಣೆ ವೇಳೆ ತಮಿಳುನಾಡು ಸರಕಾರದ ಪರ ವಾದಿಸಿದ ಅಟಾರ್ಜಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಸಹ ಆಧಾರ್‌ ಜೋಡಣೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಿಐಎಲ್‌ಗಳ ಸಲ್ಲಿಕೆ: ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡುವಂತಹ ನಕಲಿ ಸುದ್ದಿ , ಮಾನಹಾನಿಕರ ಹೇಳಿಕೆಗಳು, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಅಶ್ಲೀಲ ವಿಷಯಗಳ ಪ್ರಸರಣ ತಡೆಯಲು ಹಾಗೂ ಉಗ್ರ ಕೃತ್ಯಗಳ ಮೇಲೆ ನಿಗಾ ಇರಿಸಲು ಸಾಮಾಜಿಕ ಬಳಕೆದಾರರ ಪೊ›ಫೈಲ್‌ಗಳನ್ನು ಆಧಾರ್‌ ಸಂಖ್ಯೆಗಳೊಂದಿಗೆ ಸಂಪರ್ಕಿಸುವ ಅಗತ್ಯವಿದೆ ಎಂದು ಆ್ಯಂಟನಿ ಕ್ಲಮೆನ್‌ ರುಬಿನ್‌ ಎಂಬುವರು ಕಳೆದ ಜುಲೈನಲ್ಲಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಾಂಬೆ ಹಾಗೂ ಮಧ್ಯ ಪ್ರದೇಶ ಹೈಕೋರ್ಟ್‌ನಲ್ಲೂ ಇದೇ ರೀತಿಯ ಅರ್ಜಿಗಳು ನಂತರದಲ್ಲಿ ಸಲ್ಲಿಕೆಯಾಗಿವೆ. ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ತರಿಸಿಕೊಂಡು ವಿಚಾರಣೆ ನಡೆಸಬೇಕೆಂದು ಫೇಸ್‌ಬುಕ್‌ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದೆ.

ಮದ್ರಾಸ್‌, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹಸ್ತಾಂತರಿಸಿಕೊಂಡು ಅವುಗಳ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದ ಸುಪ್ರೀಂ ಕೋರ್ಟ್‌, ಸೆ. 13ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೋರಿ ಕೇಂದ್ರ ಸರಕಾರ, ಗೂಗಲ್‌, ಟ್ವಿಟರ್‌ ಹಾಗೂ ಯುಟ್ಯೂಬ್‌ಗಳಿಗೆ ನೋಟಿಸ್‌ ಜಾರಿಗೊಳಿಸಿದೆ. ಇದೇವೇಳೆ, ''ವಿಚಾರಣೆ ಮುಂದುವರಿಸಬಹುದು, ಆದರೆ ಅಂತಿಮ ಆದೇಶ ನೀಡುವಂತಿಲ್ಲ,'' ಎಂದು ಮದ್ರಾಸ್‌ ಹೈಕೋರ್ಟ್‌ಗೆ ನ್ಯಾಯಮೂರ್ತಿ ದೀಪಕ್‌ ಗುಪ್ತಾ ಅವರ ಪೀಠ ನಿರ್ದೇಶನ ನೀಡಿತು.

ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ: ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಪರ ಕ್ರಮವಾಗಿ ವಕೀಲ ಮುಕುಲ್‌ ರೋಹಟಗಿ ಹಾಗೂ ಕಪಿಲ್‌ ಸಿಬಲ್‌ ವಾದ ಮಂಡಿಸಿದ್ದು, ''ಸೋಷಿಯಲ್‌ ಮಿಡಿಯಾ ಬಳಕೆದಾರರ ಪ್ರೊಫೈಲ್‌ಗಳಿಗೆ ಆಧಾರ್‌ ಲಿಂಕ್‌ ಮಾಡುವ ವಿಚಾರದಲ್ಲಿ ವ್ಯಕ್ತಿಯ ಖಾಸಗಿತನ ಹಕ್ಕಿನ ವಿಚಾರ ಪ್ರಮುಖವಾಗುತ್ತದೆ. ಒಂದೇ ವಿಷಯದ ಕುರಿತ ಅರ್ಜಿಗಳನ್ನು ಮೂರು ಹೈಕೋರ್ಟ್‌ಗಳು ವಿಚಾರಣೆ ನಡೆಸಿ ಭಿನ್ನ ತೀರ್ಪು ನೀಡಿದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಹಾಗಾಗಿ ಸುಪ್ರೀಂ ಕೋರ್ಟೆ ಈ ವಿಷಯವನ್ನು ನಿರ್ಧರಿಸಲಿ,'' ಎಂದು ಪ್ರತಿಪಾದಿಸಿದರು.''ಕ್ರಿಮಿನಲ್‌ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳೊಂದಿಗೆ ಸೋಷಿಯಲ್‌ ಮಿಡಿಯಾದಲ್ಲಿನ ಡೇಟಾ ಹಂಚಿಕೊಳ್ಳುವಂತೆ ಸರ್ವಿಸ್‌ ಪ್ರೊವೈಡರ್‌ಗಳಿಗೆ ಮನವಿ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಗೊಂದಲವನ್ನು ಸುಪ್ರೀಂ ಕೋರ್ಟೇ ನಿರ್ಧರಿಸಬೇಕು,'' ಎಂದೂ ಹೇಳಿದರು.
-------
31.36 ಕೋಟಿ
ಭಾರತದಲ್ಲಿ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ

40 ಕೋಟಿ
ಭಾರತದಲ್ಲಿ ವ್ಯಾಟ್ಸ್‌ಆ್ಯಪ್‌ ಬಳಕೆದಾರರ ಸಂಖ್ಯೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ