ಆ್ಯಪ್ನಗರ

'ಕೈ'ಯಿಂದ ಹಿಮಾಚಲ ಕಸಿದುಕೊಂಡ ಬಿಜೆಪಿ; ಗುಜರಾತಿನಲ್ಲಿ 6ನೇ ಬಾರಿ ಕಮಲ

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರವೇ ಫಲಿತಾಂಶಗಳೂ ಹೊರಬಿದ್ದಿದ್ದು, ಬಿಜೆಪಿಯು ಗುಜರಾತ್‌ನಲ್ಲಿ 6ನೇ ಬಾರಿ ಅಧಿಕಾರ ಉಳಿಸಿಕೊಂಡಿದ್ದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ಇಳಿಸಿ ಗದ್ದುಗೆಯೇರುವ ಮೂಲಕ 'ಕಾಂಗ್ರೆಸ್-ಮುಕ್ತ' ಭಾರತದ ತನ್ನ ಗುರಿಯಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ.

Vijaya Karnataka Web 18 Dec 2017, 6:16 pm
ಹೊಸದಿಲ್ಲಿ: ಚುನಾವಣೋತ್ತರ ಸಮೀಕ್ಷೆಗಳಿಗೆ ಸಮೀಪವೇ ಫಲಿತಾಂಶಗಳೂ ಹೊರಬಿದ್ದಿವೆ. ಜಿಎಸ್‌ಟಿ ಕುರಿತ ಚಿಂತೆಗಳು, ಹೊಸ ಹುರುಪಿನಿಂದ ಹೋರಾಡಿದ ಕಾಂಗ್ರೆಸ್ ಅಲೆ ಮತ್ತು ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತ ಬಿಜೆಪಿಯು ಗುಜರಾತ್‌ನಲ್ಲಿ 6ನೇ ಬಾರಿ ಅಧಿಕಾರ ಉಳಿಸಿಕೊಂಡಿದ್ದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ಇಳಿಸಿ ಗದ್ದುಗೆಯೇರುವ ಮೂಲಕ 'ಕಾಂಗ್ರೆಸ್-ಮುಕ್ತ' ಭಾರತ ಮಾಡುವ ತನ್ನ ಸ್ಲೋಗನ್ ಅನ್ನು ಈಡೇರಿಸುವ ಗುರಿಯಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ. ಅಂತಿಮ ಫಲಿತಾಂಶ ಇನ್ನಷ್ಟೇ ತಿಳಿಯಬೇಕಿದ್ದು, ಗುಜರಾತಿನಲ್ಲಿ ಬಿಜೆಪಿ 100ರ ಗಡಿ ದಾಟಲು ಕಷ್ಟಪಟ್ಟಿದ್ದರೆ, ಹಿಮಾಚಲದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.
Vijaya Karnataka Web gujarat himachal pradesh assembly results 2017 bjp big win
'ಕೈ'ಯಿಂದ ಹಿಮಾಚಲ ಕಸಿದುಕೊಂಡ ಬಿಜೆಪಿ; ಗುಜರಾತಿನಲ್ಲಿ 6ನೇ ಬಾರಿ ಕಮಲ


ಸೋಮವಾರ ಪ್ರಕಟಗೊಂಡ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2017ರ ಫಲಿತಾಂಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಮತ್ತೆ ಕೆಲಸ ಮಾಡಿದೆ. ಇದೀಗ ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗಳಿಗೂ ಇದು ದಿಕ್ಸೂಚಿಯಾಗಲಿದೆಯೇ ಎಂಬ ವಿಷಯದ ಚರ್ಚೆ ಆರಂಭವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಫಲಿತಾಂಶ (ಗೆಲುವು + ಮುನ್ನಡೆ) ಹೀಗಿದೆ:

ಪಕ್ಷ ಗುಜರಾತ್ ಹಿಮಾಚಲ
ಬಿಜೆಪಿ 99 44
ಕಾಂಗ್ರೆಸ್ 79 21
ಇತರರು 4 3


ಈ ಗೆಲುವಿನೊಂದಿಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ದೇಶದೆಲ್ಲೆಡೆ ಮುಗಿಲು ಮುಟ್ಟಿದೆ. ಪಟಾಕಿ ಸಿಡಿಸಿ, ರೋಡ್ ಶೋ ನಡೆಸಿ ಬಿಜೆಪಿ ಕಾರ್ಯಕರ್ತರು ದೇಶದ ವಿವಿಧೆಡೆ ಸಂಭ್ರಮಿಸುತ್ತಿದ್ದಾರೆ.

ಗುಜರಾತ್ ವಿಧಾನಸಭೆಯ 2012ರ ಚುನಾವಣಾ ಫಲಿತಾಂಶದ ಪ್ರಕಾರ, ಬಿಜೆಪಿ - 115, ಕಾಂಗ್ರೆಸ್ - 61, ಗುಜರಾತ್ ಪರಿವರ್ತನ್ ಪಾರ್ಟಿ - 2, ಎನ್‌ಸಿಪಿ -2, ಜೆಡಿಯು - 1, ಸ್ವತಂತ್ರ - 1 ಸ್ಥಾನಗಳಲ್ಲಿ ವಿಜೇತರಾಗಿದ್ದರು. ಆ ಬಳಿಕ ನಡೆದ ರಾಜಕೀಯ ವಿದ್ಯಮಾನಗಳು, ಮರು ಚುನಾವಣೆಗಳ ಬಳಿಕ ಬಿಜೆಪಿ 120 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 43ಕ್ಕೆ ಇಳಿಕೆಯಾಗಿತ್ತು. 15 ಕ್ಷೇತ್ರಗಳು ಖಾಲಿ ಬಿದ್ದಿದ್ದವು.

ಇತ್ತೀಚಿನ ವಿದ್ಯಮಾನದ ಪ್ರಕಾರ, ಗುಜರಾತ್‌ನ 100 ಸ್ಥಾನಗಳಲ್ಲಿ ಬಿಜೆಪಿ, 80 ಸ್ಥಾನಗಳಲ್ಲಿ ಕಾಂಗ್ರೆಸ್, ಇತರರು 4 ಕಡೆ ಮುನ್ನಡೆಯಲ್ಲಿದ್ದರೆ, ಹಿಮಾಚಲ ಪ್ರದೇಶದಲ್ಲಿ 43ರಲ್ಲಿ ಬಿಜೆಪಿ, 21ರಲ್ಲಿ ಕಾಂಗ್ರೆಸ್ ಹಾಗೂ 4 ಸ್ಥಾನಗಳಲ್ಲಿ ಸ್ವತಂತ್ರರು ಮುನ್ನಡೆಯಲ್ಲಿದ್ದಾರೆ.

ಗುಜರಾತಿನಲ್ಲಿ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಬರೇ ಕಾಗದದ ಹುಲಿ ಎಂಬುದು ಸಾಬೀತಾಗಿದ್ದು, ಅವರ ರ‍್ಯಾಲಿಗಳಿಗೆ ಹಾಜರಾದ ಜನರೆಲ್ಲರೂ ಓಟುಗಳಾಗಿ ಪರಿವರ್ತನೆಗೊಳ್ಳಲಿಲ್ಲ. ಫಲಿತಾಂಶ ಬರಲಾರಂಭಿಸಿರುವಂತೆಯೇ ಹಾರ್ದಿಕ್ ಪಟೇಲ್ ಅವರು ನಾಪತ್ತೆಯಾಗಿದ್ದರು. ಟ್ವಿಟರ್, ಫೇಸ್‌ಬುಕ್‌ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

182 ಸ್ಥಾನಗಳುಳ್ಳ ಗುಜರಾತ್ ಅಸೆಂಬ್ಲಿಯಲ್ಲಿ ಸರಕಾರ ರಚನೆಗೆ ಬೇಕಾಗಿರುವುದು 92 ಸ್ಥಾನ. ಇದೀಗ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ.

ಗುಜರಾತ್, ಹಿಮಾಚಲ ಫಲಿತಾಂಶದ ತಾಜಾ ಅಪ್‌ಡೇಟ್ಸ್
ಕಾಂಗ್ರೆಸ್ ಕೈ ತಪ್ಪಿತು ಮತ್ತೊಂದು ರಾಜ್ಯ
ಗುಜರಾತಿನಲ್ಲಿ ರಾಹುಲ್ ಪರಿಣಾಮದಿಂದ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ ಎಂದ ಸಿಎಂ

68 ಸ್ಥಾನಗಳುಳ್ಳ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. 27 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯ ಸಂಖ್ಯೆ ಏರಿಕೆಯಾಗಿದ್ದರೆ, 36 ಸ್ಥಾನ ಹೊಂದಿದ್ದ ಕಾಂಗ್ರೆಸ್, ಈ ಬಾರಿ ಅಧಿಕಾರ ಕಳೆದುಕೊಂಡಿದೆ. ಕಳೆದ ಚುನಾವಣೆಗಳಲ್ಲಿ 5 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದರು.

ಈ ಫಲಿತಾಂಶವು ಎರಡೂ ರಾಜ್ಯಗಳಲ್ಲಿ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿದ್ದ ನೂತನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಲುದೊಡ್ಡ ಹಿನ್ನಡೆಯೆಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಯ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿಯ ಮುಂದಿನ ಗುರಿ ಕರ್ನಾಟಕ. ಇಲ್ಲಿ ಅವರ ಆಟ ನಡೆಯುವುದಿಲ್ಲ, ಎಲೆಕ್ಟ್ರಾನಿಕ್ ಮತ ಯಂತ್ರಗಳ ಕರಾಮತ್ತು ಇದು ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಧ್ವನಿಯೆತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ