ಆ್ಯಪ್ನಗರ

ದೇಶಾದ್ಯಂತ ಮುಂದುವರಿದ ವರುಣನ ಆರ್ಭಟ

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಮಳೆಯಿಂದ ಸಿಲುಕಿಕೊಂಡಿದ್ದ 10 ಸಾವಿರ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದೆ.

PTI 7 Aug 2019, 5:00 am
ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರ, ದಿಲ್ಲಿ, ಗೋವಾ, ಕೇರಳ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇನ್ನೂ ಒಂದೆರಡು ದಿನ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
Vijaya Karnataka Web rain

ದಿಲ್ಲಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸುರಿದ ಮಳೆಗೆ ಸಂಸತ್‌ ಭವನ, ರೋಹ್ಟಕ್‌ ರೋಡ್‌, ತೀಸ್‌ ಹಜಾರಿ ಕೋರ್ಟ್‌, ಖೈಬರ್‌ ಪಾಸ್‌, ನಿಗಮ್‌ ಬೋಧ್‌ ಘಾಟ್‌, ಕೇಲಾ ಘಾಟ್‌ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಕೆರೆಯಂತಾಗಿದ್ದವು. ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ಸಂಸತ್‌ ಭವನದ ಮುಂಭಾಗ ಕಾರು ಪಾರ್ಕಿಂಗ್‌ ಮಾಡಲು ಜನಪ್ರತಿನಿಧಿಗಳು ಹರಸಾಹಸ ಪಟ್ಟರು. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲವೇ ಗಂಟೆಗಳಲ್ಲಿ 38 .5 ಮಿ.ಮೀ ಮಳೆ ಯಾಗಿದೆ.
3 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌: ಕೇರಳದಲ್ಲಿ ಮುಂಗಾರು ಆರ್ಭಟ ಮುಂದುವರಿದಿದ್ದು ಮುಂದಿನ 24 ಗಂಟೆಗಳಲ್ಲಿ ಇಡುಕ್ಕಿ, ಮಲಪ್ಪುರಂ ಮತ್ತು ಕೊಯಿಕ್ಕೋಡ್‌ ಜಿಲ್ಲೆಗಳಲ್ಲಿ 240 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತ್ರಿವಳಿ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.
10 ಸಾವಿರ ಜನರ ರಕ್ಷಣೆ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಮಳೆಯಿಂದ ಸಿಲುಕಿಕೊಂಡಿದ್ದ 10 ಸಾವಿರ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದೆ. ಬೆಳಗಾವಿ-ಕೊಲ್ಲಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. ಮುಲಾ, ಮುಥಾ ಹಾಗೂ ಪಾವನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪುಣೆ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಸೇತುವೆಗಳಲ್ಲಿ ಸಂಚಾರ ಬಂದ್‌ ಮಾಡಲಾಗಿದೆ ಎಂದು ಪುಣೆ ಮಹಾನಗರ ಪಾಲಿಕೆ ತಿಳಿಸಿದೆ. ಬಹುತೇಕ ಅಣೆಕಟ್ಟೆಗಳು ಭರ್ತಿಯಾಗಿದ್ದು, ಮುಂದಿನ 72 ಗಂಟೆಗಳಲ್ಲಿ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಗೋವಾದಲ್ಲೂ ಅಬ್ಬರ: ಕುಂಭದ್ರೋಣ ಮಳೆಗೆ ಮಾಂಡೋವಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಉತ್ತರ ಗೋವಾದಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಸತ್ತಾರಿ ಸೇರಿ ಹಲವು ಜಿಲ್ಲೆಗಳ ಗ್ರಾಮಗಳು ಜಲಾವೃತ್ತಗೊಂಡಿವೆ. ಪಿಲಾಗೊ ಎಂಬ ಗ್ರಾಮದಲ್ಲಿ ಮಳೆ ಸಿಲುಕಿದ್ದ 10 ಜನರನ್ನು ರಕ್ಷಿಸಲಾಗಿದೆ. ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಂಗಳವಾರ ಉತ್ತರ ಗೋವಾದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ಮೂಲಗಳು ಹೇಳಿವೆ. ಮೀನುಗಾರಿಕೆಗೆ ತೆರಳದಂತೆ ಬೆಸ್ತರಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ