ಆ್ಯಪ್ನಗರ

ಪಾಕ್‌ ಗಸ್ತು ವಿಮಾನಗಳ ಕಣ್ಣಿಗೆ ಮಣ್ಣೆರಚಿದ ಐಎಎಫ್‌ ಮಾಯಾ ತಂತ್ರ

'ಸುಖೋಯ್‌-30ಎಂಕೆಐಗಳು ಬಹವಾಲ್‌ಪುರದ ಕಡೆಗೆ ಸಾಗುವ ನಕಲಿ ಕಾರ್ಯಾಚರಣೆಗಾಗಿ ಪಂಜಾಬ್‌ನಿಂದ ಆಗಸಕ್ಕೆ ಚಿಮ್ಮಿದವು. ಈ ರೀತಿ ನಕಲಿ ವ್ಯೂಹ ರಚನೆಯ ಮೂಲಕ ಪಾಕ್‌ ಗಸ್ತು ವಿಮಾನಗಳ ಗಮನವನ್ನು ಬೇರೆಡೆ ಸೆಳೆಯಲಾಯಿತು' ಎಂದು ಮೂಲವೊಂದು ತಿಳಿಸಿದೆ.

Vijaya Karnataka Web 3 Mar 2019, 9:48 am
ಹೊಸದಿಲ್ಲಿ: ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುವ ವೇಳೆ ಭಾರತೀಯ ವಾಯುಪಡೆ ಪಾಕಿಸ್ತಾನಿ ಗಸ್ತು ವಿಮಾನಗಳ ಕಣ್ಣಿಗೆ ಮಣ್ಣೆರಚಲು ವಿಶೇಷ ತಂತ್ರ ಬಳಸಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಜೈಷೆ ಮೊಹಮ್ಮದ್ ಪ್ರಧಾನ ಕೇಂದ್ರದ ಮೇಲೆ ದಾಳಿಗೆ ಭಾರತೀಯ ವಿಮಾನಗಳು ಹೊರಟಿರುವಂತೆ ಬಿಂಬಿಸುತ್ತ ಪಾಕ್ ಗಮನವನ್ನು ಬೇರೆಡೆ ಸೆಳೆಯಲಾಯಿತು. ಬಳಿಕ ನೈಜ ಗುರಿಯಾದ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಬಾಲಾಕೋಟ್‌ ಉಗ್ರ ನೆಲೆಗಳ ಮೇಲೆ ಫೆಬ್ರವರಿ 26ರ ಬೆಳಗಿನ ಜಾವ ಏಕಾಏಕಿ ದಾಳಿ ನಡೆಸಲಾಯಿತು.
Vijaya Karnataka Web Balakot area


ಮಿರಾಜ್‌ 2000 ವಿಮಾನಗಳು, ಸುಖೋಯ್ -30ಎಂಕೆಐಗಳು, ಐಎಲ್‌-78 ಆಗಸದಲ್ಲೇ ಇಂದನ ತುಂಬುವ ವಿಮಾನಗಳು ಮತ್ತು ಅವಾಕ್ಸ್‌ (ಏರ್‌ಬೋರ್ನ್‌ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಂ) ವಿಮಾನಗಳ ಹೊರತಾಗಿ ಹೆಚ್ಚುವರಿ ಯುದ್ಧ ವಿಮಾನಗಳನ್ನು ಗ್ವಾಲಿಯರ್‌, ಆಗ್ರಾ ಮತ್ತು ಬರೇಲಿಯಲ್ಲಿ ಸಜ್ಜುಗೊಳಿಸಲಾಗಿತ್ತು. ಮುಜಾಫರಾಬಾದ್‌ ಸೆಕ್ಟರ್‌ನಲ್ಲಿ ಎಲ್‌ಓಸಿ ಮೇಲೆ ದಾಳಿ ನಡೆಸಲಾಗುತ್ತಿದೆ ಎಂಬ ಭಾವನೆ ಮೂಡುವಂತೆ ನಡೆದುಕೊಳ್ಳಲಾಗಿತ್ತು.

'ಸುಖೋಯ್‌-30ಎಂಕೆಐಗಳು ಬಹವಾಲ್‌ಪುರದ ಕಡೆಗೆ ಸಾಗುವ ನಕಲಿ ಕಾರ್ಯಾಚರಣೆಗಾಗಿ ಪಂಜಾಬ್‌ನಿಂದ ಆಗಸಕ್ಕೆ ಚಿಮ್ಮಿದವು. ಈ ರೀತಿ ನಕಲಿ ವ್ಯೂಹ ರಚನೆಯ ಮೂಲಕ ಪಾಕ್‌ ಗಸ್ತು ವಿಮಾನಗಳ ಗಮನವನ್ನು ಬೇರೆಡೆ ಸೆಳೆಯಲಾಯಿತು' ಎಂದು ಮೂಲವೊಂದು ತಿಳಿಸಿದೆ.

'ನೈಜ ಸರ್ಜಿಕಲ್ ದಾಳಿಯ ಗುರಿಯಿದ್ದ ಪ್ರದೇಶದಲ್ಲಿ ಎಲ್ಲೂ ಪಾಕ್‌ ಯುದ್ಧ ವಿಮಾನಗಳು ಗಸ್ತು ನಡೆಸುತ್ತಿರಲಿಲ್ಲ. ಅತ್ಯಂತ ಹತ್ತಿರವೆನ್ನಬಹುದಾದ ಗಸ್ತು ವಿಮಾನವೂ 150 ಕಿ.ಮೀ ದೂರದಲ್ಲಿತ್ತು. ಭಾರತೀಯ ವಾಯುಪಡೆ ವಿಮಾನಗಳು ತರಾತುರಿಯಿಂದ ಬಾಂಬ್‌ಗಳನ್ನು ಉದುರಿಸಿ ಹೋದವು ಎಂಬ ಪಾಕ್ ಹೇಳಿಕೆ ಮುಖ ಉಳಿಸಿಕೊಳ್ಳುವ ತಂತ್ರ ಅಷ್ಟೆ. ಫೆಬ್ರವರಿ 27ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಎಫ್‌-16 ವಿಮಾನ ಬಳಸಿಕೊಂಡಿಲ್ಲ ಎಂಬ ಅದರ ಸುಳ್ಳಿನ ಕಂತೆಯಷ್ಟೇ ಹಸಿ ಹಸಿ ಸುಳ್ಳು ಅಷ್ಟೆ' ಎಂದು ಮೂಲವೊಂದು ತಿಳಿಸಿದೆ.

'ಪಿಓಕೆಗಷ್ಟೇ ಸೀಮಿತವಾಗಿರದೆ, ಅದನ್ನೂ ದಾಟಿ ಪಾಕಿಸ್ತಾನದ ಒಳಕ್ಕೇ ನುಗ್ಗಿ ಭಾರತೀಯ ವಾಯುಪಡೆಗಳು ಉಗ್ರ ಸಂಹಾರ ಮಾಡಿ ಬಂದಿರುವುದು ತಾನೇ ಹಾಕಿಕೊಂಡ ಲಕ್ಷ್ಮಣ ರೇಖೆ ದಾಟಲು ಮುಕ್ತ ಅವಕಾಶವನ್ನು ತೆರೆದಿಟ್ಟಿದೆ. ಒಂದು ವೇಳೆ ಕಾರ್ಗಿಲ್‌ ಯುದ್ಧದ ಸಂದರ್ಭದಂತೆ ಈ ಬಾರಿಯೂ ಎಲ್‌ಓಸಿ ದಾಟದಂತೆ ನಿರ್ದೇಶನವಿದ್ದಿದ್ದರೆ, ದಾಳಿಗೆ ಬಳಸುವ ಆಯುಧಗಳು ಬೇರೆಯೇ ಇರುತ್ತಿದ್ದವು' ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ