ಆ್ಯಪ್ನಗರ

ದ್ವೇಷ ತೆಗೆಯಲು ಮೋದಿಯನ್ನು ಅಪ್ಪಿದೆ: ರಾಹುಲ್ ಗಾಂಧಿ

ಬಿಜೆಪಿಯ ದ್ವೇಷವನ್ನು ದ್ವೇಷದಿಂದಲೇ ಹೋರಾಡಲಾಗದು ಎಂಬ ಕಾರಣಕ್ಕಾಗಿ, ದ್ವೇಷ ನಿವಾರಿಸಲೆಂದು ಪ್ರಧಾನಿಯನ್ನು ಸಂಸತ್ತಿನೊಳಗೆ ಅಪ್ಪಿಕೊಂಡಿರುವುದಾಗಿ ರಾಹುಲ್ ಗಾಂಧಿ ಹೇಳಿದರು.

Vijaya Karnataka Web 14 Feb 2019, 5:20 pm
ಅಜ್ಮೇರ್: ಸಂಸತ್ತಿನಲ್ಲಿ ತಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವುದು 'ದ್ವೇಷವನ್ನು ತೆಗೆದುಹಾಕುವುದಕ್ಕಾಗಿ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸೇವಾ ದಳದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುತ್ತಿದ್ದ ರಾಹುಲ್, ಬಿಜೆಪಿಯವರು ತನ್ನನ್ನು, ತನ್ನ ಕುಟುಂಬದವರನ್ನು ಜರೆಯುತ್ತಿದೆ. ಆದರೆ, ತಾನು ಪ್ರಧಾನಿಯನ್ನು ಅಪ್ಪಿಕೊಂಡಿದ್ದೇನೆ. "ಬಿಜೆಪಿಯ ದ್ವೇಷವನ್ನು ದ್ವೇಷದಿಂದಲೇ ಎದುರಿಸಲಾಗದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಆ ದ್ವೇಷ ಭಾವನೆಯನ್ನು ತೆಗೆಯಲೆಂದು ನಾನು ಪ್ರಧಾನಿಗೆ ಹಗ್ ನೀಡಿದೆ" ಎಂದು ಹೇಳಿದರು.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ನೀಡಿದ ಅಪ್ಪುಗೆ ಮತ್ತು ನಂತರ ಕಣ್ಣು ಮಿಟುಕಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಲೋಕಸಭೆಯ ಅಧಿವೇಶನದ ಕೊನೆಯ ದಿನ ಪ್ರಸ್ತಾಪಿಸಿ ಕಾಲೆಳೆದಿದ್ದರು.


2014ರ ಮೊದಲು ಭಾರತವು 'ನಿದ್ರಿಸುತ್ತಿದ್ದ ದಿಗ್ಗಜ' ರಾಷ್ಟ್ರವಾಗಿತ್ತು ಎಂಬ ಪ್ರಧಾನಿ ಹೇಳಿಕೆಗೆ ಆಕ್ಷೇಪಿಸಿದ ರಾಹುಲ್ ಗಾಂಧಿ, ಮೋದಿ ಅವರು ಈ ಮೂಲಕ ಇಡೀ ದೇಶದ ಜನತೆಯನ್ನು ಅವಮಾನಿಸಿದ್ದಾರೆ ಎಂದರು. "ಪ್ರಧಾನಿ ಹೇಳಿಕೆಯ ಅರ್ಥ, ಪಂಡಿತ್ ನೆಹರು, ಡಾ.ಅಂಬೇಡ್ಕರ್, ನಮ್ಮ ರೈತರು, ಸಣ್ಣ ಉದ್ಯಮಿಗಳು ಅವರಿಗಿಂತ ಮೊದಲು ಏನನ್ನೂ ಮಾಡಿಲ್ಲ ಎಂಬಂತಿದೆ. ಹೀಗೆ ಹೇಳಿ ಅವರು ಕಾಂಗ್ರೆಸ್ಸನ್ನು ಅವಮಾನಿಸಿದ್ದಲ್ಲ, ಬದಲಾಗಿ ಇಡೀ ದೇಶದ ಜನರನ್ನೇ ಅವಮಾನಿಸಿದ್ದಾರೆ." ಎಂದು ರಾಹುಲ್ ಟೀಕಿಸಿದರು.

ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಛತ್ತೀಸ್‌ಗಢದಲ್ಲಿರುವ ಕಾಂಗ್ರೆಸ್ ಸರಕಾರಗಳು ಹಾಗೂ ಕರ್ನಾಟಕದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ರೈತರ ಸಾಲ ಮನ್ನಾ ಮಾಡಿದ್ದರೆ, ಮೋದಿ ಅವರು ಅನಿಲ್ ಅಂಬಾನಿ, ಈಗ ಪಲಾಯನ ಮಾಡಿರುವ ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಮುಂತಾದ ಉದ್ಯಮಿಗಳ 3,50,000 ಕೋಟಿ ರೂ. ಮೊತ್ತದ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ