ಆ್ಯಪ್ನಗರ

ಬಿಹಾರದಲ್ಲಿ ಆತಂಕ ಹುಟ್ಟಿಸಿದ ಅಸ್ಥಿಪಂಜರಗಳ ರಾಶಿ

ಅರಣ್ಯದ ಬಯಲಿನಲ್ಲಿ ನೂರಾರು ಅಸ್ಥಿಪಂಜರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೆಲವನ್ನು ಗೋಣಿ ಚೀಲದಲ್ಲಿ ತುಂಬಿ ಬಿಸಾಡಲಾಗಿದೆ. ಒಂದೆರಡು ದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

PTI 23 Jun 2019, 5:00 am
ಪಟನಾ: ಮಕ್ಕಳ ಸರಣಿ ಸಾವುಗಳಿಂದ ತತ್ತರಿಸಿ ಹೋಗಿರುವ ಬಿಹಾರದ ಮುಜಾಫರ್‌ಪುರದಲ್ಲಿ ಈಗ ಮಾನವ ಅಸ್ಥಿಪಂಜರಗಳ ಮಹಾ ಗುಡಾಣವೇ ಪತ್ತೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಸರಕಾರಿ ಒಡೆತನದ ಶ್ರೀ ಕೃಷ್ಣ ಮೆಡಿಕಲ್‌ ಕಾಲೇಜು ಆಸ್ಪತ್ರೆ (ಎಸ್‌ಕೆಎಂಸಿಎಚ್‌) ಸಮೀಪ ಇರುವ ಅರಣ್ಯದ ಬಯಲಿನಲ್ಲಿ ಈ ಮಾನವ ಅಸ್ಥಿಪಂಜರಗಳ ರಾಶಿ ಬಿದ್ದಿದೆ.
Vijaya Karnataka Web bihar


''ಪೊಲೀಸ್‌ ಅಧಿಕಾರಿಗಳ ಜತೆಗೂಡಿ ಎಸ್‌ಕೆಎಂಸಿಎಚ್‌ ಆಸ್ಪತ್ರೆಯ ವೈದ್ಯರ ತಂಡ ಸ್ಥಳಕ್ಕೆ ತೆರಳಿದೆ. ಕೂಲಂಕಷ ಪರಿಶೀಲನೆ ಬಳಿಕ ಈ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಲಿವೆ,'' ಎಂದು ಆಸ್ಪತ್ರೆಯ ಹಿರಿಯ ವೈದ್ಯ ಡಾ.ವಿಪಿನ್‌ ಕುಮಾರ್‌ ಹೇಳಿದ್ದಾರೆ.

ಅರಣ್ಯದ ಬಯಲಿನಲ್ಲಿ ನೂರಾರು ಅಸ್ಥಿಪಂಜರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೆಲವನ್ನು ಗೋಣಿ ಚೀಲದಲ್ಲಿ ತುಂಬಿ ಬಿಸಾಡಲಾಗಿದೆ. ಒಂದೆರಡು ದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವೆಲ್ಲವೂ ಹೇಗೆ ಬಂದವು ಎನ್ನುವ ಪ್ರಶ್ನೆಗೆ ಆಸ್ಪತ್ರೆಯ ಉಸ್ತುವಾರಿ ವೈದ್ಯ ಪಂಕಜ್‌ ಪವನ್‌ ಉತ್ತರ ನೀಡಿದ್ದಾರೆ. ''ಪ್ರಾಯಶಃ ನಮ್ಮ ಆಸ್ಪತ್ರೆಯಿಂದಲೇ ಅರಣ್ಯಕ್ಕೆ ಸಾಗಣೆಯಾಗಿರಬಹುದು. ಶವ ಪರೀಕ್ಷೆಯ ನಂತರ ಅವನ್ನು ಆಸ್ಪತ್ರೆ ಹಿಂದಿನ ಅರಣ್ಯಕ್ಕೆ ಕೊಂಡೊಯ್ದು ಬಿಸಾಡಿರಬಹುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಬೇಕಿದೆ,'' ಎಂದು ಪಂಕಜ್‌ ಹೇಳಿದ್ದಾರೆ.

ಪರೀಕ್ಷೆಯ ಬಳಿಕ ಅಸ್ಥಿಪಂಜರಗಳನ್ನು ಈ ರೀತಿ ಬೇಕಾಬಿಟ್ಟಿ ಬಿಸಾಡುವಂತಿಲ್ಲ. ಸುಡುವ ಅಥವಾ ಹೂಳುವ ಮೂಲಕ ಅವುಗಳಿಗೆ ಮುಕ್ತಿ ಕಾಣಿಸಬೇಕು. ಅದೆಲ್ಲವೂ ಆಸ್ಪತ್ರೆಯ ಜವಾಬ್ದಾರಿ. ''ಇದು ತೀರಾ ಅಮಾನವೀಯ. ಆಸ್ಪತ್ರೆಯ ಶವ ಪರೀಕ್ಷಾ ವಿಭಾಗವೇ ಇದನ್ನೆಲ್ಲ ನಿಗಾ ವಹಿಸಿ ನಿಭಾಯಿಸಬೇಕು. ಈ ವಿಷಯದಲ್ಲಿ ಅದು ತನ್ನ ಜವಾಬ್ದಾರಿ ಮರೆತಿದೆ,'' ಎಂದು ಪೊಲೀಸ್‌ ಅಧಿಕಾರಿಗಳು ದೂರಿದ್ದಾರೆ.
.................................
ಮಕ್ಕಳ ಸಾವಿನ ಸಂಖ್ಯೆ 165ಕ್ಕೆ

ಬಿಹಾರದಲ್ಲಿ ಮೆದುಳು ಜ್ವರದ ಮಾರಣ ಹೋಮ ಮುಂದುವರಿದಿದ್ದು, ಮಕ್ಕಳ ಸಾವಿನ ಸಂಖ್ಯೆ ಶನಿವಾರ 165ಕ್ಕೆ ಏರಿಕೆಯಾಗಿದೆ. ತೀವ್ರ ಜ್ವರ ಪೀಡಿತ ಜಿಲ್ಲೆ ಎನಿಸಿರುವ ಮುಜಫರ್‌ಪುರದಲ್ಲಿ ಇದುವರೆಗೆ 127 ಮಕ್ಕಳು ಈ ವೈರಸ್‌ಗೆ ಬಲಿಯಾಗಿದ್ದಾರೆ. ಇಲ್ಲಿನ ಎಸ್‌ಕೆಎಂಸಿಎಚ್‌ ಆಸ್ಪತ್ರೆಯಲ್ಲಿ 107 ಹಾಗೂ ಕೇಜ್ರಿವಾಲ್‌ ಆಸ್ಪತ್ರೆಯಲ್ಲಿ 20 ಮಕ್ಕಳು ಮೃತಪಟ್ಟಿದ್ದಾರೆ. ವೈಶಾಲಿ ಜಿಲ್ಲೆಯಲ್ಲಿ 19, ಬೇಗುಸರಾಯಿ ಜಿಲ್ಲೆಯಲ್ಲಿ 6, ಮೋತಿಹಾರಿ, ಪಟನಾ ಮತ್ತು ಬೆಟ್ಟಿಹದಲ್ಲಿ ತಲಾ ಇಬ್ಬರು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಬಾಗಲ್ಪುರ ಮತ್ತು ಗೋಪಾಲ್‌ಗಂಜ್‌ನಲ್ಲಿಯೂ ಮೆದಳು ಜ್ವರ ಪೀಡಿತ ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ