ಆ್ಯಪ್ನಗರ

ಈ ರೀತಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಮಾಡಿದ್ರೆ ನಿಮಗೆ ಸಿಗುತ್ತೆ 51 ಸಾವಿರ ರೂ. ನೆರವು!

ಆರ್ಥಿಕವಾಗಿ ಹಿಂದುಳಿದವರು ವಿವಾಹವಾಗುವುದನ್ನು ಪ್ರೋತ್ಸಾಹಿಸಲು ಮಧ್ಯ ಪ್ರದೇಶ ಸರಕಾರ ಹಣಕಾಸಿನ ನೆರವು ನೀಡುವ ಯೋಜನೆಯೊಂದು ಜಾರಿಯಲ್ಲಿದೆ. ಆದರೆ, ಈ ಯೋಜನೆಗೆ ಹೆಚ್ಚು ಅರ್ಜಿಗಳು ಬಂದ ಹಿನ್ನೆಲೆ ಆ ಸರಕಾರ ಮಾಡಿರುವ ಪ್ಲಾನ್‌ ಚರ್ಚೆಗೆ ಗ್ರಾಸವಾಗಿದೆ. ಅದೇನು ಅಂತೀರಾ? ಈ ವರದಿ ನೋಡಿ.

TIMESOFINDIA.COM 10 Oct 2019, 5:33 pm
[This story originally published in Times Of India on Oct 10, 2019]
Vijaya Karnataka Web toilet photo


ಭೋಪಾಲ್‌:
ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಆದರೆ, ಮಧ್ಯ ಪ್ರದೇಶದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿಕೊಂಡರೆ 51 ಸಾವಿರ ರೂ. ಹಣವನ್ನು ಸರಕಾರ ನೀಡುತ್ತದಂತೆ. ಆದರೆ, ಇದು ಎಲ್ಲ ರೀತಿಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಅಲ್ಲ. ಹಾಗಾದ್ರೆ, ಯಾವ ರೀತಿಯ ಫೋಟೋ ಶೂಟ್‌ ಅಂತೀರಾ, ಇಲ್ನೋಡಿ.

ತಾನು ಮದುವೆಯಾಗುತ್ತಿರುವ ವರ ಶೌಚಾಲಯವನ್ನು ಬಳಸುತ್ತಿದ್ದಾನೆ ಎಂಬುದನ್ನು ಸಾಬೀತುಪಡಿಸಿದರೆ ಪ್ರತಿ ವಧುವಿಗೆ 51,000 ರೂ. ಹಣವನ್ನು ಮಧ್ಯ ಪ್ರದೇಶ ಸರಕಾರ ನೀಡುತ್ತದೆ. ಮುಖ್ಯಮಂತ್ರಿ ಕನ್ಯಾ ವಿವಾಹ ಅಥವಾ ನಿಖಾ ಸ್ಕೀಂನಡಿ ಕನ್ಯೆಗೆ ಈ ಹಣವನ್ನು ಸರಕಾರ ನೀಡುತ್ತದೆ. ಆದರೆ, ಇದಕ್ಕೆ ಅರ್ಜಿ ಸಲ್ಲಿಸಬೇಕಾದರೆ ತನ್ನ ಭಾವಿ ಪತಿ ಶೌಚಾಲಯವನ್ನು ಬಳಸುತ್ತಿದ್ದಾನೆ ಎಂಬುದನ್ನು ವಧು ಸಾಬೀತುಪಡಿಸಬೇಕು.


ಇನ್ನು, ಶೌಚಾಲಯವನ್ನು ಬಳಸುವ ಕುರಿತು ಸರಕಾರಿ ಅಧಿಕಾರಿಗಳು ಎಲ್ಲ ಶೌಚಾಲಯವನ್ನು ಪರಿಶೀಲಿಸಲು ಸಾಧ್ಯವಿಲ್ಲದ ಕಾರಣ ಅವರು ಷರತ್ತು ಒದಗಿಸಿದ್ದಾರೆ. ಅದೇನೆಂದರೆ, ಟಾಯ್ಲೆಟ್‌ನಲ್ಲಿ ನಿಂತುಕೊಂಡು ವರ ಸೆಲ್ಫಿ ಅಥವಾ ಫೋಟೋ ತೆಗೆದುಕೊಳ್ಳಬೇಕಂತೆ. ಇದು ಮಧ್ಯ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಷ್ಟೇ ಅಲ್ಲ. ರಾಜಧಾನಿ ಭೋಪಾಲ್ ಮಹಾನಗರ ಪಾಲಿಕೆ ಸಹ ಇದೇ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ.

ಮದುವೆಗೆ ಗಿಫ್ಟ್‌ ಸಿಗಲು ಷರತ್ತುಗಳು

ಈ ಯೋಜನೆ ಕುರಿತು ಸಾಮಾಜಿಕ ನ್ಯಾಯ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೆ.ಎನ್‌. ಕನ್ಸೋತಿಯ ಪ್ರತಿಕ್ರಿಯೆ ನೀಡಿದ್ದು, ''ಮದುವೆಯಾಗುವ ಮೊದಲು ವರರಿಗೆ ಶೌಚಾಲಯವಿದೆ ಎಂದು ಸಾಬೀತುಪಡಿಸುವ ಅಗತ್ಯವಿರುವುದು ಕೆಟ್ಟ ವಿಷಯವಲ್ಲ. ಆದರೆ, ಸಾಮಾಜಿಕ ನ್ಯಾಯ ಇಲಾಖೆ ಅಂತಹ ಯಾವುದೇ ನಿರ್ದೇಶನವನ್ನು ನೀಡಿಲ್ಲ. ನೀತಿಯ ಅನುಷ್ಠಾನವು ಇನ್ನೂ ಉತ್ತಮಗೊಳ್ಳಬೇಕಾಗಿರಬಹುದು'' ಎಂದಿದ್ದಾರೆ.

ಇನ್ನು, 2013ರಿಂದಲೇ ಈ ಯೋಜನೆ ಜಾರಿಯಲ್ಲಿದ್ದು, ಶೌಚಾಲಯದಲ್ಲಿ ಫೋಟೋ ತೆಗೆದುಕೊಳ್ಳಬೇಕು ಎಂಬ ಷರತ್ತು ಮಾತ್ರ ಇತ್ತೀಚಿನದು. ಈ ಮೊದಲು ಮದುವೆಯಾದ 30 ದಿನಗಳೊಳಗೆ ವರನ ನಿವಾಸದಲ್ಲಿ ಟಾಯ್ಲೆಟ್‌ ಕಟ್ಟಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಈಗ ಅದನ್ನು ಬದಲಿಸಲಾಗಿದೆ ಎಂದು ಭೋಪಾಲ್ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಫೋಟೋ ಅಂಟಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಕನ್ಯಾ ವಿವಾಹ ಅಥವಾ ನಿಖಾ ಸ್ಕೀಂ ಕೇವಲ ಆರ್ಥಿಕವಾಗಿ ಹಿಂದುಳಿದವರಿಗಾಗಿ ಮಾತ್ರ ಮೀಸಲಿಡಲಾಗಿದೆ. ಕಳೆದ ವರ್ಷ ಡಿಸೆಂಬರ್ 18ರಂದು ಕಾಂಗ್ರೆಸ್ ಸರಕಾರ ಈ ಸ್ಕೀಂ ನಡಿ ವಿವಾಹವಾಗುವ ವಧುವಿಗೆ ಇದ್ದ ಹಣಕಾಸು ನೆರವನ್ನು 28,000 ರೂ. ನಿಂದ 51,000 ರೂ. ಗೆ ಹೆಚ್ಚಳ ಮಾಡಿತ್ತು. ಬಳಿಕ ಹೆಚ್ಚು ಅರ್ಜಿಗಳು ಸರಕಾರದ ಕದ ತಟ್ಟಿತ್ತು. ಈ ಹಿನ್ನೆಲೆ ಶೌಚಾಲಯದಲ್ಲಿ ಫೋಟೋ ತೆಗೆಸಿಕೊಳ್ಳಬೇಕು ಎಂಬ ಷರತ್ತನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ