ಆ್ಯಪ್ನಗರ

ದೇಶದ ಮೊದಲ ಬಾಹ್ಯಾಕಾಶ ಯುದ್ಧ ಕವಾಯತು ನಾಳೆಯಿಂದ

ಭವಿಷ್ಯದ ಯುದ್ಧಗಳು ಬಾಹ್ಯಾಕಾಶದಲ್ಲಿ ನಡೆಯಲಿವೆ ಎಂಬ ಹಿನ್ನೆಲೆಯಲ್ಲಿ ಭಾರತ ತನ್ನ ಬಾಹ್ಯಾಕಾಶ ಸಂಪತ್ತನ್ನು ರಕ್ಷಿಸಿಕೊಳ್ಳಲು ಸೂಕ್ತ ಸಮರಾಸ್ತ್ರಗಳನ್ನು ಸಿದ್ಧಪಡಿಸಿ ಬತ್ತಳಿಕೆಗೆ ಸೇರಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಬಾಹ್ಯಾಕಾಶ ಸಮರ ಕವಾಯತು (ಇಂಡ್‌ಸ್ಪೇಸ್‌ಎಕ್ಸ್‌) ನಾಳೆ ಮತ್ತು ನಾಡಿದ್ದು ನಡೆಯಲಿದೆ.

Vijaya Karnataka Web 24 Jul 2019, 3:09 pm
ಹೊಸದಿಲ್ಲಿ: ಭಾರತೀಯ ಸಶಸ್ತ್ರ ಪಡೆಗಳು ಈ ವಾರ ದೇಶದ ಮೊತ್ತಮೊದಲ ಬಾಹ್ಯಾಕಾಶ ಯುದ್ಧಾಸ್ತ್ರಗಳ ಕವಾಯತು ನಡೆಸಲಿವೆ. ಭವಿಷ್ಯದ ಯುದ್ಧಗಳು ಬಾಹ್ಯಾಕಾಶ ಯುದ್ಧವಾಗಿರಲಿವೆ ಎಂಬ ದೂರದೃಷ್ಟಿ ಹಿನ್ನೆಲೆಯಲ್ಲಿ 'ಸಂಭಾವ್ಯ ಅಪಾಯ'ಗಳನ್ನು ತಡೆಗಟ್ಟಲು ಸೂಕ್ತ ರಕ್ಷಣೋಪಾಯಗಳನ್ನು ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಸಮರಾಭ್ಯಾಸ ನಡೆಯಲಿದೆ.
Vijaya Karnataka Web India Space power


ಮೂರೂ ಸೇನಾಪಡೆಗಳ ಸಂಯುಕ್ತ ಸಿಬ್ಬಂದಿ ಶಾಖೆ (ಐಡಿಎಸ್) ಅಡಿಯಲ್ಲಿ ರಕ್ಷಣಾ ಸಚಿವಾಲಯ ಎರಡು ದಿನಗಳ 'ಇಂಡ್‌ಸ್ಪೇಸ್‌ಎಕ್ಸ್' ಹೆಸರಿನ ಕಾರ್ಯಾಚರಣೆ ಆಯೋಜಿಸಿದೆ. ಗುರುವಾರ ಮತ್ತು ಶುಕ್ರವಾರ ನಡೆಯುವ ಈ ಕಾರ್ಯಾಚರಣೆಯಲ್ಲಿ ಎಲ್ಲ ಮಿಲಿಟರಿ ಘಟಕಗಳು ಮತ್ತು ವೈಜ್ಞಾನಿಕ ಸಮುದಾಯದ ಗಣ್ಯರು ಭಾಗವಹಿಸಲಿದ್ದಾರೆ. ಚೀನಾ ತನ್ನ ಬಾಹ್ಯಾಕಾಶ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಅದಕ್ಕೆ ಸಜ್ಜಾಗಬೇಕಿದೆ.

ಭಾರತ ಮೊದಲ ಬಾರಿಗೆ ಕೈಗೊಂಡ ಇಂತಹ ಯೋಜಿತ ಕಾರ್ಯಾಚರಣೆಯಲ್ಲಿ ಚಲಿಸುತ್ತಿರುವ ಉಪಗ್ರಹವೊಂದನ್ನು ಹೊಡೆದುರುಳಿಸಲಾಗಿತ್ತು. 283 ಕಿ.ಮೀ ಎತ್ತರದ ಕೆಳಗಿನ ಕಕ್ಷೆಯಲ್ಲಿ ಸುತ್ತುತ್ತಿದ್ದ 740 ಕೆ.ಜಿ ತೂಕದ ಮೈಕ್ರೋಸ್ಯಾಟ್-ಆರ್ ಉಪಗ್ರಹವನ್ನು 'ಮಿಷನ್ ಶಕ್ತಿ' ಹೆಸರಿನ ಕಾರ್ಯಾಚರಣೆಯಲ್ಲಿ ಮಾರ್ಚ್ 27ರಂದು ಹೊಡೆದುರುಳಿಸಲಾಗಿತ್ತು.

ಚೀನಾ ಈಗಾಗಲೇ ಉಪಗ್ರಹ ನಾಶಕ ಕ್ಷಿಪಣಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕಕ್ಷೆಯಲ್ಲಿ ಚಲಿಸುತ್ತಿರುವ ಉಪಗ್ರಹ ಹಾಗೂ ಸ್ಥಿರಕಕ್ಷೆಯಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಲೇಸರ್ ಮತ್ತು ಎಲೆಕ್ಟ್ರೋ ಮ್ಯಾಗ್ನೆಟಿಕ್ ಶಸ್ತ್ರಾಸ್ತ್ರಗಳನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ.

ಹೀಗಾಗಿ ಭಾರತಕ್ಕೆ ಬಾಹ್ಯಾಕಾಶ ಸಮರಕ್ಕೆ ಸಜ್ಜಾಗದೆ ಅನ್ಯ ಮಾರ್ಗವಿಲ್ಲ. ನಮ್ಮ ಬಾಹ್ಯಾಕಾಶ ಸೊತ್ತುಗಳನ್ನು ರಕ್ಷಿಸಿಕೊಳ್ಳಲು ನಾವು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

'ಕಳೆದ ಮಾರ್ಚ್‌ನಲ್ಲಿ ನಡೆಸಿದ ಎ-ಸ್ಯಾಟ್ ಪರೀಕ್ಷೆ ಭಾರತದ ಬಾಹ್ಯಾಕಾಶ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆದರೆ ನಮ್ಮ ಶಕ್ತಿಯನ್ನು ಶಾಂತಿ ಮತ್ತು ಸೌಹಾರ್ದತೆಗೆ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೇ ದಿಸೆಯಲ್ಲಿ 'ಇಂಡ್‌ಸ್ಪೇಸ್‌ಎಕ್ಸ್' ಆಯೋಜಿಸಲಾಗುತ್ತಿದೆ. ಪ್ರಮುಖ ಐಐಟಿ ಸಂಸ್ಥೆಯೊಂದು ಸಂಭಾವ್ಯ ಪರಿಹಾರಗಳನ್ನು ರೂಪಿಸಲು ಶ್ರಮಿಸುತ್ತಿದೆ' ಎಂದು ಹಿರಿಯ ಅಧಿಕಾರಿ ತಿಳಿಸಿದರು.

ನಾಗರಿಕ ಬಳಕೆಯ ಬಾಹ್ಯಾಕಾಶ ಶಕ್ತಿಯಲ್ಲಿ ಭಾರತ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದು, ಜಗತ್ತಿನ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಸೋಮವಾರ ನಡೆಸಿದ ಚಂದ್ರಯಾನ-2 ಉಡ್ಡಯನ ಕೂಡ ಯಶಸ್ವಿಯಾಗಿದೆ. ಆದರೆ ಮಿಲಿಟರಿ ಬಳಕೆಯ ಬಾಹ್ಯಾಕಾಶ ತಂತ್ರಜ್ಞಾನವನ್ನು ಭಾರತ ಇದುವರೆಗೂ ಗುಪ್ತಚರ ಮಾಹಿತಿ ಸಂಗ್ರಹಣೆ, ವಿಚಕ್ಷಣೆ, ಕಣ್ಗಾವಲು, ಸಂವಹನ ಮತ್ತು ದಿಕ್ಸೂಚಿ ಉದ್ದೇಶಕ್ಕೆ ಸೀಮಿತಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ