ಆ್ಯಪ್ನಗರ

ಅಲ್ಪಾವಧಿ ಮೈತ್ರಿಗೆ ಜನಮತವಿಲ್ಲ ಎಂದ ಜೇಟ್ಲಿ

ಪ್ರತಿಪಕ್ಷಗಳ ಸಮಯಸಾಧಕ ಮೈತ್ರಿಯಿಂದಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

Vijaya Karnataka 22 Jan 2019, 5:00 am
ಹೊಸದಿಲ್ಲಿ: ಪ್ರತಿಪಕ್ಷಗಳ 'ಮಹಾಘಟಬಂಧನ್‌' ಹಾಸ್ಯಾಸ್ಪದ ಹಾಗೂ ಕಾರ್ಯಸಾಧುವಲ್ಲದ ಯೋಜನೆ ಎಂದು ಜರಿದಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಅಲ್ಪಾವಧಿಯ ರಾಜಕೀಯ ಮೈತ್ರಿಗೆ ಮತ ಹಾಕುವ ಮೂಲಕ ಮಹತ್ವಾಕಾಂಕ್ಷಿ ಸಮಾಜ 'ಸಾಮೂಹಿಕ ಆತ್ಮಹತ್ಯೆ' ಮಾಡಿಕೊಳ್ಳಲಾರದು ಎಂದು ಪ್ರತಿಪಾದಿಸಿದ್ದಾರೆ.
Vijaya Karnataka Web jaitley


ಪ್ರತಿಪಕ್ಷಗಳ ಸಮಯಸಾಧಕ ಮೈತ್ರಿಯಿಂದಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

'2019ರ ಅಜೆಂಡಾ ಮೋದಿ ವರ್ಸಸ್‌ ಅವ್ಯವಸ್ಥೆ' ಎಂಬ ಶೀರ್ಷಿಕೆಯಡಿ ಜೇಟ್ಲಿ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಈ ಕುರಿತು ವಿವರಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪ್ರಮುಖ ಎರಡು ತಂತ್ರಗಾರಿಕೆಯೆಂದರೆ, 'ಮೋದಿ ವಿರೋಧಿ ಅಜೆಂಡಾ ಮುಂದುವರಿಸುವುದು ಮತ್ತು ಚುನಾವಣಾ ಲೆಕ್ಕಾಚಾರದ ಪ್ರಯೋಜನ ಪಡೆಯುವುದು' ಎಂದು ಟೀಕಿಸಿದ್ದಾರೆ.

''ಅನೇಕ ರಾಜಕಾರಣಿಗಳು ಯೋಜಿಸುವುದಕ್ಕಿಂತ ಜನರು ಹೆಚ್ಚು ಬುದ್ಧಿವಂತರಾಗಿದ್ದಾರೆ. ಅವರು ಅವ್ಯವಸ್ಥೆಯನ್ನು ಎಂದೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ನೇರ ಸ್ಪರ್ಧೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಶೇ.50 ಮತದ ಸಮರಕ್ಕೆ ಸಿದ್ಧವಾಗಬೇಕಿದೆ. ಅನೇಕ ರಾಜ್ಯಗಳು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ,'' ಎಂದು ಜೇಟ್ಲಿ ಹೇಳಿದ್ದಾರೆ.

''ಮಹಾತ್ವಾಕಾಂಕ್ಷೆಯ ದೇಶದಲ್ಲಿ ನಕಾರಾತ್ಮಕವಾದವೇ ರಾಜಕೀಯ ಅಭಿಯಾನವಾದರೆ, ಅದು ಸಫಲವಾಗುವುದಿಲ್ಲ. ರಾಜಕೀಯ ಲೆಕ್ಕಾಚಾರ ಪ್ರಮುಖವಾದರೆ ಅದರ ಮುಂದೆ ಮೋದಿ ಕೆಮಿಸ್ಟ್ರಿ ಮೇಲುಗೈ ಸಾಧಿಸಲಿದೆ,'' ಎಂದು ಹೇಳಿದ್ದಾರೆ.

''1971ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ವಿರುದ್ಧ ಪ್ರತಿಪಕ್ಷಗಳು ಮಹಾಮೈತ್ರಿಕೂಟ ರಚಿಸಿದ್ದವು. ಆಗ ಪ್ರತಿಪಕ್ಷಗಳಲ್ಲಿ ಶಕ್ತಿಶಾಲಿ ನಾಯಕರಿದ್ದರು. ನಕಾರಾತ್ಮಕವಾದವನ್ನು ದೇಶ ತಿರಸ್ಕರಿಸಿತು. ಆದರೆ ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಾತ್ವಾಕಾಂಕ್ಷೆಯುಳ್ಳ ಸಮಾಜ ಎಂದೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ,'' ಎಂದು ಜೇಟ್ಲಿ ಹೇಳಿದ್ದಾರೆ.

ಸದ್ಯ ಜೇಟ್ಲಿ ಅವರು ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ