ಆ್ಯಪ್ನಗರ

ಉಗ್ರ ನಾಶಕ್ಕಾಗಿ ಪಿಒಕೆಗೆ ನುಗ್ಗಲು ಸಿದ್ದ -ಪಾಕ್‌ಗೆ ಖಡಕ್ ಎಚ್ಚರಿಕೆ

ಅಗತ್ಯ ಬಿದ್ದರೆ ಗಡಿ ದಾಟಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರವೇಶಿಸಿ ಉಗ್ರರ ಶಿಬಿರಗಳನ್ನು ನಾಶ ಮಾಡಲಾಗುವುದು ಎಂದು ಪಾಕಿಸ್ತಾನಕ್ಕೆ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಎಚ್ಚರಿಕೆ ನೀಡಿದ್ದಾರೆ.

Agencies 21 Oct 2019, 8:28 pm
ಶ್ರೀನಗರ: ಅಗತ್ಯ ಬಿದ್ದರೆ ಗಡಿ ದಾಟಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರವೇಶಿಸಿ ಉಗ್ರರ ಶಿಬಿರಗಳನ್ನು ನಾಶಪಡಿಸಲು ಭಾರತ ಹಿಂದೆಮುಂದೆ ನೋಡುವುದಿಲ್ಲಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲಿಕ್‌ ಅವರು ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web pakistan


ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟದೇ ಪಿಒಕೆಯಲ್ಲಿನ ನಾಲ್ಕು ಉಗ್ರರ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ ಮರುದಿನ ಮಾತನಾಡಿರುವ ಮಲಿಕ್‌, '' ಇನ್ನಾದರೂ ಪಾಕಿಸ್ತಾನ ತನ್ನ ನಡತೆ ಸರಿಪಡಿಸಿಕೊಳ್ಳದಿದ್ದರೆ ಅನಿವಾರ್ಯವಾಗಿ ಗಡಿ ನುಸುಳಿ ಪಾಠ ಕಲಿಸಬೇಕಾಗುತ್ತದೆ. ಪಾಕಿಸ್ತಾನ ತಾನಾಗಿಯೇ ಪಿಒಕೆಯಲ್ಲಿನ ಉಗ್ರರ ಶಿಬಿರಗಳನ್ನು ನಾಶಪಡಿಸದಿದ್ದರೆ ನಾವು ಗಡಿ ದಾಟಿ ಆ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ,'' ಎಂದು ಎಚ್ಚರಿಕೆ ನೀಡಿದ್ದಾರೆ.

ಯುದ್ಧ ಕೆಟ್ಟದ್ದು ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಆದರೆ ಪಾಕಿಸ್ತಾನ ತನ್ನ ವರ್ತನೆ ಬದಲಾಯಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಭಾನುವಾರ ಭಾರತೀಯ ಸೇನೆ ಕೊಟ್ಟ ತಿರುಗೇಟಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಪ್ರತ್ಯುತ್ತರವನ್ನು ನಾವು ನೀಡಲಿದ್ದೇವೆ ಎಂದ ಮಲಿಕ್‌ ಅವರು ಭವಿಷ್ಯದಲ್ಲಿ ಪಿಒಕೆಗೆ ಯೋಧರು ಕಾಲಿಡುವ ಕುರಿತು ಸುಳಿವು ನೀಡಿದರು.

ಪಿಒಕೆಯ ನೀಲಂ ಕಣಿವೆಯಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾನುವಾರ ಭಾರತೀಯ ಸೇನೆ ಆರ್ಟಿಲರಿ ಗನ್‌ಗಳಿಂದ ದಾಳಿ ನಡೆಸಿತ್ತು. ಸುಮಾರು 10 ಮಂದಿ ಪಾಕ್‌ ಸೈನಿಕರು ಹಾಗೂ ಡಜನ್‌ಗೂ ಹೆಚ್ಚು ಉಗ್ರರು ದಾಳಿ ವೇಳೆ ಮೃತಪಟ್ಟಿದ್ದಾರೆ.

ಭಾರತೀಯ ಸೇನೆ ಪಿಒಕೆಯಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿರುವುದನ್ನು ಪಾಕಿಸ್ತಾನ ತಿರಸ್ಕರಿಸಿದೆ. ''ಭಾರತೀಯ ಸೇನೆ ಹೇಳುತ್ತಿರುವ ಪಿಒಕೆಯಲ್ಲಿನ ಸ್ಥಳಗಳಲ್ಲಿ ವಿದೇಶಿ ಗಣ್ಯರೊಂದಿಗೆ ಭಾರತದ ಅಧಿಕಾರಿಗಳು ಖುದ್ದು ಆಗಮಿಸಿ ಪರಿಶೀಲನೆ ನಡೆಸಲಿ. ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಹೇಳಿರುವ ದಾಳಿ ಸ್ಥಳಗಳಿಗೆ ಪಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಭೇಟಿ ನೀಡಲಿ. ಅಲ್ಲಿಯೇ ಭಾರತ ದಾಳಿ ನಡೆಸಿರುವುದನ್ನು ಸಾಬೀತುಪಡಿಸಲಿ,'' ಎಂದು ಪಾಕ್‌ ಮಿಲಿಟರಿ ವಕ್ತಾರ ಮೇಜರ್‌ ಜನರಲ್‌ ಗಫೂರ್‌ ಸೋಮವಾರ ಟ್ವೀಟ್‌ ಮಾಡಿದ್ದಾರೆ.

ಪಾಕ್‌, ಚೀನಾ ಗಡಿಯಲ್ಲಿಆಕಾಶ್‌ ಕ್ಷಿಪಣಿ

ಪಾಕಿಸ್ತಾನ ಮತ್ತು ಚೀನಾ ಜತೆಗಿನ ಗುಡ್ಡಗಾಡು ಗಡಿ ಪ್ರದೇಶಗಳಲ್ಲಿದೇಶೀಯ ನಿರ್ಮಿತ ಆಕಾಶ್‌ ಕ್ಷಿಪಣಿಗಳನ್ನು ನಿಯೋಜಿಸುವ ಮೂಲಕ ಶತ್ರುಪಾಳಯದ ಯುದ್ಧ ವಿಮಾನಗಳು ದಾಳಿಗೆ ಮುಂದಾಗದಂತೆ ಎಚ್ಚರಿಕೆ ವಹಿಸಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ. ವಿಶೇಷವಾಗಿ ಲಡಾಖ್‌ನಲ್ಲಿಆಕಾಶ್‌ ನಿಯೋಜನೆಗೆ ಸೇನಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆ ಕುರಿತು ಸಚಿವಾಲಯದ ಅಧಿಕಾರಿಗಳು ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿನಿಯೋಜಿಸಲು 10 ಸಾವಿರ ಕೋಟಿ ರೂ. ಮೌಲ್ಯದ ಆಕಾಶ್‌ ಪ್ರೈಮ್‌ ಅಥವಾ ಉನ್ನತೀಕರಿಸಲಾದ ಆಕಾಶ್‌ ಕ್ಷಿಪಣಿಯ ಆವೃತ್ತಿಯನ್ನು ಖರೀದಿಸುವ ಮಾತುಕತೆ ಸಾಗಿದೆ. ಸಮುದ್ರ ಮಟ್ಟದಿಂದ 15 ಸಾವಿರ ಅಡಿಗಳಷ್ಟು ಎತ್ತರದಲ್ಲಿಯೂ ನಿಖರವಾಗಿ ಗುರಿಯನ್ನು ಉಡಾಯಿಸಬಲ್ಲ ಸಾಮರ್ಥ್ಯವನ್ನು ಆಕಾಶ್‌ ಕ್ಷಿಪಣಿ ಹೊಂದಿದೆ. ಸದ್ಯ ಸೇನೆ ಬಳಿ ಎರಡು ರೆಜಿಮೆಂಟ್‌ನಷ್ಟು ಆಕಾಶ್‌ ಕ್ಷಿಪಣಿಗಳಿವೆ. ಮತ್ತೆರಡು ನಿಯೋಜಿಸುವ ಪ್ರಸ್ತಾವನೆಯನ್ನು ಸೇನೆ ಸಚಿವಾಲಯದ ಎದುರು ಇರಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ