ಆ್ಯಪ್ನಗರ

DY Chandrachud Takes Oath: 44 ವರ್ಷದ ಬಳಿಕ ತಂದೆಯಂತೆಯೇ ಸಿಜೆಐ ಹುದ್ದೆಗೇರಿದ ಡಿವೈ ಚಂದ್ರಚೂಡ್: ಪ್ರಮಾಣವಚನ ಸ್ವೀಕಾರ

DY Chandrachud Takes Oath As CJI: ಡಿವೈ ಚಂದ್ರಚೂಡ್ ಅವರು ಸುಪ್ರೀಂಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಈವರೆಗೂ ಸಿಜೆಐ ಆಗಿದ್ದ ಉದಯ್ ಲಲಿತ್ ಅವರು ಮಂಗಳವಾರ ನಿವೃತ್ತರಾಗಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 9 Nov 2022, 12:21 pm

ಹೈಲೈಟ್ಸ್‌:

  • ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ಪ್ರಮಾಣವಚನ ಸ್ವೀಕಾರ
  • ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರಿಂದ ಪ್ರತಿಜ್ಞಾವಿಧಿ ಬೋಧನೆ
  • ಏಳು ವರ್ಷಗಳ ದೀರ್ಘಾವಧಿಗೆ ಸಿಜೆಐ ಆಗಿದ್ದ ತಂದೆ ವೈವಿ ಚಂದ್ರಚೂಡ್
  • ಎರಡು ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಲಿರುವ ಚಂದ್ರಚೂಡ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Justice DY Chandrachud takes oath as new Chief Justice of India
ಹೊಸದಿಲ್ಲಿ: ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಧನಂಜಯ ವೈ ಚಂದ್ರಚೂಡ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಜೆಐ ಹುದ್ದೆಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮುಂದಿನ ಎರಡು ವರ್ಷಗಳವರೆಗೆ, ಅಂದರೆ 2024ರ ನವೆಂಬರ್ 10ರವರೆಗೂ ಡಿವೈ ಚಂದ್ರಚೂಡ್ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿ ಇರಲಿದ್ದಾರೆ. ಸಿಜೆಐ ಆಗಿದ್ದ ಉದಯ್ ಉಮೇಶ್ ಲಲಿತ್ ಅವರ ಉತ್ತರಾಧಿಕಾರಿಯಾಗಿ ಚಂದ್ರಚೂಡ್ ಅಧಿಕಾರ ಸ್ವೀಕರಿಸಿದ್ದಾರೆ. ಯುಯು ಲಲಿತ್ ಅವರು 74 ದಿನಗಳ ಅಲ್ಪ ಅವಧಿಗೆ ಈ ಉನ್ನತ ಹುದ್ದೆಯಲ್ಲಿದ್ದರು.
Supreme Court CJI - ಸುಪ್ರೀಂ ಕೋರ್ಟಿನ 50ನೇ ಸಿಜೆಐ ಆಗಿ ನ್ಯಾ.ಡಿ.ವೈ.ಚಂದ್ರಚೂಡ್ ನೇಮಕ:ನ.9ರಂದು ಪ್ರಮಾಣವಚನ

ಭಾರತದ ಅತ್ಯಂತ ದೀರ್ಘಾವಧಿಯ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿವಂಗತ ಯಶವಂತ್ ವಿಷ್ಣು ಚಂದ್ರಚೂಡ್ (ವೈವಿ ಚಂದ್ರಚೂಡ್) ಅವರ ಮಗ ಡಿವೈ ಚಂದ್ರಚೂಡ್. ತಂದೆಯ ಬಳಿಕ ಮಗ ಕೂಡ ಸಿಜೆಐ ಹುದ್ದೆಗೆ ಏರಿರುವುದು ಭಾರತದ ಇತಿಹಾಸದಲ್ಲಿ ಬಹು ಅಪರೂಪದ ಸಂಗತಿಯಾಗಿದೆ. ವೈವಿ ಚಂದ್ರಚೂಡ್ ಅವರು ಏಳು ವರ್ಷಗಳ ಕಾಲ ಸಿಜೆಐ ಆಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ಸಿಜೆಐ ಹುದ್ದೆಗೇರಿದ್ದ ಹೆಚ್ಚಿನ ನ್ಯಾಯಮೂರ್ತಿಗಳು ದೀರ್ಘಕಾಲ ಕಚೇರಿಯಲ್ಲಿ ಇರಲಿಲ್ಲ. ಆದರೆ ಡಿವೈ ಚಂದ್ರಚೂಡ್ ಅವರು ಎರಡು ವರ್ಷಗಳ ಅವಧಿ ಹೊಂದಿರುವುದು ವಿಶೇಷ.
ಸುಳ್ಳು ಸುದ್ದಿಗಳು ಹೆಚ್ಚುತ್ತಿವೆ, ಪಕ್ಷಪಾತರಹಿತ ಮಾಧ್ಯಮದ ಅಗತ್ಯವಿದೆ: ಸುಪ್ರೀಂಕೋರ್ಟ್ ನ್ಯಾ. ಚಂದ್ರಚೂಡ

ಪ್ರಮುಖ ತೀರ್ಪುಗಳು
ನ್ಯಾ. ಚಂದ್ರಚೂಡ್ ಅವರು 2016ರ ಮೇ 13ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದರು. ಅವರು ಅಯೋಧ್ಯಾ ಭೂ ವಿವಾದ ಮತ್ತು ಖಾಸಗಿತನದ ಹಕ್ಕು ಸೇರಿದಂತೆ ವಿವಿಧ ಮಹತ್ವದ ತೀರ್ಪುಗಳಲ್ಲಿ ಹಾಗೂ ಕೆಲವು ಸಾಂವಿಧಾನಿಕ ಪೀಠಗಳಲ್ಲಿ ಭಾಗವಾಗಿದ್ದರು.

ಐಪಿಸಿಯ ಸೆಕ್ಷನ್ 377 ಅನ್ನು ಭಾಗಶಃ ತೆಗೆದು ಹಾಕುವ ಮೂಲಕ ಸಮಾನ ಲಿಂಗಿಗಳ ಸಂಬಂಧ ಅಪರಾಧವಲ್ಲ ಎಂಬ ಮಹತ್ವದ ನಿರ್ಧಾರ, ಆಧಾರ್ ಯೋಜನೆಯ ಸಿಂಧುತ್ವ ಮತ್ತು ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಚಾರದಂತಹ ನಿರ್ಣಾಯಕ ತೀರ್ಪುಗಳನ್ನು ನೀಡಿದ ಪೀಠಗಳಲ್ಲಿ ಅವರು ಭಾಗಿಯಾಗಿದ್ದರು.

ನ್ಯಾ. ಚಂದ್ರಚೂಡ್ ನೇತೃತ್ವದ ಪೀಠವು, ಕೋವಿಡ್ ಬಿಕ್ಕಟ್ಟಿನ ವೇಳೆ ಜನರು ಎದುರಿಸಿದ ಸಂಕಷ್ಟಗಳ ನಿವಾರಣೆಗೆ ಅನೇಕ ಆದೇಶಗಳನ್ನು ನೀಡಿತ್ತು. ಇತ್ತೀಚೆಗೆ 'ಅವಿವಾಹಿತ ಮಹಿಳೆ'ಯನ್ನು ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆಯಡಿ ಸೇರಿಸುವಂತಹ ಬಹು ಮುಖ್ಯವಾದ ತೀರ್ಪನ್ನು ಇತ್ತೀಚೆಗಷ್ಟೇ ಅವರ ಪೀಠ ನೀಡಿತ್ತು.
ಆಸ್ಪತ್ರೆಗಳು ಸೇವೆ ಒದಗಿಸುವ ಬದಲು ರಿಯಲ್ ಎಸ್ಟೇಟ್ ಉದ್ಯಮವಾಗಿಬಿಟ್ಟಿವೆ: ಸುಪ್ರೀಂಕೋರ್ಟ್ ಅಸಮಾಧಾನ

ಚಂದ್ರಚೂಡ್ ಜೀವನ ವಿವರ
1959ರ ನವೆಂಬರ್ 11ರಂದು ಜನಿಸಿದ ಡಿವೈ ಚಂದ್ರಚೂಡ್, ಮುಂಬಯಿಯ ಕ್ಯಾಥಡ್ರೆಲ್ ಮತ್ತು ಜಾನ್ ಕನಾನ್ ಶಾಲೆಯಲ್ಲಿ, ದಿಲ್ಲಿಯ ಸೇಂಟ್ ಕೊಲಂಬಿಯಾ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರೈಸಿದರು. 1979ರಲ್ಲಿ ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗಣಿತ ಪದವಿ ಪಡೆದರು. 1982ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿ ಪಡೆದರು. ನಂತರ 1983ರಲ್ಲಿ ಹಾರ್ವರ್ಡ್ ಕಾನೂನು ಶಾಲೆಯಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪೂರೈಸಿದರು. 1986ರಲ್ಲಿ ಅಲ್ಲಿಯೇ ನ್ಯಾಯಾಂಗ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದರು.

1982ರಲ್ಲಿ ಕಾನೂನು ಪದವಿ ಓದುವಾಗಲೇ ಕೆಲ ಕಾಲ ಕೆಲಸ ಮಾಡಿದ್ದ ಅವರು, ಪದವಿ ಪಡೆದ ಬಳಿಕ ಕಾನೂನು ಸಂಸ್ಥೆಯೊಂದರಲ್ಲಿ ವಕೀಲಿಕೆ ಆರಂಭಿಸಿದ್ದರು. ಭಾರತಕ್ಕೆ ಮರಳಿದ ನಂತರ ಸುಪ್ರೀಂಕೋರ್ಟ್ ಹಾಗೂ ಬಾಂಬೆ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದರು. 1998ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕವಾದರು. ಅದೇ ವರ್ಷ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.

NV Ramana: ಸಕ್ರಿಯ ರಾಜಕೀಯಕ್ಕೆ ಬರಲು ಆಸೆ ಪಟ್ಟಿದ್ದೆ: ಸಿಜೆಐ ಎನ್‌ವಿ ರಮಣ

2000ದ ಮಾರ್ಚ್ 29ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ನಂತರ ಅಲಹಾಬಾದ್ ಹೈಕೋರ್ಟ್ ಸಿಜೆ ಆದರು. 2016ರಲ್ಲಿ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಗಳಿಸಿದರು. 2021ರ ಏಪ್ರಿಲ್ 24ರಿಂದ ಅವರು ಕೊಲಿಜಿಯಂ ಭಾಗವೂ ಆಗಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ