ಆ್ಯಪ್ನಗರ

ಭಾರತೀಯ ಸೇನೆಗೆ ‘ವಜ್ರ’ ಬಲ

1980ರ ದಶಕದಲ್ಲಿ ಬೊಫೋರ್ಸ್‌ ಫಿರಂಗಿ ಹಗರಣದ ನಂತರ ಭಾರತ ಒಂದೇ ಒಂದು ಫಿರಂಗಿಯನ್ನು ಅನ್ಯ ದೇಶಗಳಿಂದ ಖರೀದಿಸಿರಲಿಲ್ಲ. ಇದರಿಂದಾಗಿ ಸೇನೆಯಲ್ಲಿ ಫಿರಂಗಿಗಳ ಆಭಾವ ಎದುರಾಗಿತ್ತು. ಈ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಅಮೆರಿಕ, ದಕ್ಷಿಣ ಕೊರಿಯಾ ಜತೆ ಫಿರಂಗಿಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು.

Vijaya Karnataka 10 Nov 2018, 7:56 am
ನಾಸಿಕ್‌: ಭಾರತೀಯ ಸೇನೆಗೆ ಈಗ ಮತ್ತಷ್ಟು ಶಸ್ತ್ರಾಸ್ತ್ರ ಬಲ ಬಂದಿದೆ. ಸಮರ ಕಣದಲ್ಲಿ ಶೆಲ್‌ಗಳನ್ನು ಪ್ರಯೋಗಿಸಲು ಬಳಸಲಾಗುವ ಮೂರು 'ಕೆ-9 ವಜ್ರಾ', ಹತ್ತು 'ಎಂ777 ಹೊವಿಟ್ಸರ್‌'ಗಳು ಮತ್ತು 'ಕಾಮನ್‌ ಗನ್‌ ಟವರ್‌'ಗಳು ಸೇರಿದಂತೆ ಅತ್ಯಾಧುನಿಕ ಫಿರಂಗಿಗಳು ಹಾಗೂ ಯುದ್ಧ ಸಲಕರಣೆಗಳು ಭಾರತೀಯ ಸೇನೆಯ ಬತ್ತಳಿಕೆ ಸೇರಿವೆ.
Vijaya Karnataka Web k9 vajra


ಮಹಾರಾಷ್ಟ್ರದ ನಾಸಿಕ್‌ ಬಳಿ ಇರುವ ಡಿಯೋಲಲಿ ಫಿರಂಗಿ ಕೇಂದ್ರದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಸಮ್ಮುಖ ಇವುಗಳನ್ನು ಸೇನೆಗೆ ಸಮರ್ಪಿಸಲಾಯಿತು.

ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಸೀತಾರಾಮನ್‌, ''30 ವರ್ಷಗಳಿಂದ ಭಾರತದ ಸೇನೆಗೆ ಫಿರಂಗಿಗಳ ಖರೀದಿಯೇ ಆಗಿರಲಿಲ್ಲ. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಲ್ಲೇ ಈ ಕೊರತೆಯನ್ನು ನೀಗಿಸಿದೆ,'' ಎಂದು ಹೇಳಿದ್ದಾರೆ.

1980ರ ದಶಕದಲ್ಲಿ ಬೊಫೋರ್ಸ್‌ ಫಿರಂಗಿ ಹಗರಣದ ನಂತರ ಭಾರತ ಒಂದೇ ಒಂದು ಫಿರಂಗಿಯನ್ನು ಅನ್ಯ ದೇಶಗಳಿಂದ ಖರೀದಿಸಿರಲಿಲ್ಲ. ಇದರಿಂದಾಗಿ ಸೇನೆಯಲ್ಲಿ ಫಿರಂಗಿಗಳ ಆಭಾವ ಎದುರಾಗಿತ್ತು. ಈ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಅಮೆರಿಕ, ದಕ್ಷಿಣ ಕೊರಿಯಾ ಜತೆ ಫಿರಂಗಿಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು.

ಮುಂದುವರಿದ ಬಲವರ್ಧನೆ: ಭಾರತೀಯ ಸೇನೆಯ ಬಲವರ್ಧನೆಯ ಭಾಗವಾಗಿ ಇತ್ತೀಚೆಗಷ್ಟೇ ಭಾರತ ರಷ್ಯಾದಿಂದ ಟ್ರಯುಂಫ್‌ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುತ್ತಿದೆ. ಅಮೆರಿಕ ವಿರೋಧದ ನಡುವೆಯೂ ಭಾರತ- ರಷ್ಯಾ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.

ಜಪಾನ್‌ ಜತೆಗೂ ಡೀಲ್‌: ಅಲ್ಲದೆ, ಕಳೆದ ತಿಂಗಳು ಪ್ರಧಾನಿ ಮೋದಿ ಜಪಾನ್‌ ಭೇಟಿ ವೇಳೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳು ರಷ್ಯಾದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ ಜತೆ ಸತತ ಸಂಪರ್ಕದಲ್ಲಿರುವುದು, ರಕ್ಷಣಾ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಉಭಯ ದೇಶಗಳ ಸಹಕಾರ ಸೇರಿದಂತೆ ಹಲವು ವ್ಯೂಹಾತ್ಮಕ ಒಪ್ಪಂದಳಿಗೆ ಸಹಿ ಹಾಕಲಾಗಿದೆ.

ಹೊವಿಟ್ಜರ್


ಫಿರಂಗಿಗಳ ವಿಶೇಷತೆ

ಕೆ9 ವಜ್ರ
* 155 ಎಂಎಂ, 52 ಕ್ಯಾಲಿಬ್ರೆನ ಸ್ವಯಂ ಚಾಲಿತ ಗನ್‌ ಇದಾಗಿದ್ದು, ಭಾರತದಲ್ಲಿ ಖಾಸಗಿ ವಲಯದಲ್ಲಿ ತಯಾರಿಸಲಾದ ಮೊದಲ ಫಿರಂಗಿ ಎಂಬ ಹಿರಿಮೆ ಗಳಿಸಿದೆ.

* 28ರಿಂದ 38 ಕಿ.ಮೀ. ವ್ಯಾಪ್ತಿಯಲ್ಲಿ ಇದನ್ನು ಪ್ರಯೋಗಿಸಬಹುದು.

* 30 ಸೆಕೆಂಡ್‌ಗಳಲ್ಲಿ ಇದು 3 ಸುತ್ತು ಗುಂಡು ಹಾರಿಸಬಲ್ಲದು. ಅತೀವ ತರ್ತು ಸಂದರ್ಭಗಳಲ್ಲಿ ಮೂರು ನಿಮಿಷದಲ್ಲೇ 15 ಸುತ್ತು ಗುಂಡು ಹಾರಿಸಬಲ್ಲದು. ಅಷ್ಟೇ ಅಲ್ಲ, 60 ನಿಮಿಷದಲ್ಲಿ ಸತತವಾಗಿ 60 ಸುತ್ತು ಗುಂಡು ಹಾರಿಸಬಲ್ಲದು.

* 2020ರ ವೇಳೆಗೆ 4,366 ಕೋಟಿ ರೂ. ವೆಚ್ಚದಲ್ಲಿ 100 ಇಂತಹ ಫಿರಂಗಿಗಳು ಸೇನೆಯ ಬತ್ತಳಿಕೆ ಸೇರಲಿವೆ. ಈ ಪೈಕಿ 10 ಈ ತಿಂಗಳೇ ಸೇರ್ಪಡೆಗೊಳ್ಳಲಿವೆ.
==============

ಎಂ777 ಹೊವಿಟ್ಸರ್‌

* ಇದು 155 ಎಂಎಂ ವ್ಯಾಸದ, ಅತ್ಯಂತ ಹಗುರವಾದ ಫಿರಂಗಿಯಾಗಿದ್ದು, ಇದನ್ನು ಹೆಲಿಕಾಪ್ಟರ್‌ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಬಹುದು. ಮಧ್ಯ ಶ್ರೇಣಿಯ ಈ ಫಿರಂಗಿಯನ್ನು ಗುಡ್ಡಗಾಡು ಪ್ರದೇಶಗಳಿಗೂ ಸಾಗಿಸಿ ಬಳಸಬಹುದು.

* ಅಮೆರಿಕದಿಂದ ಭಾರತ 25 ಇಂತಹ ಗನ್‌ಗಳನ್ನು ಖರೀದಿಸಲಿದೆ. 120 ಗನ್‌ಗಳನ್ನು ಅಮೆರಿಕದಲ್ಲೇ ತಯಾರಿಸಲಾಗುವುದು.

2006ರಲ್ಲೇ ಈ ಕುರಿತ ಮಾತುಕತೆ ನಡೆದಿತ್ತಾದರೂ, ಅದು ಕಾರ್ಯಸಾಧುವಾಗಿದ್ದು ಕಳೆದ 3 ವರ್ಷದಲ್ಲಿ.
===============

ಕಾಮನ್‌ ಗನ್‌ ಟವರ್ಸ್‌

* ಭಾರತದ ಅಶೋಕ್‌ ಲೈಲೆಂಡ್‌ ಕಂಪನಿ ತಯಾರಿಸಿದ ಫಿರಂಗಿ ಎಳೆದೊಯ್ಯುವ ವಾಹನವಿದು.

* 6/6 ವಾಹನ ಇದಾಗಿದ್ದು, ಗುಡ್ಡಗಾಡು ಪ್ರದೇಶದಲ್ಲೂ ಇದನ್ನು ಕಾರ್ಯಾಚರಣೆ ಮಾಡಬಹುದು.

* ಗಂಟೆಗೆ 80 ಕಿ.ಮೀ ವೇಗದಲ್ಲಿ ಇದು ಚಲಿಸಬಲ್ಲದು.

* ಫಿರಂಗಿಯನ್ನು ಜೋಡಿಸಿದಾಗ ಇದರ ಗರಿಷ್ಠ ವೇಗ ಗಂಟೆಗೆ 50 ಕಿ.ಮೀ.

* ಮದ್ದುಗುಂಡುಗಳನ್ನು ಹೊಂದಿರುವ ಸುಮಾರು 2 ಟನ್‌ ತೂಕದ ಕ್ರೇನ್‌ ಅನ್ನು ಇದಕ್ಕೆ ಜೋಡಿಸಲಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ