ಆ್ಯಪ್ನಗರ

ಹಿಂದುಳಿದ ಸಮುದಾಯದ ಹಿಂದೂ ಐಕಾನ್‌ ಆಗಿದ್ದರು ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ !

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 1992ರ ಡಿಸೆಂಬರ್‌ 6ರಂದು ಬಾಬ್ರಿ ಮಸೀದಿ ಕೆಡವಿದ ಬಳಿಕ ಅದೇ ದಿನ ನೈತಿಕ ಹೊಣೆ ಹೊತ್ತ ಕಲ್ಯಾಣ್‌ ಸಿಂಗ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಮಮಂದಿರ ಹೋರಾಟದಲ್ಲೂ ಅವರು ಮೊದಲು ಭಾಗಿಯಾಗಿದ್ದರು. ಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಗೆ ತೆರಳುತ್ತೇನೆ ಎಂದು ಹೇಳಿದ್ದರು

Vijaya Karnataka 22 Aug 2021, 7:10 am

ಹೈಲೈಟ್ಸ್‌:

  • ಹಿಂದೂ ಐಕಾನ್‌, ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ ವಿಧಿವಶ
  • ಹಿಂದುಳಿದ ಸಮುದಾಯದ ಮಹಾನ್‌ ನಾಯಕ ಸಿಂಗ್‌
  • ಅಟಲ್‌ ಬಿಹಾರಿ ವಾಜಪೇಯಿ ಪ್ರೀತಿಯ ಗೆಳೆಯ ಕಲ್ಯಾಣ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web jpg (35)
ಹೊಸದಿಲ್ಲಿ: ಹಿಂದುಳಿದ ಸಮುದಾಯದ ಪ್ರಥಮ ಹಿಂದೂ ಐಕಾನ್‌ ಎನ್ನಿಸಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ (89) ದೀರ್ಘ ಕಾಲದ ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಸಂಜಯ್‌ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ (ಎಸ್‌ಜಿಪಿಜಿಐಎಂಎಸ್‌)ಯಲ್ಲಿಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ದಿನಗಳಿಂದ ಅವರಿಗೆ ರಕ್ತದೊತ್ತಡ ತೀರಾ ಕಡಿಮೆಯಾಗಿತ್ತು ಹಾಗೂ ಮೂತ್ರ ವಿಸರ್ಜನೆಯೂ ಸಾಧ್ಯವಾಗುತ್ತಿರಲಿಲ್ಲ. ಡಯಾಲಿಸಿಸ್‌ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಕಳೆದ ಜುಲೈ 4ರಂದು ಅವರ ದೇಹ ಇದ್ದಕ್ಕಿದ್ದಂತೆ ಊದಿಕೊಂಡು, ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು. ಮೊದಲು ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಉನ್ನತ ಚಿಕಿತ್ಸೆಗಾಗಿ ದಿಲ್ಲಿಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರವಷ್ಟೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಸಿಂಗ್‌ ಅವರು ಪತ್ನಿ ರಾಮವತಿ ಹಾಗೂ ಪುತ್ರ ರಾಜೀವ್‌ ಸಿಂಗ್‌ ಅವರನ್ನು ಅಗಲಿದ್ದಾರೆ.

ಬಿಜೆಪಿಯ ನಾಯಕರಾಗಿ, ಲಾಲ್‌ಕೃಷ್ಣ ಆಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಅವರ ಆಪ್ತರಾಗಿ, ಬಿಜೆಪಿ ತೊರೆದು, ಕೊನೆಗೆ ಬಿಜೆಪಿಗೆ ವಾಪಸಾಗಿದ್ದ ಕಲ್ಯಾಣ್‌ ಸಿಂಗ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಅಖಿಲೇಶ್‌ ಯಾದವ್‌, ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಬಾಬ್ರಿ ಮಸೀದಿ ಕೆಡವಿದಾಗ ಪದತ್ಯಾಗ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 1992ರ ಡಿಸೆಂಬರ್‌ 6ರಂದು ಬಾಬ್ರಿ ಮಸೀದಿ ಕೆಡವಿದ ಬಳಿಕ ಅದೇ ದಿನ ನೈತಿಕ ಹೊಣೆ ಹೊತ್ತ ಕಲ್ಯಾಣ್‌ ಸಿಂಗ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಮಮಂದಿರ ಹೋರಾಟದಲ್ಲೂ ಅವರು ಮೊದಲು ಭಾಗಿಯಾಗಿದ್ದರು. ಅಲ್ಲದೆ, ರಾಮಮಂದಿರ ನಿರ್ಮಾಣ ಕುರಿತು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ್ದಾಗ ಸಂತಸಗೊಂಡಿದ್ದ ಕಲ್ಯಾಣ್‌ ಸಿಂಗ್‌, ಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಗೆ ತೆರಳುತ್ತೇನೆ ಎಂದು ಹೇಳಿದ್ದರು. ಮಸೀದಿ ಕೆಡವಿದ ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತಾದರೂ ಕೋರ್ಟ್‌ ಖುಲಾಸೆಗೊಳಿಸಿತ್ತು.

ಬಿಜೆಪಿ ವಿರುದ್ಧ ಮುನಿಸು:
ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಕಲ್ಯಾಣ್‌ ಸಿಂಗ್‌ ಅವರು 1999ರಲ್ಲಿ ಅದೇ ಪಕ್ಷದ ಜತೆ ಮುನಿಸಿಕೊಂಡು ರಾಷ್ಟ್ರೀಯ ಕ್ರಾಂತಿ ಪಕ್ಷ ಸ್ಥಾಪಿಸಿದ್ದರು. ಆದರೆ, ಬಳಿಕ ಬಿಜೆಪಿ ಜತೆ ಪಕ್ಷವನ್ನು ವಿಲೀನಗೊಳಿಸಿದರು.

ಸಿಂಗ್‌ ಸಾಗಿದ ಹಾದಿ

ಜನನ: 1932, ಜನವರಿ 5 (ಉತ್ತರ ಪ್ರದೇಶದ ಅತ್ರೌಲಿ)

ವಿದ್ಯಾರ್ಹತೆ: ಪದವಿ

1967: ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ

1975ಧಿ-77: ತುರ್ತು ಪರಿಸ್ಥಿತಿ ವೇಳೆ 21 ತಿಂಗಳು ಜೈಲು ವಾಸ

1991: ನವೆಂಬರ್‌: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿಬಿಜೆಪಿಗೆ ಭರ್ಜರಿ ಗೆಲುವು, ಮುಖ್ಯಮಂತ್ರಿಯಾಗಿ ಕಲ್ಯಾಣ್‌ ಸಿಂಗ್‌ ಆಯ್ಕೆ

1992: ಬಾಬ್ರಿ ಮಸೀದಿಯ ನೆಲಸಮದ ನೈತಿಕ ಹೊಣೆ ಹೊತ್ತು ರಾಜೀನಾಮೆ

1997: ಎರಡನೇ ಬಾರಿಗೆ ಉತ್ತರ ಪ್ರದೇಶ ಸಿಎಂ ಆಗಿ ಆಯ್ಕೆ, 1999ರವರೆಗೆ ಆಡಳಿತ

1999: ಬಿಜೆಪಿ ತೊರೆದು ಸ್ವಂತ ಪಕ್ಷ ಸ್ಥಾಪನೆ, 2004ರಲ್ಲಿ ವಾಜಪೇಯಿ ಮನವಿ ಬಳಿಕ ಮತ್ತೆ ಬಿಜೆಪಿ ಸೇರ್ಪಡೆ

2004: ಲೋಕಸಭೆಗೆ ಆಯ್ಕೆ

2009: ಬಿಜೆಪಿ ಜತೆ ಭಿನ್ನಾಭಿಪ್ರಾಯ, ಸ್ವತಂತ್ರ ಅಭ್ಯರ್ಥಿಯಾಗಿ ಎತಾಹ್‌ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆ

2009: ಸಮಾಜವಾದಿ ಪಕ್ಷ ಸೇರ್ಪಡೆ

2013: ಮರಳಿ ಬಿಜೆಪಿಗೆ

2014: ರಾಜಸ್ಥಾನದ ರಾಜ್ಯಪಾಲರಾಗಿ ನೇಮಕ

2015: ಎಂಟು ತಿಂಗಳು ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ಆಡಳಿತ


ಕಲ್ಯಾಣ್‌ ಸಿಂಗ್‌ ಅವರ ಅಗಲಿಕೆಯ ಸುದ್ದಿ ತಿಳಿದು ಮಾತೇ ಹೊರಬರದಂತಾಗಿದೆ. ಉತ್ತಮ ಆಡಳಿತಗಾರರು, ಬೇರು ಮಟ್ಟದಿಂದ ಬೆಳೆದ ನಾಯಕರು, ಮಾನವತೆಯ ಸಾಕಾರ ಮೂರ್ತಿಯಾಗಿದ್ದ ಅವರು ಉತ್ತರ ಪ್ರದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ದೇಶದ ಸಂಸ್ಕೃತಿಯ ಪುನರುತ್ಥಾನಕ್ಕೆ ಅವರು ನೀಡಿದ ಕೊಡುಗೆ ಅಪಾರ.

-ನರೇಂದ್ರ ಮೋದಿ, ಪ್ರಧಾನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ