ಆ್ಯಪ್ನಗರ

ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಬೃಹತ್ ಪ್ರತಿಭಟನೆ: ಮೋದಿ, ಅಮಿತ್ ಶಾ ವಿರುದ್ಧ ಆಕ್ರೋಶ

ಕಾಶ್ಮೀರಿ ಪಂಡಿತ ಸಮುದಾಯದ ರಾಹುಲ್ ಭಟ್ ಎಂಬುವವರನ್ನು ತಹಶೀಲ್ದಾರ್ ಕಚೇರಿಗೆ ನುಗ್ಗಿದ ಉಗ್ರರು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಬೆನ್ನಲ್ಲೇ, ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರದ ಅನೇಕ ಭಾಗಗಳಲ್ಲಿ ರಸ್ತೆಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 13 May 2022, 11:48 am

ಹೈಲೈಟ್ಸ್‌:

  • ಜಮ್ಮು ಮತ್ತು ಕಾಶ್ಮೀರದ ಅನೇಕ ಕಡೆ ಕಾಶ್ಮೀರಿ ಪಂಡಿತರ ಪ್ರತಿಭಟನೆ
  • ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು
  • ತಮಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪ
  • ತಹಶೀಲ್ದಾರ್ ಕಚೇರಿಯೊಳಗೆ ನುಗ್ಗಿ ಪಂಡಿತನನ್ನು ಹತ್ಯೆ ಮಾಡಿದ್ದ ಉಗ್ರರು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kashmir pandit community protests in jammu and kashmir after rahul bhat killed by terrorists
ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಬೃಹತ್ ಪ್ರತಿಭಟನೆ: ಮೋದಿ, ಅಮಿತ್ ಶಾ ವಿರುದ್ಧ ಆಕ್ರೋಶ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಕಾಶ್ಮೀರ ಪಂಡಿತನ ಹತ್ಯೆಗೆ ಸಂಬಂಧಿಸಿದಂತೆ ಭಾರಿ ಪ್ರತಿಭಟನೆ ನಡೆದಿದೆ. ತಮ್ಮ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಶ್ಮೀರ ಕಣಿವೆಯ ಅನೇಕ ಭಾಗಗಳಲ್ಲಿ ಕಾಶ್ಮೀರಿ ಪಂಡಿತರ ಸಮುದಾಯ ಬೃಹತ್ ಪ್ರತಿಭಟನೆಗಳನ್ನು ನಡೆಸಿದೆ.
ಕಾಶ್ಮೀರಿ ಪಂಡಿತರ ಸಮುದಾಯದ ಸದಸ್ಯರು ತಮ್ಮ ತಾತ್ಕಾಲಿಕ ಶಿಬಿರಗಳಿಂದ ಹೊರಬಂದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ತಮಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಕೂಡ ಘೋಷಣೆಗಳನ್ನು ಕೂಗಿದರು. ಕೆಲವು ಸ್ಥಳಗಳಲ್ಲಿ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಸಲಾಯಿತು. ಕೆಲವು ಕಡೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಕಾಶ್ಮೀರಿ ಪಂಡಿತ್‌ ಬಲಿ! ತಹಶೀಲ್ದಾರ್‌ ಕಚೇರಿಯಲ್ಲಿಯೇ ಫೈರಿಂಗ್‌!

ಇದು ಮತ್ತೊಂದು ಉದ್ದೇಶಿತ ದಾಳಿಯಂತೆ ಕಂಡುಬಂದಿದ್ದು, ಬುದ್ಗಾಂ ಜಿಲ್ಲೆಯ ಚಂದೂರಾ ಗ್ರಾಮದಲ್ಲಿನ ತಹಶೀಲ್ದಾರ್ ಕಚೇರಿಗೆ ನುಗ್ಗಿದ ಉಗ್ರರು, ರಾಹುಲ್ ಭಟ್ ಎಂಬ 36 ವರ್ಷದ ಕಾಶ್ಮೀರಿ ಪಂಡಿತನ ಮೇಲೆ ಗುಂಡು ಹಾರಿಸಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವಿಪರೀತ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ವಿಶೇಷ ಪ್ಯಾಕೇಜ್ ಅಡಿಯಲ್ಲಿ ತಮ್ಮ ನೇಮಕಾತಿಯಾದ ಬಳಿಕ ಕಳೆದ 10 ವರ್ಷಗಳಿಂದ ತಹಶೀಲ್ದಾರ್ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅಂತಿಮ ಸಂಸ್ಕಾರ ನಡೆಸಲು ಅವರ ಮೃತದೇಹವನ್ನು ಜಮ್ಮುವಿಗೆ ಸಾಗಿಸಲಾಗಿದೆ.


ರಾಹುಲ್ ಭಟ್ ಅವರು, ಕಳೆದ ಆರು ತಿಂಗಳಲ್ಲಿ ಉಗ್ರರಿಂದ ಹತ್ಯೆಯಾದ ಮೂರನೇ ಕಾಶ್ಮೀರಿ ಪಂಡಿತರಾಗಿದ್ದಾರೆ. ಇನ್ನಿಬ್ಬರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ಕಳೆದ ಅಕ್ಟೋಬರ್‌ನಿಂದ ಕಾಶ್ಮೀರದಲ್ಲಿ ಕೆಲವು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಈ ಬಲಿಪಶುಗಳಲ್ಲಿ ಹೆಚ್ಚಿನವರು ಕೆಲಸ ಅರಸಿ ಅಲ್ಲಿಗೆ ಬಂದ ವಲಸೆ ಕಾರ್ಮಿಕರು ಮತ್ತು ಸ್ಥಳೀಯ ಕಾಶ್ಮೀರಿ ಪಂಡಿತರಾಗಿದ್ದಾರೆ.
ಕಾಶ್ಮೀರಿ ಪಂಡಿತನಿಗೆ ಉಗ್ರರ ಗುಂಡೇಟು: ಕಣಿವೆಯಲ್ಲಿ 24 ಗಂಟೆಗಳಲ್ಲಿ ನಾಲ್ಕು ದಾಳಿ

ಅಕ್ಟೋಬರ್ ತಿಂಗಳಲ್ಲಿ ಐದು ದಿನಗಳ ಅವಧಿಯಲ್ಲಿ ಏಳು ಮಂದಿ ನಾಗರಿಕರನ್ನು ಹತ್ಯೆ ಮಾಡಲಾಗಿತ್ತು. ಅವರಲ್ಲಿ ಒಬ್ಬ ಕಾಶ್ಮೀರಿ ಪಂಡಿತ್, ಸಿಖ್ ಹಾಗೂ ಇಬ್ಬರು ವಲಸಿಗ ಹಿಂದೂಗಳು ಸೇರಿದ್ದರು. ಈ ಘಟನೆಗಳ ಬಳಿಕ ಅಲ್ಪಸಂಖ್ಯಾತ ಪಂಡಿತರು ನೆಲೆಸಿರುವ ಶೇಖಪೊರಾದಿಂದ ಅನೇಕ ಕಾಶ್ಮೀರಿ ಪಂಡಿತ ಕುಟುಂಬಗಳು ಮನೆಗಳನ್ನು ತೊರೆದು ಪಲಾಯನ ಮಾಡಿದ್ದವು.

ಗುರುವಾರ ನಡೆದ ರಾಹುಲ್ ಪಂಡಿತ್ ಅವರ ಹತ್ಯೆ, ಕಾಶ್ಮೀರಿ ಪಂಡಿತರ ಸಮುದಾಯದಲ್ಲಿ ಮತ್ತೆ ಅಭದ್ರತೆಯ ಭೀತಿಯನ್ನು ಹೆಚ್ಚಿಸಿದ್ದು, ಅವರ ಪುನರ್ವಸತಿ ಕಾರ್ಯಕ್ಕೆ ಮತ್ತಷ್ಟು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಣಿವೆ ರಾಜ್ಯಕ್ಕೆ ಸಮುದಾಯದ ಮೂಲ ನಿವಾಸಿಗಳು ಮರಳಿ ಬರುವಂತೆ ಮನವಿ ಮಾಡುವುದರ ಜತೆಗೆ, ಅವರಿಗಾಗಿ ವಿಶೇಷ ಯೋಜನೆಗಳನ್ನು ಸರ್ಕಾರ ಪ್ರಕಟಿಸುತ್ತಿದೆ. ಅದರ ನಡುವೆಯೇ ಪದೇ ಪದೇ ನಡೆಯುತ್ತಿರುವ ದಾಳಿಗಳು, ಮರಳಿ ಬಂದ ಬಳಿಕವೂ ಅವರು ಸುರಕ್ಷಿತರಾಗಿರುವುದು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ