ಆ್ಯಪ್ನಗರ

ಸೇನೆಗೆ ಸೇರಲು ಕಾಶ್ಮೀರಿ ಯುವಕರ ಅತ್ಯುತ್ಸಾಹ

ಉಗ್ರರ ಉಪಟಳದಿಂದ ನಲುಗಿರುವ ಜಮ್ಮು-ಕಾಶ್ಮೀರದ ಯುವಕರು ಈಗ ಭಾರತೀಯ ಸೇನೆ ಸೇರಲು ಭಾರಿ ಉತ್ಸಾಹ ತೋರಿಸುತ್ತಿದ್ದಾರೆ ಕಣಿವೆ ರಾಜ್ಯದ ಯುವಕರಿಗಾಗಿ ಸೇನೆ ಸೆ...

Agencies 9 Sep 2019, 5:00 am
ಶ್ರೀನಗರ: ಉಗ್ರರ ಉಪಟಳದಿಂದ ನಲುಗಿರುವ ಜಮ್ಮು-ಕಾಶ್ಮೀರದ ಯುವಕರು ಈಗ ಭಾರತೀಯ ಸೇನೆ ಸೇರಲು ಭಾರಿ ಉತ್ಸಾಹ ತೋರಿಸುತ್ತಿದ್ದಾರೆ. ಕಣಿವೆ ರಾಜ್ಯದ ಯುವಕರಿಗಾಗಿ ಸೇನೆ ಸೆ.3ರಿಂದ ನಡೆಸುತ್ತಿರುವ ನೇಮಕಾತಿ ಅಭಿಯಾನದಲ್ಲಿ ಇದುವರೆಗೂ 29 ಸಾವಿರಕ್ಕೂ ಅಧಿಕ ಯುವಕರು ನೋಂದಣಿ ಮಾಡಿಸಿಕೊಂಡಿದ್ದಾರೆ.
Vijaya Karnataka Web kashmiri youth snub jihad turn up in huge numbers to join indian army
ಸೇನೆಗೆ ಸೇರಲು ಕಾಶ್ಮೀರಿ ಯುವಕರ ಅತ್ಯುತ್ಸಾಹ


ನೋಂದಣಿ ಮಾಡಿಸಿಕೊಂಡಿರುವ ಬಹುತೇಕರು 17 ವರ್ಷದಿಂದ 21 ವರ್ಷದವರು. ರೆಯಾಸಿ ಜಿಲ್ಲೆಯ ರೆಯಾಸಿಯಲ್ಲಿ ನಡೆಯುತ್ತಿರುವ ನೇಮಕಾತಿ ಶಿಬಿರಕ್ಕೆ ದೂರದ ಜಿಲ್ಲೆಗಳಿಂದಲೂ ಆಗಮಿಸುತ್ತಿದ್ದಾರೆ. ಭಾರತೀಯ ಸೇನಾಪಡೆ ಅಧಿಕಾರಿಗಳು ಕೂಡ ಕಾಶ್ಮೀರಿ ಯುವಕರ ಉತ್ಸಾಹ ಕಂಡು ಹರ್ಷಗೊಂಡಿದ್ದಾರೆ. ''ಸೇನೆಗೆ ಸೇರುವುದಷ್ಟೇ ನನ್ನ ಬಯಕೆಯಲ್ಲ, ನಾನು ಜನ್ಮತಾಳಿದ ಭೂಮಿಗೆ ಸೇವೆ ಮಾಡುವ ಅವಕಾಶ ಇದರಿಂದ ಸಿಗುತ್ತದೆ ಎಂಬ ಖುಷಿ ನನಗಿದೆ,'' ಎಂದು ನೇಮಕಾತಿಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಅಭಿಪ್ರಾಯಪಟ್ಟಿದ್ದಾರೆ.

ನೇಮಕಾತಿ ಅಭಿಯಾನದಲ್ಲಿ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಬಳಿಕ ಅವರನ್ನು ಸೇನೆಯ ವಿವಿಧ ರೆಜಿಮೆಂಟ್‌ಗಳಿಗೆ ನಿಯೋಜಿಸಿ ತರಬೇತಿ ಕೊಡಿಸಲಾಗುತ್ತದೆ. ಅರೆಸೈನಿಕ ಭದ್ರತಾ ಪಡೆಗಳ ಕಾವಲಿನಲ್ಲಿ ನೇಮಕಾತಿ ನಡೆಯುತ್ತಿದ್ದು, ಅಭ್ಯರ್ಥಿಗಳ ಸಂಚಾರ ವ್ಯವಸ್ಥೆಯ ಹೊಣೆಯನ್ನು ರಾಷ್ಟ್ರೀಯ ರೈಫೆಲ್ಸ್‌ ನಿರ್ವಹಿಸುತ್ತಿದೆ. ನೇಮಕಾತಿ ಶಿಬಿರ ಸೋಮವಾರ ಕೊನೆಗೊಳ್ಳಲಿದೆ.

ಉಗ್ರರ ನೇಮಕಾತಿಗೆ ಸೇನೆಯ ಸಡ್ಡು
ಉದ್ಯೋಗಾವಕಾಶಗಳಿಲ್ಲದೆ, ಭವಿಷ್ಯದ ಬಗ್ಗೆ ಸ್ಪಷ್ಟತೆಯಿಲ್ಲದೆ ಇರುವ ಕಾಶ್ಮೀರಿ ಯುವಕರ ಅನಿವಾರ್ಯತೆಯನ್ನು ತಮ್ಮ ಬಂಡವಾಳವಾಗಿಸಿಕೊಳ್ಳುತ್ತಿದ್ದ ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಯುವಕರಿಗೆ ಹಣದ ಆಮಿಷವೊಡ್ಡುವುದದರ ಜತೆಗೆ ಧರ್ಮದ ಹೆಸರಲ್ಲಿ ಕಟ್ಟಿಹಾಕಿ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಇಡುತ್ತಿದ್ದವು. ಯುವಕರು ಹಿಂಸೆಯ ಮಾರ್ಗ ತೊರೆದು ಮನೆಗೆ ಮರಳಲು ಬಯಸಿದರೂ ಅವರಿಗೆ ಆ ಮಾರ್ಗ ಸುಲಭದ್ದಾಗಿರಲಿಲ್ಲ. ಇದನ್ನು ಮನಗಂಡ ಕೇಂದ್ರ ಸರಕಾರ, ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಯುವಕರನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಉಗ್ರರ ಕುತಂತ್ರಗಳಿಗೆ ಸಡ್ಡು ಹೊಡೆಯುತ್ತಿದೆ.

ಪಾಕ್‌ನಿಂದ ಕದನವಿರಾಮ ಉಲ್ಲಂಘನೆ
ಉಗ್ರರನ್ನು ಭಾರತದೊಳಗೆ ನುಸುಳಿಸಿ ಹಿಂಸಾಚಾರಕ್ಕೆ ಪ್ರಚೋದಿಸಲು ಹವಣಿಸುತ್ತಿರುವ ಪಾಕಿಸ್ತಾನ ಜಮ್ಮು -ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್‌ ದಾಳಿ ನಡೆಸಿದೆ. ಸತತ ಎರಡು ದಿನಗಳಿಂದ ಎಲ್‌ಒಸಿ ಸುಂದರ್‌ಬನಿ ಸೆಕ್ಟರ್‌ ಹಾಗೂ ನೌಶೆರಾ ಸೆಕ್ಟರ್‌ನಲ್ಲಿನ ಗ್ರಾಮಗಳನ್ನು ಗುರಿಯಾಗಿಸಿ ಪಾಕ್‌ ಸೇನೆ ಭಾರಿ ಶೆಲ್‌ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡ ಪ್ರತಿದಾಳಿ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ.


ವಾಷಿಂಗ್ಟನ್‌ ಪೋಸ್ಟ್‌ ವಿರುದ್ಧ ಕಾಶ್ಮೀರಿ ಪಂಡಿತರ ಪ್ರತಿಭಟನೆ

370ನೇ ವಿಧಿ ರದ್ದತಿ ಬಳಿಕ ಜಮ್ಮು-ಕಾಶ್ಮೀರದಲ್ಲಿನ ಚಟುವಟಿಕೆಗಳು ಹಾಗೂ ಸ್ಥಿತಿಗತಿಗಳ ಬಗ್ಗೆ ಪೂರ್ವಗ್ರಹಪೀಡಿತವಾಗಿ ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ ದಿನಪತ್ರಿಕೆ ವರದಿ ಮಾಡುತ್ತಿದೆ ಎಂದು ಆರೋಪಿಸಿಪತ್ರಿಕೆ ಕಚೇರಿ ಎದುರು ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಿದ್ದಾರೆ. ವಿಶೇಷ ಸ್ಥಾನಮಾನ ಜಾರಿಯಲ್ಲಿದ್ದಾಗ ಜಮ್ಮು-ಕಾಶ್ಮೀರದಲ್ಲಿ ಹದಗೆಟ್ಟಿದ್ದ ಕಾನೂನು ವ್ಯವಸ್ಥೆ ಬಗ್ಗೆ ಪತ್ರಿಕೆ ಉದ್ದೇಶಿತ ನಿರ್ಲಕ್ಷ್ಯ ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 370ನೇ ವಿಧಿ ರದ್ದತಿಯಂಥ 'ದಿಟ್ಟ ಮತ್ತು ಐತಿಹಾಸಿಕ ' ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಲಿಖಿತ ಪತ್ರವೊಂದನ್ನು ಪ್ರತಿಭಟನಾಕಾರರು ಪತ್ರಿಕೆ ಆಡಳಿತ ಮಂಡಳಿಗೆ ನೀಡಿ, ವರದಿಗಳನ್ನು ಪರಿಶೀಲಿಸಲು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಭಾರತೀಯ ರಾಯಭಾರ ಕಚೇರಿ ಎದುರು ಮೋದಿ ಸರಕಾರದ 370ನೇ ವಿಧಿ ಕ್ರಮ ಖಂಡಿಸಿ ಅಮೆರಿಕದಲ್ಲಿನ ಮುಸ್ಲಿಮರ ಗುಂಪೊಂದು ಪ್ರತಿಭಟನೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ