ಆ್ಯಪ್ನಗರ

ಸರಕಾರದ ಹೇಳಿಕೆಗೆ ಖಂಡನೆ, ಕೇರಳದಲ್ಲಿ ಲವ್‌ ಜಿಹಾದ್‌ ಇರುವುದು ಸತ್ಯ ಎಂದ ಪಾದ್ರಿ

ಅಮಾಯಕ ಯುವತಿಯರನ್ನು 'ಲವ್‌ ಜಿಹಾದ್‌' ಖೆಡ್ಡಕ್ಕೆ ಕೆಡವಿ ಯುದ್ಧ ಸಂತ್ರಸ್ತ ಅರಬ್‌ ರಾಷ್ಟ್ರಗಳಲ್ಲಿ'ಲೈಂಗಿಕ ದಾಸಿ'ಯರನ್ನಾಗಿ ಪರಿವರ್ತಿಸುವ ದಂಧೆ ಕೇರಳದಲ್ಲಿಅವ್ಯಾಹತವಾಗಿ ನಡೆಯುತ್ತಿರುವುದು ಸತ್ಯ ಎಂದು ಪಾದ್ರಿಯೊಬ್ಬರು ಹೇಳಿದ್ದಾರೆ.

Vijaya Karnataka Web 27 Jan 2020, 8:15 am
ಕೊಚ್ಚಿ: ಅಮಾಯಕ ಯುವತಿಯರನ್ನು 'ಲವ್‌ ಜಿಹಾದ್‌' ಖೆಡ್ಡಕ್ಕೆ ಕೆಡವಿ ಯುದ್ಧ ಸಂತ್ರಸ್ತ ಅರಬ್‌ ರಾಷ್ಟ್ರಗಳಲ್ಲಿ'ಲೈಂಗಿಕ ದಾಸಿ'ಯರನ್ನಾಗಿ ಪರಿವರ್ತಿಸುವ ದಂಧೆ ಕೇರಳದಲ್ಲಿ ಅವ್ಯಾಹತವಾಗಿ ಸಾಗಿರುವುದು ಸತ್ಯ ಎಂದು ಕ್ಯಾಥೋಲಿಕ್‌ ಚರ್ಚ್ ನ ಹಿರಿಯ ಪಾದ್ರಿಯೊಬ್ಬರು ಭಾನುವಾರ ಆರೋಪಿಸಿದ್ದಾರೆ.
Vijaya Karnataka Web love jihad


ಲವ್‌ ಜಿಹಾದ್‌ ದಂಧೆ ಕೇರಳದಲ್ಲಿ ಮಿತಿಮೀರಿದೆ ಎಂದು ಸೈರೊ-ಮಲಬಾರ್‌ ಚರ್ಚ್ ಬಿಷಪ್‌ ಮೊದಲು ಧ್ವನಿ ಎತ್ತಿದಾಗ ಕೇರಳ ಸರಕಾರ ಸ್ಪಷ್ಟವಾಗಿ ನಿರಾಕರಿಸಿತ್ತು. ಸರಕಾರದ ಈ ಹೇಳಿಕೆ ಖಂಡಿಸಿರುವ ಕೇರಳ ಕ್ಯಾಥೋಲಿಕ್‌ ಬಿಷಫ್ಸ್‌ ಕೌನ್ಸಿಲ್‌ (ಕೆಸಿಬಿಸಿ)ನ ವಕ್ತಾರ ಫಾ.ವರ್ಗೀಸ್‌ ವಲ್ಲಿಕಟ್‌, ''ವಾಸ್ತವದ ಅನಾಚಾರಕ್ಕೆ ಸರಕಾರ ಕಣ್ಣುಮುಚ್ಚಿ ಕುಳಿತಿದೆ,'' ಎಂದು ಛೇಡಿಸಿದರು. ಲವ್‌ ಜಿಹಾದ್‌ಗೆ ವಿಡಿಯೊ ಸಾಕ್ಷಿ ಬಿಡುಗಡೆ ಮಾಡಿದ ವಲ್ಲಿಕಟ್‌, ''ಕೇರಳದಿಂದ ನಿತ್ಯವೂ ಮಹಿಳೆಯರು, ಹೆಣ್ಣು ಮಕ್ಕಳು ಕಣ್ಮರೆಯಾಗುತ್ತಿದ್ದಾರೆ. ಇದನ್ನು ನೋಡಿಯೂ ನೋಡದಂತೆ ಸರಕಾರ ನಟಿಸುತ್ತಿದೆ. ಸೂಕ್ತ ಸಮೀಕ್ಷೆ ನಡೆಯದೇ ಇರುವುದರಿಂದ ಈ ದಂಧೆಗೆ ಮೌನ ಸಮ್ಮತಿ ನೀಡಿದಂತಾಗಿದೆ. ಇದನ್ನು ತಡೆಯುವ ದಿಸೆಯಲ್ಲಿಕೇಂದ್ರ ಸರಕಾರವೂ ಉದಾಸೀನ ವಹಿಸಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

''ಕಣ್ಮರೆಯಾಗುವ ಮಹಿಳೆಯರು, ಮಕ್ಕಳ ಪತ್ತೆಗೆ ಸರಕಾರಗಳು ಮುತುವರ್ಜಿ ವಹಿಸಿಲ್ಲ. ಇದುವರೆಗೆ ಯಾವುದೇ ತನಿಖೆ ನಡೆದಿಲ್ಲ. ಕಣ್ಮರೆಯಾಗುವ ಆ ಅಮಾಯಕರು ವಿದೇಶಗಳಲ್ಲಿ ಲೈಂಗಿಕ ದಾಸಿಯರಾಗಿ ಪತ್ತೆಯಾಗುತ್ತಿದ್ದಾರೆ. ಭಯೋತ್ಪಾದಕ ಕುಕೃತ್ಯಗಳಿಗೂ ಅವರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ,'' ಎಂದು ವಿವರಿಸಿದರು.

ಕಾಸರಗೋಡು ಲವ್‌ ಜಿಹಾದ್‌ ಪ್ರಕರಣ: ಸಿಐಡಿಗೆ ವಹಿಸುವಂತೆ ಶೋಭಾ ಕರಂದ್ಲಾಜೆ ಮನವಿ

ಕೇರಳದ ಕ್ರಿಶ್ಚಿಯನ್‌ ಮಹಿಳೆಯೊಬ್ಬರನ್ನು ಲವ್‌ ಜಿಹಾದ್‌ ಖೆಡ್ಡಕ್ಕೆ ಬೀಳಿಸಿ ನಂತರ ಸಿರಿಯಾಕ್ಕೆ ಕರೆದೊಯ್ದು, ಅಲ್ಲಿಂದ ಅಫಘಾನಿಸ್ತಾನಕ್ಕೆ ಸಾಗಿಸಿ ಮುಗಿಸಿ ಹಾಕಿದ ದುರಂತ ಕಥೆಯನ್ನು ಬಿಚ್ಚಿಟ್ಟ ಫಾ.ವಲ್ಲಿಕಟ್‌, ಗಲಭೆ ಗ್ರಸ್ತ ಅರಬ್‌ ರಾಷ್ಟ್ರಗಳ ಅನೇಕ ಜೈಲುಗಳಲ್ಲಿಇಂತಹ ಅಮಾಯಕರು ಈಗಲೂ ಕೊಳೆಯುತ್ತಿದ್ದಾರೆ ಎಂದರು. ಕೋರ್ಟ್‌ ಆದೇಶದ ನಂತರವೂ ಕೇರಳ ಸರಕಾರ ಲವ್‌ ಜಿಹಾದ್‌ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಅಂಕಿ ಅಂಶಗಳನ್ನು ಇಡುತ್ತಿಲ್ಲ. ಇದರಿಂದ ದುಷ್ಕರ್ಮಿಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗಿದೆ ಎಂದು ಬೇಸರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ