ಆ್ಯಪ್ನಗರ

ಶಬರಿಮಲೆಯಲ್ಲಿ 15000 ಪೊಲೀಸರು ಬೇಕೆ? ಎಷ್ಟು ದಿನ ಈ ಸರ್ಪಗಾವಲು? ಕೇರಳ ಹೈಕೋರ್ಟ್‌ ಕಿಡಿ

ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಿ ಸೆ.28ರಂದು ಸುಪ್ರೀಂ ತೀರ್ಪು ನೀಡಿದ ಬಳಿಕ ಕಳೆದ ಶುಕ್ರವಾರ ಸಂಜೆಯಿಂದ ಮೂರನೇ ಬಾರಿಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಎರಡು ದಿನ ದೇವಸ್ಥಾನದ ಆವರಣದಲ್ಲಿ ಶಾಂತ ಪರಿಸ್ಥಿತಿ ಇತ್ತು. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಅಲ್ಲಿ ಈಗ ರಾತ್ರಿ 11ರ ಬಳಿಕ ತಂಗಲು ಭಕ್ತರಿಗೆ ಅವಕಾಶವಿಲ್ಲ.

Vijaya Karnataka 20 Nov 2018, 8:53 am
ಶಬರಿಮಲೆ: ಭಾನುವಾರ ಶಾಂತವಾಗಿದ್ದ ಶಬರಿಮಲೆ ಸೋಮವಾರ ಮತ್ತೆ ಪ್ರಕ್ಷುಬ್ಧಗೊಂಡಿದೆ. ನಿಯಮ ಉಲ್ಲಂಘಿಸಿ ರಾತ್ರಿಯೂ ಶಬರಿಮಲೆಯಲ್ಲಿ ತಂಗಿದ್ದ 69 ಭಕ್ತರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಪ್ರತಿಭಟನೆ ಪುನಃ ಭುಗಿಲೆದ್ದಿದೆ. ಪೊಲೀಸ್‌ ಕ್ರಮಕ್ಕೆ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ವಾಕ್ಸಮರ ಮುಂದುವರಿದಿದೆ.
Vijaya Karnataka Web sabarimala


ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಿ ಸೆ.28ರಂದು ಸುಪ್ರೀಂ ತೀರ್ಪು ನೀಡಿದ ಬಳಿಕ ಕಳೆದ ಶುಕ್ರವಾರ ಸಂಜೆಯಿಂದ ಮೂರನೇ ಬಾರಿಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಎರಡು ದಿನ ದೇವಸ್ಥಾನದ ಆವರಣದಲ್ಲಿ ಶಾಂತ ಪರಿಸ್ಥಿತಿ ಇತ್ತು. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಅಲ್ಲಿ ಈಗ ರಾತ್ರಿ 11ರ ಬಳಿಕ ತಂಗಲು ಭಕ್ತರಿಗೆ ಅವಕಾಶವಿಲ್ಲ. ಅದರ ಅರಿವಿಲ್ಲದೆ ಅಲ್ಲಿ ರಾತ್ರಿ ಕಳೆಯಲು ಮುಂದಾಗಿದ್ದ 69 ಭಕ್ತರನ್ನು ಪೊಲೀಸರು ಭಾನುವಾರ ರಾತ್ರಿ ವಶಕ್ಕೆ ಪಡೆದು ಸೋಮವಾರ ಬೆಳಗ್ಗೆ ಮಣ್ಣಿಯಾರ್‌ ಶಿಬಿರಕ್ಕೆ ಕರೆದೊಯ್ದರು. ಈ ಕ್ರಮವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಕೆಲ ಬಲಪಂಥೀಯ ಸಂಘಟನೆಗಳ ಕಾರ‍್ಯಕರ್ತರು ರಾಜ್ಯಾದ್ಯಾಂತ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಕೊಝಿಕ್ಕೋಡ್‌ನಲ್ಲಿ ಬಲಪಂಥೀಯ ಸಂಘಟನೆಗಳ ಕಾರ‍್ಯಕರ್ತರು ಸಿಎಂ ಗಾವಲು ಪಡೆ ವಾಹನ ಅಡ್ಡಗಟ್ಟಲು ಯತ್ನಿಸಿದ ಬೆಳವಣಿಗೆಯೂ ನಡೆಯಿತು.

ಖಾಕಿ ನಡೆಗೆ ಹೈಕೋರ್ಟ್‌ ಬೇಸರ:

ಮುಂಜಾಗ್ರತಾ ಕ್ರಮವಾಗಿ 69 ಭಕ್ತರನ್ನು ಬಂಧಿಸಿದ ಪೊಲೀಸರ ಕ್ರಮದ ವಿರುದ್ಧ ಕೇರಳ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸಿದರೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಸೆಕ್ಷನ್‌ 144 ಉಲ್ಲಂಘಿಸಿದ್ದರಿಂದ ಪೊಲೀಸರು ಭಕ್ತರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಅಡ್ವೊಕೇಟ್‌ ಜನರಲ್‌ ಅವರ ವಾದಕ್ಕೆ ನ್ಯಾಯಾಲಯ, ''ಸನ್ನಿಧಾನದಲ್ಲಿ 15,000 ಪೊಲೀಸರ ನಿಯೋಜನೆಯ ಅಗತ್ಯವಿಲ್ಲ ಎಂದೆನಿಸುತ್ತದೆ. ತುಪ್ಪಾಭಿಷೇಕಕ್ಕಾಗಿ ರಾತ್ರಿ ಹೊತ್ತು ಸನ್ನಿಧಾನದಲ್ಲಿ ಕಳೆಯಲು ಭಕ್ತರಿಗೆ ಅವಕಾಶ ಮಾಡಿಕೊಡಬೇಕು,'' ಎಂದು ಸೂಚಿಸಿತು.

100 ಕೋಟಿ ಎಲ್ಲಿ?

ನಿಲಕ್ಕಲ್‌, ಪಂಪಾ ಹಾಗೂ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಭಕ್ತರಿಗೆ ಕಲ್ಪಿಸಲಾಗಿರುವ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಅಲ್ಫಾನ್ಸೊ ಕಣ್ಣನ್‌ತಾನಂ, ''ಕೇಂದ್ರವು ಶಬರಿಮಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆಂದು 2016ರಲ್ಲಿ 100 ಕೋಟಿ ರೂ. ಮೀಸಲಿಟ್ಟಿದ್ದು, ಇದರಲ್ಲಿ 18 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಇದುವರೆಗೂ ನಯಾಪೈಸೆಯ ಕಾಮಗಾರಿಗಳು ನಡೆದಿಲ್ಲ. ದುಡ್ಡು ಎಲ್ಲಿ ಹೋಯಿತು,'' ಎಂದು ಪ್ರಶ್ನಿಸುವ ಮೂಲಕ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಕಣ್ಣನ್‌ತಾನಂ ಆರೋಪಕ್ಕೆ ಸಿಪಿಎಂ ರಾಜ್ಯ ಕಾರ‍್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್‌, ''ಆರೆಸ್ಸೆಸ್‌ ಶಬರಿಮಲೆಯನ್ನು 'ಖಲಿಸ್ತಾನ್‌ ಮಾದರಿ'ಯ ಹೋರಾಟದ ತಾಣವಾಗಿಸಲು ಯತ್ನಿಸುತ್ತಿದೆ,'' ಎಂದು ತಿರುಗೇಟು ನೀಡಿದ್ದಾರೆ.

ವ್ರತ ಕೈಗೊಂಡಿರುವ ಮಹಿಳೆಯರು

ವಿವಾದದ ನಡುವೆ ಕಣ್ಣೂರು ಜಿಲ್ಲೆಯ ರೇಷ್ಮಾ ನಿಶಾಂತ್‌, ಅನಿಲಾ, ಕೊಲ್ಲಂ ಜಿಲ್ಲೆಯ ಧನ್ಯಾ ಎಂಬ ಯುವ ಮಹಿಳೆಯರು ಶಬರಿಮಲೆ ಯಾತ್ರೆ ಕೈಗೊಳ್ಳುವ ಬಯಕೆಯೊಂದಿಗೆ ಮಾಲೆ ಧರಿಸಿ, ಕಟ್ಟುನಿಟ್ಟಿನ ವ್ರತ ಪಾಲಿಸುತ್ತಿದ್ದಾರೆ. ''ನಮಗೆ ಪ್ರಚಾರದ ಹುಚ್ಚು ಇಲ್ಲ. ನಾವು ಅಪ್ಪಟ ಅಯ್ಯಪ್ಪನ ಭಕ್ತರು. ವೃತವನ್ನು ಪಾಲಿಸುತ್ತಿದ್ದು, ದರ್ಶನಕ್ಕಾಗಿ ಕಾಯುತ್ತಿದ್ದೇವೆ. ಅವಕಾಶ ಸಿಗುವ ಭರವಸೆಯಲ್ಲಿದ್ದೇವೆ,'' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ನಡುವೆ, ಹಿಂದೂ ಐಕ್ಯ ವೇದಿ ಅಧ್ಯಕ್ಷೆ ಕೆ.ಪಿ.ಶಶಿಕಲಾ ಅವರು ಸೋಮವಾರ ಪೊಲೀಸ್‌ ಭದ್ರತೆಯಲ್ಲಿ ಬೆಟ್ಟ ಏರಿ ಅಯ್ಯಪ್ಪಸ್ವಾಮಿ ದರ್ಶನ ಪಡೆದರು. ಮೊಮ್ಮಕ್ಕಳ ಅನ್ನ ಪ್ರಾಶನಕ್ಕಾಗಿ ಪೂಜೆ ಸಲ್ಲಿಸಲು ತಾವು ಶಬರಿಮಲೆಗೆ ಬಂದಿದ್ದಾಗಿ ಅವರು ಪೊಲೀಸರ ಬಳಿ ಹೇಳಿಕೆ ನೀಡಿದ್ದರಿಂದ ದರ್ಶನಕ್ಕೆ ಅವಕಾಶ ನೀಡಲಾಯಿತು.

ಸುಪ್ರೀಂಗೆ ಟಿಡಿಬಿ ಅರ್ಜಿ

ಸುಪ್ರೀಂಕೋರ್ಟ್‌ ತೀರ್ಪು ಅನುಷ್ಠಾನಕ್ಕೆ ಹೆಚ್ಚಿನ ಕಾಲಾವಕಾಶ ಕೋರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಕೇರಳ ಸರಕಾರ ಅಯ್ಯಪ್ಪ ಭಕ್ತರನ್ನು ದರೋಡೆಕೋರರಂತೆ ನಡೆಸಿಕೊಳ್ಳುತ್ತಿದೆ. ಶಬರಿಮಲೆಯಲ್ಲಿ ಸೆಕ್ಷನ್‌ 144 ನಿಷೇಧಾಜ್ಞೆ ಜಾರಿಗೊಳಿಸಿದ್ದೇಕೆ? ಇದೆಲ್ಲವೂ ಭಕ್ತರನ್ನು ನಿಯಂತ್ರಿಸುವ ಹುನ್ನಾರವಲ್ಲದೇ ಮತ್ತೇನೂ ಅಲ್ಲ.
- ಅಲ್ಫಾನ್ಸೊ ಕಣ್ಣನ್‌ತಾನಂ, ಕೇಂದ್ರ ಪ್ರವಾಸೋದ್ಯಮ ಸಚಿವ

ಪೊಲೀಸ್‌ ವಶದಲ್ಲಿರುವವರು ಅಯ್ಯಪ್ಪನ ನಿಜವಾದ ಭಕ್ತರಲ್ಲ. ಅವರೆಲ್ಲರೂ ಆರೆಸ್ಸೆಸ್‌ ಕಾರ‍್ಯಕರ್ತರು. ಅಯ್ಯಪ್ಪನ ಸನ್ನಿಧಾನದಲ್ಲಿ ಅಶಾಂತಿ ಹುಟ್ಟುಹಾಕುವ ಅವರ ಪ್ರಯತ್ನ ನಡೆಯದು.
-ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ

ಶಬರಿಮಲೆ ವಿಷಯದಲ್ಲಿ ಕೇರಳ ಸರಕಾರ ಸರ್ವಾಕಾರಿ ಹಿಟ್ಲರ್‌ನಂತೆ ವರ್ತಿಸುತ್ತಿದೆ. ಅಯ್ಯಪ್ಪ ಸ್ವಾಮಿ ಎಲ್ಲರಿಗೂ ಸೇರಿದವ. ಹೀಗಿದ್ದರೂ ಅಯ್ಯಪ್ಪನ ಭಕ್ತರು ಆರೆಸ್ಸೆಸ್‌ನವರು ಎಂದು ಸರಕಾರ ಬ್ರಾಂಡ್‌ ಮಾಡುತ್ತಿದೆ.
- ರಮೇಶ್‌ ಚೆನ್ನಿತ್ತಾಲ, ಕಾಂಗ್ರೆಸ್‌ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ