ಆ್ಯಪ್ನಗರ

ಅವರ ಪ್ರೀತಿ'ಗೇ' ಗೆಲುವು

ಪರಸ್ಪರ ಸಮ್ಮತವಿರುವ ಸಲಿಂಗಕಾಮ ಅಪರಾಧವಲ್ಲ ಎಂಬ ಚಾರಿತ್ರಿಕ ತೀರ್ಪನ್ನು ಸುಪ್ರೀಂಕೋರ್ಟ್‌ ಗುರುವಾರ ನೀಡಿದೆ. ಇದರೊಂದಿಗೆ ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಜಗತ್ತಿನ 26ನೇ ರಾಷ್ಟ್ರವಾಗಿ ಭಾರತ ದಾಖಲಾಗಿದೆ.

Vijaya Karnataka 7 Sep 2018, 7:45 am
ಹೊಸದಿಲ್ಲಿ: ಪರಸ್ಪರ ಸಮ್ಮತವಿರುವ ಸಲಿಂಗಕಾಮ ಅಪರಾಧವಲ್ಲ ಎಂಬ ಚಾರಿತ್ರಿಕ ತೀರ್ಪನ್ನು ಸುಪ್ರೀಂಕೋರ್ಟ್‌ ಗುರುವಾರ ನೀಡಿದೆ. ಇದರೊಂದಿಗೆ ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಜಗತ್ತಿನ 26ನೇ ರಾಷ್ಟ್ರವಾಗಿ ಭಾರತ ದಾಖಲಾಗಿದೆ.
Vijaya Karnataka Web Supreme Court


ವ್ಯಕ್ತಿ ಮತ್ತು ಸಮಾನತೆಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ, ಸಮಾನ ಲಿಂಗಿಗಳ ನಡುವಿನ ಲೈಂಗಿಕ ಸಂಪರ್ಕಕ್ಕೆ ಅಪರಾಧದ ಪಟ್ಟ ನೀಡಿದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ರ ಕೆಲವು ಭಾಗಗಳನ್ನು ಅಸಿಂಧು ಎಂದು ಸಾರಿದೆ.

17 ವರ್ಷ ಕಾಲ ನಡೆದ ಸುದೀರ್ಘ ಕಾನೂನು ಸಮರದ ಬಳಿಕ ದೊರಕಿದ ವಿಜಯಕ್ಕೆ ಸಲಿಂಗ ಕಾಮಿ, ದ್ವಿಲಿಂಗಿ, ಲಿಂಗ ಪರಿವರ್ತಿತ ಸಮುದಾಯ ತೃಪ್ತಿ ವ್ಯಕ್ತಪಡಿಸಿದ್ದು, ದೇಶಾದ್ಯಂತ ಸಂಭ್ರಮಾಚರಿಸಿತು.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ, ಆರ್‌.ಎಫ್‌. ನಾರಿಮನ್‌, ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು, ''ಇದುವರೆಗೂ ಅವರ ಹಕ್ಕುಗಳನ್ನು ನಿರಾಕರಿಸಿ, ಪ್ರಾಣಭಯದಿಂದ ಬದುಕುವಂತೆ ಮಾಡಿದ್ದಕ್ಕಾಗಿ ಇತಿಹಾಸವು ಸಲಿಂಗಿ ಸಮುದಾಯದ ಕ್ಷಮೆ ಕೇಳಬೇಕಾಗಿದೆ,'' ಎಂದು ಭಾವುಕವಾಗಿ ಸ್ಪಂದಿಸಿದೆ. ನಾಲ್ವರೂ ನ್ಯಾಯಾಧೀಶರು ಪ್ರತ್ಯೇಕವಾದ ಆದರೆ ಸಹಮತದ ತೀರ್ಪುನ್ನು ನೀಡಿದರು.

ಸೆಕ್ಷನ್‌ 377ರ ಅನ್ಯ ವಿಷಯ ಅನ್ವಯ

ಐಪಿಸಿ ಸೆಕ್ಷನ್‌ 377ರಲ್ಲಿ ಸಲಿಂಗಕಾಮವನ್ನು 'ಅಪರಾಧ'ದಿಂದ ಮುಕ್ತಗೊಳಿಸಲಾಗಿದೆ. ಉಳಿದಂತೆ ಪ್ರಾಣಿಗಳು ಮತ್ತು ಮಕ್ಕಳ ಜತೆಗಿನ ಅನೈಸರ್ಗಿಕ ಲೈಂಗಿಕತೆಯನ್ನು ಅಪರಾಧವಾಗಿಯೇ ಉಳಿಸಲಾಗಿದೆ.

ಕಣ್ಣೀರಧಾರೆ, ಸಂಭ್ರಮ

ಸುಪ್ರೀಂ ತೀರ್ಪಿಗಾಗಿ ಕಾದಿದ್ದ ಸಾವಿರಾರು ಸಲಿಂಗಿಗಳು ತೀರ್ಪು ಹೊರಬೀಳುತ್ತಿದ್ದಂತೆಯೇ ಕೊನೆಗೂ ಗೌರವಯುತ ಬದುಕು ಸಿಕ್ಕಿದ್ದಕ್ಕಾಗಿ ಭಾವುಕರಾಗಿ ಕಣ್ಣೀರು ಹಾಕಿದರು, ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಸಂಭ್ರಮಾಚರಿಸಿದರು. ಸಲಿಂಗ ಸಂಬಂಧದ ಹೆಮ್ಮೆಯಾದ ಕಾಮನಬಿಲ್ಲು ವರ್ಣದ ಧ್ವಜವನ್ನು ಹಾರಿಸಿದರು.

ಐತಿಹಾಸಿಕ ತೀರ್ಪು, ನಿಜಕ್ಕೂ ಇವತ್ತು ಹೆಮ್ಮೆಯಾಗುತ್ತಿದೆ. ಸಲಿಂಗ ಕಾಮವನ್ನು ಅಪರಾಧ ಮುಕ್ತಗೊಳಿಸಿದ ಮತ್ತು ಸೆಕ್ಷನ್‌ 377ರನ್ನು ಅಸಿಂಧು ಎಂದು ಸಾರಿದ ತೀರ್ಪು ಮಾನವತೆ ಮತ್ತು ಸಮಾನ ಹಕ್ಕಿಗೆ ಸಂದ ಜಯ. ದೇಶಕ್ಕೆ ಆಮ್ಲಜನಕದ ಮರುಜೋಡಣೆಯಾಗಿದೆ.
- ಕರಣ್‌ ಜೋಹರ್‌, ಚಿತ್ರ ನಿರ್ದೇಶಕ

ಪರಿಣಾಮಗಳೇನು?

- ಸಂಬಂಧವನ್ನು ಮುಕ್ತವಾಗಿ ಘೋಷಿಸಬಹುದು.

- ಗೌರವಯುತ ಬದುಕಿಗೆ ಅವಕಾಶ.

- ಜತೆಯಾಗಿ ತಿರುಗಾಡಬಹುದು.

- ಸೆಕ್ಷನ್‌ 377 ಅಡಿ ದಾಖಲಾದ ಪ್ರಕರಣಗಳ ರದ್ದು

ಸುಪ್ರೀಂ ಖಡಕ್‌ ನುಡಿಗಳು

* ಸಲಿಂಗಿಗಳಿಗೆ ಗೌರವದಿಂದ ಬದುಕುವ ಹಕ್ಕಿದೆ. ಅದನ್ನು ಕಿತ್ತುಕೊಂಡರೆ ಅವರನ್ನು ಕೊಂದಂತೆ: ಸಿಜೆಐ

* ಖಾಸಗಿ ಜಾಗದಲ್ಲಿ ನಡೆಯುವ ಸಲಿಂಗ ಸಂಬಂಧವು ಸಾರ್ವಜನಿಕ ಸಭ್ಯತೆ ಅಥವಾ ನೈತಿಕತೆಗೆ ಧಕ್ಕೆ ತರುವುದಿಲ್ಲ.

* ಪ್ರತಿಯೊಬ್ಬರಿಗೂ ಅವರ ದೇಹದ ಮೇಲೆ ಸರ್ವ ಆಧಿಕಾರವಿರುತ್ತದೆ. ಅದರ ಸ್ವಾಯತ್ತತೆಯನ್ನು ಅವರು ಬಯಸಿದ ವ್ಯಕ್ತಿಗೆ ಒಪ್ಪಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ