ಆ್ಯಪ್ನಗರ

ಮಹಾರಾಷ್ಟ್ರ ಸಿಎಂ ಫಡ್ನವಿಸ್‌ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರನ್ನು ಔರಂಗಾಬಾದ್‌ಗೆ ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ ಮಿತಿಮೀರಿದ ಭಾರದಿಂದಾಗಿ ಹಾರಾಟ ನಡೆಸಲಾಗದೆ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

Vijaya Karnataka Web 9 Dec 2017, 10:33 pm
ನಾಸಿಕ್‌: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರನ್ನು ಔರಂಗಾಬಾದ್‌ಗೆ ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ ಮಿತಿಮೀರಿದ ಭಾರದಿಂದಾಗಿ ಹಾರಾಟ ನಡೆಸಲಾಗದೆ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
Vijaya Karnataka Web maharashtra cm devendra fadnaviss helicopter force lands in nashik
ಮಹಾರಾಷ್ಟ್ರ ಸಿಎಂ ಫಡ್ನವಿಸ್‌ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ


ಹೆಲಿಕಾಪ್ಟರ್‌ ಓವರ್‌ಲೋಡ್‌ನಿಂದಾಗಿ ಹಾರಾಟ ನಡೆಸಲಾಗದೆ ಬಲವಂತದ ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಸ್ತವದಲ್ಲಿ ಇದು ಐದು ಸೀಟ್‌ಗಳ ಹೆಲಿಕಾಪ್ಟರ್‌ ಆಗಿದ್ದು, ಘಟನೆ ನಡೆದ ಸಂದರ್ಭ ನಾಲ್ವರು ಮಾತ್ರ ಪ್ರಯಾಣಿಕರಿದ್ದರು. ಆದರೆ ಕೆಲವು ಬ್ಯಾಗ್‌ಗಳು ಕೂಡ ಇದ್ದುದರಿಂದ ಭಾರದ ಮಿತಿ ಮೀರಿತು ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಫಡ್ನವಿಸ್‌ ಜತೆಗೆ ವೈದ್ಯಕೀಯ ಶಿಕ್ಷಣ ಮತ್ತು ನೀರಾವರಿ ಸಚಿವರಾದ ಗಿರೀಶ್‌ ಮಹಾಜನ್‌, ಅಭಿಮನ್ಯು ಪವಾರ್‌, ಮುಖ್ಯಮಂತ್ರಿಗಳ ಆಪ್ತ ಸಹಾಯಕ ಮತ್ತು ಅಡುಗೆಯಾಳು ಸತೀಶ್‌ ಹೆಲಿಕಾಪ್ಟರ್‌ನಲ್ಲಿ ಇದ್ದರು.

'ಹೆಲಿಕಾಪ್ಟರ್‌ ನಾಸಿಕ್‌ನಿಂದ ಹಾರಾಟ ಆರಂಭಿಸಿದ ಕೂಡಲೇ ಮಿತಿಮೀರಿದ ಭಾರದಿಂದ ಸಮತೋಲನ ಕಳೆದುಕೊಳ್ಳತೊಡಗಿತು. ಹೀಗಾಗಿ ಕೂಡಲೇ ಪೈಲಟ್‌ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಡುಗೆಯ ಸಿಬ್ಬಂದಿ ಮತ್ತು ಕೆಲವು ಲಗ್ಗೇಜ್‌ಗಳನ್ನು ಇಳಿಸಿದ ಬಳಿಕ ಹೆಲಿಕಾಪ್ಟರ್‌ ಮತ್ತೆ ಪ್ರಯಾಣ ಬೆಳೆಸಿತು. ಶುಕ್ರವಾರ ರಾತ್ರಿ ನಾಸಿಕ್‌ಗೆ ಆಗಮಿಸಿದ್ದ ಫಡ್ನವಿಸ್‌ ಕಾರ್ಯನಿಮಿತ್ತ ಔರಂಗಾಬಾದ್‌ಗೆ ಹೊರಟಿದ್ದರು. ಅನಂತರ ಸೋಮವಾರದಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಾಗಪುರಕ್ಕೆ ತೆರಳಬೇಕಿತ್ತು.

ರಾಜ್ಯ ಸರಕಾರ ಎರಡು ಹೆಲಿಕಾಪ್ಟರ್‌ಗಳನ್ನು ಹೊಂದಿದ್ದು, ಎರಡೂ ಸುಸ್ಥಿತಿಯಲ್ಲಿಲ್ಲ ಎಂದು ರಾಜ್ಯ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದರು.

ಹಿಂದೆಯೂ ಎರಡು ಬಾರಿ ಫಡ್ನವಿಸ್‌ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.


NASHIK: A helicopter ferrying Maharashtra Chief Minister Devendra Fadnavis to Aurangabad landed soon after take off from Nashik as it couldn't stabilise due to overloading on Saturday morning.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ