ಆ್ಯಪ್ನಗರ

ಜಾತ್ಯತೀತ ನಿಲುವಿನೊಂದಿಗೆ ಮೃದು ಹಿಂದುತ್ವ ಓಕೆ ! ಶಿವಸೇನಾ ಮೈತ್ರಿಗೆ ಸೋನಿಯಾ ಷರತ್ತು

ಮೃದು ಹಿಂದುತ್ವ ಧೋರಣೆ ಅಡ್ಡಿಯಿಲ್ಲ, ಆದರೆ ಜಾತ್ಯತೀತ ನಿಲುವಿಗೆ ಬದ್ಧವಾಗಿರಬೇಕೆಂಬ ಹೊಸ ಷರತ್ತನ್ನು ಕಾಂಗ್ರೆಸ್ ಶಿವಸೇನೆಗೆ ವಿಧಿಸಿದೆ. ಮೈತ್ರಿ ಪಕ್ಕಾ ಆಗಬೇಕಾದರೆ ಈ ಷರತ್ತನ್ನು ಒಪ್ಪಿಕೊಳ್ಳಬೇಕು ಎನ್ನುತ್ತಿದೆ ಕಾಂಗ್ರೆಸ್

Vijaya Karnataka 14 Nov 2019, 10:23 pm
ಹೊಸದಿಲ್ಲಿ: ಜಾತ್ಯತೀತ ನಿಲುವಿಗೆ ಬದ್ಧವಾಗಿ ನಡೆದುಕೊಳ್ಳುವುದಾಗಿ ಶಿವಸೇನೆ ಖಾತರಿಪಡಿಸಿದ ಬಳಿಕವಷ್ಟೇ ಸರಕಾರ ರಚನೆ ವಿಚಾರವಾಗಿ ಆ ಪಕ್ಷದ ಜತೆ ಮಾತುಕತೆ ನಡೆಸಲು ಕಾಂಗ್ರೆಸ್‌ ತೀರ್ಮಾನಿಸಿದೆ.
Vijaya Karnataka Web maharashtra forming government congress new demand for shivsena
ಜಾತ್ಯತೀತ ನಿಲುವಿನೊಂದಿಗೆ ಮೃದು ಹಿಂದುತ್ವ ಓಕೆ ! ಶಿವಸೇನಾ ಮೈತ್ರಿಗೆ ಸೋನಿಯಾ ಷರತ್ತು


ಶಿವಸೇನೆಗೆ ಬೆಂಬಲ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ದೃಢ ನಿಲುವು ಹೊಂದಿದ್ದಾರೆ. ಸರಕಾರ ರಚನೆ ಪರವಾಗಿರುವ ನಾಯಕರು ಅವರನ್ನು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಅವರ ನಿರ್ಧಾರ ಬದಲಾಗಿಲ್ಲಎಂದು ಮೂಲಗಳು ತಿಳಿಸಿವೆ.

''ಹಿಂದುತ್ವ ಶಿವಸೇನೆ ರಾಜಕಾರಣದ ತಿರುಳು. ಸರಕಾರ ರಚನೆ ಬಳಿಕ ಈಗಿರುವಂತೆ ಪ್ರಖರ ಹಿಂದುತ್ವದ ಬದಲು ಮೃದು ಹಿಂದುತ್ವದ ಧೋರಣೆ ತಾಳಲು ಅಡ್ಡಿಯಿಲ್ಲ. ಆದರೆ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ಎಂದಿಗೂ ನಡೆದುಕೊಳ್ಳಬಾರದು,'' ಎನ್ನುವುದು ಸೋನಿಯಾ ಷರತ್ತು.

ಸರಕಾರ ರಚನೆಗೆ ಸಂಬಂಧಿಸಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಜತೆ ಮುಂಬಯಿಯಲ್ಲಿ ಮಾತುಕತೆ ನಡೆಸಿದ್ದ ಅಹಮದ್‌ ಪಟೇಲ್‌, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ.ವೇಣುಗೋಪಾಲ್‌ ಅವರು ಗುರುವಾರ ಸೋನಿಯಾ ಗಾಂಧಿಯವರಿಗೆ ವರದಿ ಸಲ್ಲಿಸಿದ್ದಾರೆ. ಎನ್‌ಸಿಪಿ-ಕಾಂಗ್ರೆಸ್‌ ನಾಯಕರ ಮತ್ತೊಂದು ಸುತ್ತಿನ ಜಂಟಿ ಸಭೆ ಭಾನುವಾರ (ನ.17) ನಡೆಯಲಿದೆ.

ಆ ಬಳಿಕ, ''ಜಾತ್ಯತೀತ ನಿಲುವು ಮತ್ತು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ವಿಚಾರವಾಗಿ ಶಿವಸೇನೆ ವಿಶ್ವಾಸ ಮೂಡಿಸುವ ರೀತಿಯಲ್ಲಿ ನಡೆದುಕೊಂಡರಷ್ಟೇ ಉಭಯ ಪಕ್ಷಗಳ ತಂಡವು ಶಿವಸೇನೆ ಜತೆ ಮಾತುಕತೆ ನಡೆಸಬೇಕು,'' ಎಂಬ ನಿರ್ದೇಶನವನ್ನೂ ಸೋನಿಯಾ ಗಾಂಧಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

''50:50 ಸೂತ್ರದ ಕುರಿತಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಸಕಾಲದಲ್ಲಿ ಮಾಹಿತಿ ನೀಡಿದ್ದರೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸುತ್ತಲೇ ಇರಲಿಲ್ಲ,'' ಎಂದು ಶಿವಸೇನೆ ನಾಯಕ ಸಂಜಯ್‌ ರಾವತ್‌ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

ಶಿವಸೇನೆಯ ಬೇಡಿಕೆಯಾದ ತಲಾ ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿ ಪದವಿ ಸೇರಿದಂತೆ ಸಮಾನ ಅಧಿಕಾರ ಹಂಚಿಕೆಯ 50:50 ಸೂತ್ರವನ್ನು ಒಪ್ಪಲು ಸಾಧ್ಯವೇ ಇಲ್ಲಎಂದು ಅಮಿತ್‌ ಶಾ ಬುಧವಾರವಷ್ಟೇ ಸ್ಪಷ್ಟಪಡಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಮೋದಿ, ಶಾ ಇಬ್ಬರೂ, ''ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇವೇಂದ್ರ ಫಡ್ನವಿಸ್‌ ಅವರೇ ಮತ್ತೆ ಮುಖ್ಯಮಂತ್ರಿ,'' ಎಂದು ಪದೇಪದೆ ಘೋಷಿಸಿದ್ದರು.

ಆಗ ಸುಮ್ಮನಿದ್ದ ಶಿವಸೇನೆಯು ಫಲಿತಾಂಶ ಪ್ರಕಟವಾದ ಬಳಿಕ 50:50 ಸೂತ್ರದ ಬೇಡಿಕೆ ಮುಂದಿಟ್ಟಿತ್ತು. ಈ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ರಾವತ್‌ ಅವರು, ''ಪ್ರಚಾರ ಸಭೆಗಳಲ್ಲಿದೇವೇಂದ್ರ ಫಡ್ನವಿಸ್‌ ಅವರೇ ಮುಂದಿನ ಸಿಎಂ ಎಂಬುದಾಗಿ ಮೋದಿಯವರು ಹೇಳಿದ್ದನ್ನು ನಾನೂ ಕೇಳಿಸಿಕೊಂಡಿದ್ದೇನೆ. ಆದರೆ ಅದು ನಮಗೇ ನೀಡುತ್ತಿರುವ ರಾಜಕೀಯ ಸಂದೇಶ ಎಂಬುದು ಅರ್ಥವೇ ಆಗಲಿಲ್ಲ. ಬಹುಶಃ ಬಿಜೆಪಿ ಅಧ್ಯಕ್ಷರು ಪ್ರಧಾನಿಯವರಿಗೆ 50:50 ಸೂತ್ರದ ಒಪ್ಪಂದ ಕುರಿತು ಮಾಹಿತಿ ನೀಡಿರಲಿಲ್ಲಅನ್ನಿಸುತ್ತದೆ,'' ಎಂದು ಉತ್ತರಿಸಿದರು.

ಮಹಾ ಸಿಎಂಪಿ ರೆಡಿ

ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ನಾಯಕರು ಗುರುವಾರ ಮುಂಬಯಿಯ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿದ್ದಾರೆ. ರೈತರ ಸಾಲಮನ್ನಾ, ಬೆಳೆ ವಿಮೆ ವ್ಯವಸ್ಥೆ ಪುನರ್‌ಪರಿಶೀಲನೆ, ನಿರುದ್ಯೋಗ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಛತ್ರಪತಿ ಶಿವಾಜಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ನಿರ್ಮಾಣ ಇವು ಪ್ರಮುಖ ವಿಷಯಗಳಾಗಿವೆ. ಎಲ್ಲಪಕ್ಷಗಳ ಅಧ್ಯಕ್ಷರಿಗೂ ಸಿಎಂಪಿ ಕರಡು ಕಳಿಸಲಾಗುತ್ತದೆ. ಎಲ್ಲರ ಒಪ್ಪಿಗೆ ಸಿಕ್ಕ ಬಳಿಕ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ