ಆ್ಯಪ್ನಗರ

ನೀರಿನ ಪ್ರತಿ ಹನಿಯನ್ನೂ ಉಳಿಸಿ: ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಮನ್ ಕೀ ಬಾತ್ ಕಾರ್ಯಕ್ರಮದ 20ನೇ ಆವೃತ್ತಿ ಇಂದು ಪ್ರಸಾರವಾಗಿದ್ದು, ಕ್ರೀಡಾ ಪಟುಗಳಿಗೆ ಉತ್ತೇಜನ, ಜಲ ಸಂರಕ್ಷಣೆ, ಆರೋಗ್ಯ ಮತ್ತು ಯೋಗ ಹಾಗೂ ಫಲಿತಾಂಶದ ವೇಳೆ ವಿದ್ಯಾರ್ಥಿಗಳನ್ನು ಉತ್ತೇಜಿಸುವಂಥ ಮಾತುಗಳನ್ನು ಆಡಿದ್ದಾರೆ.

ಏಜೆನ್ಸೀಸ್ 22 May 2016, 8:16 pm
ಹೊಸದಿಲ್ಲಿ: ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಾಗೂ ಬಿಸಿಲಿನ ಪ್ರಖರತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಸರ ರಕ್ಷಣೆಗೆ ಹನಿ ನೀರೂ ಮುಖ್ಯ ಎಂದಿರುವ ಅವರು, ನೀರು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದಕ್ಕಾಗಿ ‘ನೀರು ಉಳಿಸಿ ಅಭಿಯಾನ’ (ಸೇವ್‌ ವಾಟರ್‌ ಅಭಿಯಾನ್‌) ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಎಂದು ಮನ್‌ ಕಿ ಬಾತ್‌ನಲ್ಲಿ ಅಭಿಪ್ರಾಯಪಟ್ಟರು.
Vijaya Karnataka Web mann ki baat pm modi praises sarbananda sonowal for work as sports minister
ನೀರಿನ ಪ್ರತಿ ಹನಿಯನ್ನೂ ಉಳಿಸಿ: ಪ್ರಧಾನಿ


20ನೇ ಸರಣಿ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ ನಲ್ಲಿ ಭಾನುವಾರ ಮಾತನಾಡಿದ ಅವರು, ಪರಿಸರ ಉಳಿಸುವ ಬಗ್ಗೆ ಹೆಚ್ಚಾಗಿ ಮಾತನಾಡಿದರು. ಮುಂಬರುವ ಮಾನ್ಸೂನ್‌ ಅವಧಿಯಲ್ಲಿ ಪ್ರತಿ ಹನಿ ನೀರನ್ನು ಸದ್ಬಳಿಕೆ ಮಾಡಿಕೊಳ್ಳುವ ಮಾತನಾಡಿದರಲ್ಲದೇ ಕಾಡು ಬೆಳಸಲು ಸಂಕಲ್ಪ ತೊಡಬೇಕಿದೆ ಎಂದರು.

ಇತ್ತೀಚೆಗೆ ಬರ ನಿರ್ವಹಣೆ ಕುರಿತ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ನಡೆಸಿದ ಪರಿಶೀಲನೆ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ನೀತಿ ಆಯೋಗದೊಂದಿಗೆ ಮಾತನಾಡಿ ಅತ್ಯುತ್ತಮ ಯೋಜನೆ ಜಾರಿ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದರು.

ದೇಶದ ಬಹುತೇಕ ಭಾಗಗಳು ಹೆಚ್ಚುತ್ತಿರುವ ಬಿಸಿಲಿನಿಂದ ಬಸವಳಿದಿವೆ. ಇದರಿಂದಾಗಿ ಜನ, ಜಾನುವಾರುಗಳು ಹಾಗೂ ಪಕ್ಷಿ ಸಂಕುಲ ತೀವ್ರವಾಗಿ ತೊಂದರೆಗೊಳಗಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ, ಉತ್ತರಾಖಂಡ್‌, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ಆದ ಅಗ್ನಿ ದುರಂತಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಪಾರದರ್ಶಕತೆಗೆ ಒತ್ತು: ನೀರು ನಿರ್ವಹಣೆ ಬಗ್ಗೆ ಅಷ್ಟೇ ಅಲ್ಲ,ಕಪ್ಪು ಹಣದ ನಿರ್ಮೂಲನೆ ಹಾಗೂ ಹಣ ರಹಿತ ಸಮಾಜ ನಿರ್ಮಾಣದ ಬಗ್ಗೆಯೂ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮಾತನಾಡಿದರು.

ವಿಶ್ವ ಯೋಗ ದಿನದಲ್ಲಿ ಪಾಲ್ಗೊಳ್ಳಲು ಕರೆ: 30 ನಿಮಿಷಗಳ ತಮ್ಮ ರೇಡಿಯೊ ಭಾಷಣದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕ ನಿತ್ಯ ಯೋಗ ಮಾಡುವ ಮೂಲಕ ನಿರೋಗಿಗಳಾಗಿ ಎಂದು ಕರೆ ನೀಡಿದರು. ಆರೋಗ್ಯದಿಂದ ಇರಲು ಯೋಗ ಜೀವನಕ್ಕೆ ಅವಶ್ಯ ಎಂದು ಪ್ರತಿಪಾದಿಸಿದರು. ಜೂನ್‌ 21ಕ್ಕೆ ವಿಶ್ವಯೋಗ ದಿನವನ್ನು ಆಚರಿಸಲಾಗುತ್ತಿದೆ. ಅಂದು ಚಂಡೀಗಢದಲ್ಲಿ ನಡೆಯುವ ವಿಶ್ವಯೋಗ ದಿನದ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುವುದಾಗಿಯೂ ತಿಳಿಸಿದರು.

ಸರ್ಬಾನಂದ ಗುಣಗಾನ: ಮನ್‌ ಕಿ ಬಾತ್‌ನಲ್ಲಿ ಅಸ್ಸಾಂನಲ್ಲಿ ಪಕ್ಷವನ್ನು ಗೆಲ್ಲಿಸಿ ಸಿಎಂ ಸ್ಥಾನಕ್ಕೆ ಹತ್ತಿರವಾಗಿರುವ ಸರ್ಬಾನಂದ್‌ ಸೋನೊವಾಲ್‌ ಅವರ ಗುಣಗಾನ ಮಾಡಿದರು. ಚುನಾವಣೆ ಪ್ರಚಾರದ ಬಿಡುವಿಲ್ಲದ ಕೆಲಸದ ನಡುವೆಯೂ ಕೇಂದ್ರ ಕ್ರೀಡಾಸಚಿವರಾಗಿ, ರಿಯೋ ಒಲಿಂಪಿಕ್ಸ್‌ಗಾಗಿ ಪಟಿಯಾಲದಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದ್ದನ್ನು ಕೊಂಡಾಡಿದರು.

ಇದೇ ವೇಳೆ, ದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ‘‘ನಾವು ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಗಳ ಪದಕ ಪಟ್ಟಿ ಬಗ್ಗೆ ಮಾತನಾಡುತ್ತೇವೆ. ಆದರೆ, ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಬೇಕಿದೆ. ನಾನು ಮತ್ತೊಮ್ಮೆ ಹೇಳುತ್ತೇನೆ, ಎಲ್ಲವನ್ನೂ ಸೋಲು-ಗೆಲುವಿನ ಮೂಲಕ ಅಳೆಯಬೇಡಿ ಎಂದು ಪ್ರಧಾನಿ ಹೇಳಿದರು.

ದೇಶಾದ್ಯಂತ ಬೋರ್ಡ್‌ ಪರೀಕ್ಷೆಗಳ ಫಲಿತಾಂಶ ಬಂದಿದ್ದು, ಪೋಷಕರು ಮಕ್ಕಳಿಗೆ ಧೈರ್ಯ ತುಂಬುವಂತೆ ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ