Please enable javascript.ಬಿಹಾರ ಚುನಾವಣೆ: ಪ್ರಧಾನಿ ಮೋದಿಗೆ ಅಗ್ನಿ ಪರೀಕ್ಷೆ - Modi faces test with Bihar elections starting next month - Vijay Karnataka

ಬಿಹಾರ ಚುನಾವಣೆ: ಪ್ರಧಾನಿ ಮೋದಿಗೆ ಅಗ್ನಿ ಪರೀಕ್ಷೆ

ಏಜೆನ್ಸೀಸ್ 10 Sep 2015, 4:00 am
Subscribe

ಬಿಹಾರದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ರಾಷ್ಟ್ರ ರಾಜಕಾರಣದ ಮೇಲೂ ಗಾಢ ಪ್ರಭಾವ ಬೀರುತ್ತವೆ ಎಂಬುದನ್ನು ಇತಿಹಾಸ ತೋರಿಸಿದೆ.

modi faces test with bihar elections starting next month
ಬಿಹಾರ ಚುನಾವಣೆ: ಪ್ರಧಾನಿ ಮೋದಿಗೆ ಅಗ್ನಿ ಪರೀಕ್ಷೆ
ಬಿಹಾರ ಚುನಾವಣೆಗೆ ಅಖಾಡ ಸಜ್ಜು / ಪ್ಯಾಕೇಜ್‌ಗಳೇ ಕಮಲಕ್ಕೆ ರಕ್ಷೆ / ಜಾತಿ ಸಮೀಕರಣದ ಅಲೆಯಲ್ಲಿ ನಿತೀಶ್- ಲಾಲೂ ಜೋಡಿ

ಹೊಸದಿಲ್ಲಿ: ಬಿಹಾರದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ರಾಷ್ಟ್ರ ರಾಜಕಾರಣದ ಮೇಲೂ ಗಾಢ ಪ್ರಭಾವ ಬೀರುತ್ತವೆ ಎಂಬುದನ್ನು ಇತಿಹಾಸ ತೋರಿಸಿದೆ. ಸಮಾಜವಾದಿ ನಾಯಕ ಜಯಪ್ರಕಾಶ ನಾರಾಯಣ ಅವರ ಭ್ರಷ್ಟಾಚಾರ ವಿರೋಧಿ ಹೋರಾಟ ಈನೆಲದಲ್ಲಿ ಆರಂಭವಾಗಿ ದೇಶಾದ್ಯಂತ ವ್ಯಾಪಿಸಿ ಅಂದಿನ ಇಂದಿರಾಗಾಂಧಿ ಸರಕಾರವನ್ನೇ ಗಡ ಗಡ ನಡುಗಿಸಿತ್ತು. ಇಂತಹ ಬಿಹಾರದಲ್ಲಿ ಈಗ ಮತ್ತೆ ಚುನಾವಣೆ ಎದುರಾಗಿದ್ದು , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲ್ಲಲು ಭಾರಿ ಕಸರತ್ತು ನಡೆಸಿದೆ.

ದೇಶದ ಮೂರನೇ ಅತಿಹೆಚ್ಚು ಜನಸಂಖ್ಯೆ ಇರುವ ಇಲ್ಲಿ ಬಿಜೆಪಿ ತನ್ನ ಪ್ರಭುತ್ವ ಸ್ಥಾಪಿಸಲು ಯತ್ನಿಸುತ್ತಿದೆ. ಸಾಂಪ್ರದಾಯಿಕ ಜಾತಿ ಸಮೀಕರಣ ಪ್ರಬಲವಾಗಿರುವ ಎಡೆಯಲ್ಲಿ ಪ್ಯಾಕೇಜ್ ಘೋಷಿಸಿ ಆರ್ಥಿಕ ಅಭಿವೃದ್ಧಿಯ ಮಂತ್ರ ಜಪಿಸಿ ಮತದಾರರಿಗೆ ಗಾಳ ಹಾಕುತ್ತಿದೆ.

ಒಂದೊಮ್ಮೆ ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ತಮ್ಮ ಅಲೆ ಇನ್ನೂ ಇದೆ ಎಂಬುದನ್ನು ಮೋದಿ ಸಾಬೀತು ಪಡಿಸಿದಂತಾಗಿದೆ. ಜತೆಗೆ ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಕಾರ್ಯತಂತ್ರಗಳೂ ಫಲ ನೀಡುತ್ತಿವೆ ಎಂಬುದು ಮತ್ತೊಮ್ಮೆ ರುಜವಾತಾಗುತ್ತದೆ. ಅಲ್ಲದೇ 2017ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಗೆ ಹಾದಿ ಸುಗಮವಾಗುತ್ತದೆ. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮೋದಿ ಸರಕಾರ ಮತ್ತೊಮ್ಮೆ ರಾಜ್ಯಕ್ಕೆ ಭರಪೂರ ಕೊಡುಗೆ ಪ್ರಕಟಿಸಿದೆ. ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ಒಂದು ಗಂಟೆ ಮುಂಚಿತವಾಗಿ ಬಿಹಾರಕ್ಕೆ ಮತ್ತೆ 1850 ಕೋಟಿ ರೂ.ಗಳ ವಿದ್ಯುತ್ ಪ್ಯಾಕೇಜ್ (ಪವರ್ ಪ್ಯಾಕೇಜ್) ಘೋಷಿಸಿದೆ.

ಈಗಾಗಲೇ ರಾಜ್ಯದಲ್ಲಿ ನಾಲ್ಕು ಬೃಹತ್ ರ‌್ಯಾಲಿ ನಡೆಸಿರುವ ಮೋದಿ ಅವರು ಈ ಹಿಂದೆ ಅರಾ ಎಂಬಲ್ಲಿನ ಪರಿವರ್ತನಾ ರ‌್ಯಾಲಿಯಲ್ಲಿ ಬಿಹಾರದ ಸಮಗ್ರ ಅಭಿವೃದ್ಧಿಗೆ ಬರೋಬ್ಬರಿ 1.25 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿದ್ದರು. ಇದರ ಜತೆಗೆ ಜಾರಿಯಲ್ಲಿರುವ ಕಾಮಗಾರಿಗಳಿಗೆ ಕೇಂದ್ರದಿಂದ 40 ಸಾವಿರ ಕೋಟಿ ರೂ. ನೆರವು ಘೋಷಿಸಿದ್ದರು. ಇದರ ಬೆನ್ನಿಗೇ ಸಡ್ಡು ಹೊಡೆಯುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ 2.70 ಲಕ್ಷ ಕೋಟಿ ರೂ. ಭರ್ಜರಿ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿ ಅಚ್ಚರಿ ಮೂಡಿಸಿದ್ದರು ಈಗ ಕೇಂದ್ರ ಸರಕಾರ ಪುನಃ 1850 ಕೋಟಿ ರೂ.ಗಳ ವಿದ್ಯುತ್ ಪ್ಯಾಕೇಜ್ ಪ್ರಕಟಿಸುವ ಮೂಲಕ ಬಿಹಾರದ ಮತದಾರರನ್ನು ಬಿಜೆಪಿಯತ್ತ ಸೆಳೆದುಕೊಳ್ಳುವ ಕಸರತ್ತು ಮಾಡಿದೆ.

ಪ್ರಧಾನಿಗೇಕೆ ಮಹತ್ವ:

ಮೋದಿ ಅವರ ನೇತೃತ್ವದಲ್ಲಿಯೇ ಬಿಜೆಪಿ ಚುನಾವಣೆ ಎದುರಿಸುತ್ತಿದ್ದು ಸಹಜವಾಗಿಯೇ ಇದು ಅವರ ಮೇಲೆ ಇನ್ನಷ್ಟು ಭಾರ ಹೊರಿಸಿದೆ. ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿರುವ ಅವರು ಸಾಕಷ್ಟು ಕಾರ್ಯತಂತ್ರಗಳೊಂದಿಗೆ ರ‌್ಯಾಲಿಯಲ್ಲಿ ನಿರತರಾಗಿದ್ದಾರೆ. ಇದಲ್ಲದೇ ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ್ದರಿಂದ ಮುನಿಸಿಕೊಂಡು ಬಿಹಾರದಲ್ಲಿ ಬಿಜೆಪಿ ಜತೆಗಿನ 17 ವರ್ಷದ ಮೈತ್ರಿಯನ್ನು ಮುರಿದುಕೊಂಡ ನಿತೀಶ್ ಅವರನ್ನು ಆ ನೆಲದಲ್ಲಿಯೇ ಸೋಲಿಸಬೇಕೆಂಬ ಹಠವೂ ಮೋದಿ ಅವರಿಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಜ್ಯಸಭೆ ಪ್ರಭುತ್ವಕ್ಕೆ ಏಣಿ

ಮೋದಿ ಸರಕಾರದ ಮಹತ್ವದ ಆರ್ಥಿಕ ಸುಧಾರಣಾ ಯೋಜನೆಗಳ ವಿಧೇಯಕಗಳು ಸಂಖ್ಯಾಬಲದ ಕೊರತೆಯಿಂದ ರಾಜ್ಯಸಭೆಯಲ್ಲಿ ಬಿದ್ದುಹೋಗಿರುವುದರಿಂದ ಅಲ್ಲಿ ತನ್ನ ಪ್ರಭುತ್ವ ಸಾಧಿಸಲು ಬಿಜೆಪಿಗೆ ಪ್ರತಿಯೊಂದು ವಿಧಾನಸಭೆ ಚುನಾವಣೆಯೂ ಅತಿಮುಖ್ಯವೆನಿಸಿದೆ. ಮುಂದಿನ ನಾಲ್ಕು ವರ್ಷದಲ್ಲಿ ಬರುವ ಎಲ್ಲಾ ವಿಧಾನಸಭೆ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಅದರಿಂದ ಈ ಕೊರತೆ ನೀಗಿಸಿಕೊಳ್ಳುವ ಆಲೋಚನೆ ಮೋದಿ ಅವರಿಗಿದೆ. ವಿಧಾನಸಭೆಯಲ್ಲಿ ಪಕ್ಷವೊಂದು ಹೊಂದಿರುವ ಸ್ಥಾನಗಳ ಆಧಾರದ ಮೇರೆಗೆ ರಾಜ್ಯಸಭೆಯಲ್ಲಿ ಅವುಗಳ ಸ್ಥಾನಬಲ ನಿರ್ಧಾರವಾಗುತ್ತದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ