ಆ್ಯಪ್ನಗರ

ದಾಭೋಲ್ಕರ್‌ ಹತ್ಯೆ: 3 ವರ್ಷದ ಬಳಿಕ ಮೊದಲ ಬಂಧನ

ದಾಭೋಲ್ಕರ್‌ ಹತ್ಯೆ ಸಂಬಂಧ ಹಿಂದೂ ಜನಜಾಗೃತಿ ಸಮಿತಿ ಸದಸ್ಯ ವಿರೇಂದ್ರ ತಾವ್ಡೆ ಅವರನ್ನು ಸಿಬಿಐ ಬಂಧಿಸಿದೆ.

ಏಜೆನ್ಸೀಸ್ 11 Jun 2016, 8:14 pm
ಮುಂಬಯಿ: ಮಹಾರಾಷ್ಟ್ರದ ಖ್ಯಾತ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆಗೆ ಸಂಬಂಧಿಸಿದಂತೆ 3 ವರ್ಷಗಳ ಬಳಿಕ ಮೊದಲ ಆರೋಪಿಯನ್ನು ಸಿಬಿಐ ಬಂಧಿಸಿದೆ.
Vijaya Karnataka Web narendra dabholkar murder case cbi makes first arrest
ದಾಭೋಲ್ಕರ್‌ ಹತ್ಯೆ: 3 ವರ್ಷದ ಬಳಿಕ ಮೊದಲ ಬಂಧನ


ಹಿಂದೂ ಜನಜಾಗೃತಿ ಸಮಿತಿ ಸದಸ್ಯರ ವೀರೇಂದ್ರಸಿಂಗ್‌ ತಾವಡೆ ಎಂಬುವವರನ್ನು ಮುಂಬಯಿನ ಪನವೇಲ್‌ನಲ್ಲಿ ಶುಕ್ರವಾರ ತಡರಾತ್ರಿ ತನಿಖಾಧಿಕಾರಿಗಳು ಬಂಧಿಸಿದ್ದು, ಶನಿವಾರ ಪುಣೆ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಧಾಬೊಲ್ಕರ್‌ ಹತ್ಯೆ ಪ್ರಕರಣದಲ್ಲಿ ಬಲಪಂಥೀಯರಾದ ತಾವಡೆ ಪ್ರಮುಖ ಸಂಚುಕೋರರಿರಬಹುದು. ಅಲ್ಲದೆ, ಇನ್ನೂ 8 ಜನ ಹತ್ಯೆಯಲ್ಲಿ ಭಾಗಿಯಾಗಿರಬಹುದೆಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ.

ಹಿಂದೂ ಜನಜಾಗೃತಿ ಸಮಿತಯು, ಗೋವಾ ಮೂಲದ ಮತ್ತೊಂದು ಬಲಪಂಥೀಯ ಸಂಘಟನೆ ಸನಾತನ ಸಂಸ್ಥಾನದೊಂದಿಗೆ ನಂಟು ಹೊಂದಿದೆ ಎಂದು ತಿಳಿದುಬಂದಿದೆ. ಗೋವಿಂದ್‌ ಪರ್ಸೇಕರ್‌ ಎಂಬ ಮತ್ತೊಬ್ಬ ವಿಚಾರವಾದಿಯ ಹತ್ಯೆಯಲ್ಲಿ ಸನಾತನ ಸಂಸ್ಥಾನದ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಸಂಘಟನೆಯ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಗೋವಾ ಸ್ಫೋಟ ಪ್ರಕರಣದ ಆರೋಪಿ, ಸನಾತನ ಸಂಸ್ಥೆ ಸದಸ್ಯ ಸಾರಂಗ್‌ ಅಕೋಲ್ಕರ್‌ ಅವರ ಮನೆ ಮೇಲೆ ದಾಳಿ ವೇಳೆ ದೊರೆತ ಕೆಲ ಮಹತ್ವದ ಮಾಹಿತಿ, ಫೋನ್‌ ನಂಬರ್‌, ಇ-ಮೇಲ್‌ ಆಧಾರದ ಮೇಲೆ ತಾವಡೆಯನ್ನು ಬಂಧಿಸಲಾಗಿದೆ.

ಮೂವರು ವಿಚಾರವಾದಿಗಳ ಹತ್ಯೆ: 2013ರ ಆಗಸ್ಟ್‌ 20ರಂದು ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದ ದಾಭೋಲ್ಕರ್‌ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದರು. ಇದೇ ಮಾದರಿಯಲ್ಲಿ ವಿಚಾರವಾದಿಗಳಾದ ಗೋವಿಂದ್‌ ಪನ್ಸಾರೆ ಮತ್ತು ಕರ್ನಾಟಕದ ಸಂಶೋಧಕ ಹಾಗೂ ಸಾಹಿತಿ ಎಮ… ಎಮ… ಕಲಬುರ್ಗಿಯವರ ಹತ್ಯೆ ನಡೆದಿತ್ತು. ಪ್ರಕರಣ ಭೇದಿಸುತ್ತಿರುವ ಸಿಬಿಐ ಈ ಮೂರು ಹತ್ಯೆಗಳಲ್ಲಿ ಸಾಮ್ಯತೆ ಕಂಡುಬಂದಿರುವುದಾಗಿ ಹೇಳಿದೆ.

ರೆಡ್‌ ಕಾರ್ನರ್‌ ನೋಟಿಸ್‌: 2009ರ ಗೋವಾ ಸ್ಫೋಟ ಪ್ರಕರಣದ ಆರೋಪಿಯಾಗಿರುವ 34ರ ಹರೆಯದ ಅಕೋಲ್ಕರ್‌ ತಲೆಮರೆಸಿಕೊಂಡಿದ್ದಾನೆ. 2012ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಇಂಟರ್‌ಪೋಲ್‌ ನೆರವಿನಿಂದ ಅಕೋಲ್ಕರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದ್ದರೂ, ಇದುವರೆಗೂ ಆರೋಪಿಯ ಪತ್ತೆಯಾಗಿಲ್ಲ.

ಬಂಧಿತ ಇಎನ್‌ಟಿ ಸರ್ಜನ್‌

ಬಂಧಿತ ವೀರೇಂದ್ರ ಸಿಂಗ್‌ ತಾವಡೆ ವೃತ್ತಿಯಲ್ಲಿ ಇಎನ್‌ಟಿ ವೈದ್ಯನಾಗಿದ್ದು, ಸನಾತನ ಸಂಸ್ಥಾನ ಕಾರ್ಯಕರ್ತ ಸಾರಂಗ್‌ ಅಕೋಲ್ಕರ್‌ ಅವರ ಬೆಂಬಲಿಗರೆಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ