ಆ್ಯಪ್ನಗರ

ಕೇರಳದಲ್ಲಿ ನಾಯಕರು: ಪಂಚೆಯುಟ್ಟ ಮೋದಿ; 'ಸುಳ್ಳು, ವಿಷ ಪ್ರಸಾರ ಮಾಡಿದ ಪ್ರಧಾನಿ' ಎಂದ ರಾಹುಲ್

ಚುನಾವಣೆಯ ಭರ್ಜರಿ ವಿಜಯ ಮತ್ತು ಭರ್ಜರಿ ಸೋಲಿಗೆ ಸಾಕ್ಷಿಯಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಕೇರಳಕ್ಕೆ ಭೇಟಿ ನೀಡಿದ್ದಾರೆ. ನರೇಂದ್ರ ಮೋದಿ ಅವರು ಕೇರಳೀಯ ಉಡುಪು ತೊಟ್ಟು, ಕಾಶಿಯಷ್ಟೇ ಪ್ರೀತಿ ಕೇರಳದ ಮೇಲೂ ಇದೆ ಎಂದು ಹೇಳಿದರೆ, ರಾಹುಲ್ ಗಾಂಧಿ, ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

TIMESOFINDIA.COM 8 Jun 2019, 4:16 pm

ಹೈಲೈಟ್ಸ್‌:

  • ಚುನಾವಣೆಯ ಭರ್ಜರಿ ವಿಜಯ ಮತ್ತು ಭರ್ಜರಿ ಸೋಲಿಗೆ ಸಾಕ್ಷಿಯಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಕೇರಳಕ್ಕೆ ಭೇಟಿ ನೀಡಿದ್ದಾರೆ.
  • ನರೇಂದ್ರ ಮೋದಿ ಅವರು ಕೇರಳೀಯ ಉಡುಪು ತೊಟ್ಟು, ಕಾಶಿಯಷ್ಟೇ ಪ್ರೀತಿ ಕೇರಳದ ಮೇಲೂ ಇದೆ ಎಂದು ಹೇಳಿದರೆ, ರಾಹುಲ್ ಗಾಂಧಿ, ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಗುರುವಾಯೂರಿನಲ್ಲಿ ಮೋದಿ
ತ್ರಿಶೂರು: ಪಂಚೆ, ಅರ್ಧ ಕೈ ಇರುವ ಅಂಗಿ ಮತ್ತು ಶಲ್ಯ - ಅಪ್ಪಟ ಕೇರಳೀಯ ಶೈಲಿಯ ಉಡುಪಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುರುವಾಯೂರಿನಲ್ಲಿ ಕಾಣಿಸಿಕೊಳ್ಳುವ ಮೂಲಕ, ಬಿಜೆಪಿಗೆ ಒಂದೂ ಸ್ಥಾನವನ್ನು ನೀಡದ ಕೇರಳೀಯರಿಗೆ ಆಪ್ತವಾಗುವ ಪ್ರಯತ್ನ ನಡೆಸಿದರು. ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಕೃತಜ್ಞತಾ ಸಮರ್ಪಣೆಗೆ ಕೇರಳಕ್ಕೆ ಭೇಟಿ ನೀಡಿ, ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿ ಗಮನ ಸೆಳೆದರು.
2ನೇ ಬಾರಿ ಪ್ರಧಾನಿಯಾದ ಬಳಿಕದ ಮೊದಲ ವಿದೇಶ ಭೇಟಿಗಾಗಿ ಮಾಲ್ದೀವ್ಸ್ ಆಯ್ದುಕೊಂಡಿರುವ ಮೋದಿ, ಚುನಾವಣೆಯಲ್ಲಿ ಭರ್ಜರಿ ವಿಜಯ ದೊರಕಿಸಿಕೊಟ್ಟ ನಂತರ, ದಕ್ಷಿಣದಲ್ಲಿ ಮೊದಲ ಭೇಟಿಗೆ ಕೇರಳವನ್ನೇ ಆಯ್ದುಕೊಂಡಿದ್ದರು. ಅವರನ್ನು ಸ್ವಾಗತಿಸಲು ಬಂದ ಸ್ಥಳೀಯ ನಾಯಕರ ಪೋಷಾಕು ಕೂಡ ಸ್ಥಳೀಯ ಸಂಪ್ರದಾಯದ ಪ್ರತೀಕವಾದ ಮುಂಡು (ಪಂಚೆ), ಅಂಗಿ ಆಗಿತ್ತು.

ಶುಕ್ರವಾರ ಮಧ್ಯರಾತ್ರಿ ಅವರು ಕೊಚ್ಚಿಗೆ ಬಂದಿಳಿದಿದ್ದು, ಬಳಿಕ ರಸ್ತೆ ಮಾರ್ಗವಾಗಿ ಗುರುವಾಯೂರಿನ ಶ್ರೀಕೃಷ್ಣನ ಸನ್ನಿಧಿಗೆ ತೆರಳಿದರು. ಸಂಪ್ರದಾಯ ಪ್ರಕಾರ ಗುರುವಾಯೂರಪ್ಪನ ದರ್ಶನಾಕಾಂಕ್ಷಿ ಪುರುಷರು ಪಂಚೆ ಧರಿಸುವುದು ಕಡ್ಡಾಯ. ಮೇಲ್ಭಾಗಕ್ಕೆ ಶಲ್ಯ ಅಥವಾ ಮೇಲ್ಮುಂಡು ಧರಿಸುವುದು ಐಚ್ಛಿಕ.

ಶ್ವೇತವಸ್ತ್ರಧಾರಿಯಾದ ಮೋದಿ ತುಲಾಭಾರ ಸೇವೆ ಸಲ್ಲಿಸಿದ್ದು, 112 ಕಿಲೋ ತೂಕದ ತಾವರೆ ಹೂವುಗಳೊಂದಿಗೆ ತುಲಾಭಾರ ನೆರವೇರಿಸಲಾಯಿತು. ಸಾಮಾನ್ಯವಾಗಿ ಕುರ್ತಾ ಪೈಜಾಮಾ ಧರಿಸುವ ಮೋದಿ ತುಲಾಭಾರ ಸೇವೆಯ ಬಳಿಕವೂ ಇದೇ ಪೋಷಾಕಿನ ಜತೆಗೆ ಮೇಲೊಂದು ಕೆಂಪು-ಹಸಿರು ಅಂಚಿನ ಅಂಗವಸ್ತ್ರ ಧರಿಸಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕೇರಳೀಯ ಉಡುಗೆಯೊಂದಿಗೆ, ಮಾತಿನ ಸಂದರ್ಭದಲ್ಲಿ "ನಮ್ಮನ್ನು ಗೆಲ್ಲುವಂತೆ ಮಾಡಿದವರು ನಮ್ಮವರು. ಗೆಲ್ಲುವಂತೆ ಮಾಡದವರೂ ಕೂಡ ನಮ್ಮವರೇ. ಕೇರಳ ಎಂದರೆ ನನಗೆ ವಾರಾಣಸಿಯಷ್ಟೇ ಅಚ್ಚುಮೆಚ್ಚು" ಎಂದು ಹೇಳುವ ಮೂಲಕ ಮೋದಿ ಅವರು ಕೇರಳದ ಬಗೆಗಿನ ತಮ್ಮ ಪ್ರೀತಿಯ ಕುರಿತ ಸ್ಪಷ್ಟ ಸಂದೇಶ ರವಾನಿಸಿದರು.

ರಾಹುಲ್ ಗಾಂಧಿ ಟೀಕೆ
ಇದಕ್ಕೆ ಪರ್ಯಾಯವಾಗಿ, ಉತ್ತರದ ಅಮೇಠಿಯಲ್ಲಿ ದಯನೀಯ ಸೋಲು ಕಂಡು, ಕೇರಳದ ವಯನಾಡಿನಿಂದ ವಿಜಯಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಕೃತಜ್ಞತಾ ಸಮರ್ಪಣೆಗೆ ಕೇರಳಕ್ಕೆ ಶುಕ್ರವಾರ ಆಗಮಿಸಿದ್ದರು. ಶನಿವಾರ ಎಂದಿನಂತೆ ಕುರ್ತಾ ಪೈಜಾಮದಲ್ಲಿ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ವಯನಾಡಿನ ಕಲ್ಪೆಟ್ಟಾದಲ್ಲಿ ರೋಡ್ ಶೋ ನಡೆಸಿ, ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. "ಮೋದಿ ಅವರು ಸಮಾಜವನ್ನು ಒಡೆಯಲು ದ್ವೇಷದ ವಿಷ ಬಿತ್ತಿದರು. ವಿಷ, ದ್ವೇಷ ಮತ್ತು ಸುಳ್ಳುಗಳಿಂದಲೇ ಚುನಾವಣಾ ಪ್ರಚಾರ ಮಾಡಿದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪಕ್ಷವು ಸತ್ಯ, ಪ್ರೀತಿ, ಮಮಕಾರವನ್ನು ತೋರ್ಪಡಿಸಿತು" ಎಂದು ರಾಹುಲ್ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ