ಆ್ಯಪ್ನಗರ

ಮೋದಿ ರಾಜಧರ್ಮ ಪಾಲಿಸುತ್ತಿಲ್ಲ: ನಾಯ್ಡು

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ದಿಲ್ಲಿಯ ಆಂಧ್ರಭವನ ಆವರಣದಲ್ಲಿ ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ ನಾಯ್ಡು, ಭಾಷಣದುದ್ದಕ್ಕೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

Vijaya Karnataka 12 Feb 2019, 5:00 am
ಹೊಸದಿಲ್ಲಿ: ಎಷ್ಟೇ ಮನವಿ ಮಾಡಿಕೊಂಡರೂ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಮೀನಾಮೇಷ ಎಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ರಾಜಧರ್ಮ ಪಾಲಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹರಿಹಾಯ್ದಿದ್ದಾರೆ.
Vijaya Karnataka Web naidu


ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ದಿಲ್ಲಿಯ ಆಂಧ್ರಭವನ ಆವರಣದಲ್ಲಿ ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ ನಾಯ್ಡು, ಭಾಷಣದುದ್ದಕ್ಕೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ''ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ 2014ರಿಂದ ನಾವು ಮನವಿ ಮಾಡಿಕೊಂಡು ಬರುತ್ತಿದ್ದರೂ ಪ್ರಧಾನಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಾನೇನೂ ವೈಯಕ್ತಿಕ ಬೇಡಿಕೆ ಮುಂದಿಟ್ಟಿಲ್ಲ. ಆಂಧ್ರದ 5 ಕೋಟಿಯ ಜನರ ಮನವಿಗೆ ಸ್ಪಂದಿಸುವಂತೆ ಕೋರಿಕೊಂಡಿದ್ದೇನೆ. ಆದಾಗ್ಯೂ ಮೋದಿ ಇದಕ್ಕೆ ಗಮನ ನೀಡುತ್ತಿಲ್ಲ. ಅವರು ರಾಜಧರ್ಮ ಪಾಲಿಸುತ್ತಿಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸಲು ಈ ಸತ್ಯಾಗ್ರಹ ನಡೆಸಿದ್ದೇನೆ,'' ಎಂದ ನಾಯ್ಡು, ಆಂಧ್ರದ ಸ್ವಾಭಿಮಾನ ಅವಮಾನಿಸಿದಲ್ಲಿ ಜನತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

''ನನ್ನ ವಿರುದ್ಧ ವೈಯಕ್ತಿಕ ದಾಳಿ ಮಾಡುವುದನ್ನು ನಿಲ್ಲಿಸಿ. ಇದು ಪ್ರಧಾನಿ ಘನತೆಗೆ ಶೋಭೆಯಲ್ಲ. ಒಂದಂತೂ ನಿಜ, ನೀವು ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಅದನ್ನು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ಇದು ಆಂಧ್ರ ಜನರ ಆತ್ಮ ಗೌರವದ ಪ್ರಶ್ನೆ,'' ಎಂದು ಗುಡುಗಿದರು.

ನಾಯಕರ ಸಾಥ್‌: ನಾಯ್ಡು ನಡೆಸಿದ ಧರಣಿಯು ಮತ್ತೊಮ್ಮೆ ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶನದ ವೇದಿಕೆಯಾಯಿತು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ, ಎನ್‌ಸಿಪಿ ನಾಯಕ ಮಜೀದ್‌ ಮೆಮೂನ್‌, ಟಿಎಂಸಿಯ ಡೆರೆಕ್‌ ಒಬ್ರಿಯಾನ್‌, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಸೇರಿ ಹಲವು ನಾಯಕರು ಧರಣಿಯಲ್ಲಿ ಭಾಗವಹಿಸಿ ಸಾಥ್‌ ಕೊಟ್ಟರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಾಕ್‌ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ: ಕೇಜ್ರಿವಾಲ್‌
ಚಂದ್ರಬಾಬು ನಾಯ್ಡು ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಮೋದಿ ಅವರನ್ನು ಪಾಕಿಸ್ತಾನದ ಪ್ರಧಾನಿಗೆ ಹೋಲಿಸಿ ಕೀಳು ಮಟ್ಟದ ಆರೋಪ ಮಾಡಿದ್ದಾರೆ. ಮೋದಿ ವಿಶ್ವದ ಪ್ರಸಿದ್ಧ ಸುಳ್ಳುಗಾರ ಎಂದು ಜರಿದ ಅವರು, ''ಪ್ರಧಾನಿಯವರು ಇತರ ರಾಜ್ಯಗಳಲ್ಲಿ ಪ್ರತಿಪಕ್ಷಗಳ ಸರಕಾರವನ್ನು ಪರಿಗಣಿಸುವುದನ್ನು ನೋಡಿದರೆ ಅವರು ಭಾರತದ ಪ್ರಧಾನಿಯಲ್ಲ. ಪಾಕ್‌ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ,'' ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ