ಆ್ಯಪ್ನಗರ

ಅಟಲ್ ಜೀ ಅಂತಿಮ ಯಾತ್ರೆ: ಅಚ್ಚರಿ ಮೂಡಿಸಿದ ಮೋದಿ ‘ನಡೆ’

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆ ವೇಳೆ ಬಿಜೆಪಿ ಕಚೇರಿಯಿಂದ ಸ್ಮೃತಿ ಸ್ಥಳದವರೆಗೆ ಕಾಲ್ನಡಿಗೆಯಲ್ಲಿ ಸಾಗಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ...

Vijaya Karnataka 19 Aug 2018, 5:00 am
ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆ ವೇಳೆ ಬಿಜೆಪಿ ಕಚೇರಿಯಿಂದ ಸ್ಮೃತಿ ಸ್ಥಳದವರೆಗೆ ಕಾಲ್ನಡಿಗೆಯಲ್ಲಿ ಸಾಗಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಪೊಲೀಸರೂ ಸೇರಿದಂತೆ ಎಲ್ಲರನ್ನೂ ಅಚ್ಚರಿ ಮೂಡಿಸಿತ್ತು.
Vijaya Karnataka Web narendra modi


ಪ್ರಧಾನಿ ಕಾಲ್ನಡಿಗೆಯಲ್ಲೇ ಸಾಗುವರು ಎಂಬುದಾಗಲೀ, ಅವರು ಜತೆ ಯಾವ್ಯಾವ ಮಂತ್ರಿಗಳು ಇರುತ್ತಾರೆ ಎನ್ನುವುದಾಗಲೀ ಮಾಹಿತಿ ಇರಲಿಲ್ಲ. ಅದಕ್ಕೆ ಬೇಕಾದ ಯಾವ ಸಿದ್ಧತೆಯನ್ನೂ ಮಾಡಿರಲಿಲ್ಲ. ಮೆರವಣಿಗೆ ಹೊರಡುವ ಹೊತ್ತಿನಲ್ಲಷ್ಟೇ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಪೊಲೀಸರಿಗೆ ಮಾಹಿತಿ ನೀಡಿತು. ಮೋದಿ ಅವರು ನಡೆಯಲು ಆರಂಭಿಸುತ್ತಿದ್ದಂತೆಯೇ ಬಿಜೆಪಿ ಮುಖ್ಯಸ್ಥ ಅಮಿತ್‌ ಶಾ, ಬಿಜೆಪಿ ಮುಖ್ಯಮಂತ್ರಿಗಳಾದ ವಿಜಯ್‌ ರೂಪಾನಿ, ಶಿವರಾಜ್‌ ಚೌಹಾಣ್‌, ಯೋಗಿ ಆದಿತ್ಯನಾಥ್‌, ದೇವೇಂದ್ರ ಫಡ್ನವಿಸ್‌ ಮತ್ತು ಕೆಲವು ಕೇಂದ್ರ ಸಚಿವರು ಹಿಂಬಾಲಿಸಿದರು.

ಇದೇ ಮೊದಲು: ''ಪ್ರಧಾನಿಯೊಬ್ಬರು ಸಾರ್ವಜನಿಕ ಮೆರವಣಿಗೆಯಲ್ಲಿ ಆರು ಕಿಲೋ ಮೀಟರ್‌ ನಡೆದಿರುವುದು ಇದೇ ಮೊದಲು. ನಾವು ಅತಿ ಗಣ್ಯ ವ್ಯಕ್ತಿಗಳ ಭದ್ರತಾ ವ್ಯವಸ್ಥೆಯ ಬಗ್ಗೆ ವ್ಯವಸ್ಥೆ ಮಾಡಿದ್ದರೂ ದಾರಿಯುದ್ದಕ್ಕೂ ಮೋದಿ ಮತ್ತು ತಂಡಕ್ಕೆ ರಕ್ಷಣೆ ಒದಗಿಸಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕಾಯಿತು,'' ಎಂದು ಭದ್ರತಾ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ನಾಯಕರಿಗೂ ಅಚ್ಚರಿ: ಬಿಜೆಪಿ ಕಚೇರಿಯಲ್ಲಿದ್ದ ನಾಯಕರಿಗೂ ಪ್ರಧಾನಿ ನಡೆ ಅಚ್ಚರಿ ಮೂಡಿಸಿದೆ. ''ಅಮಿತ್‌ ಶಾ ಅವರು ಕಾಲ್ನಡಿಗೆಯಲ್ಲಿ ಸಾಗುವ ಸಾಧ್ಯತೆ ಇದೆ ಎಂಬ ಸೂಚನೆ ಇತ್ತು. ಆದರೆ, ಪ್ರಧಾನಿ ಅವರ ನಿರ್ಧಾರ ಅಚ್ಚರಿ ತಂದಿತು. ಅವರು, ಕೆಲವು ಮೀಟರ್‌ ವರೆಗೆ(ಐಟಿಒ ಕಚೇರಿ) ಸಾಗಬಹುದು ಎಂದು ಭಾವಿಸಿದ್ದೆವು. ಆದರೆ, ಅವರು ತಿರುಗಿ ನೋಡಲೇ ಇಲ್ಲ,'' ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ಹಾದಿಯಲ್ಲಿ ಭದ್ರತೆ ಹೇಗಿರಬೇಕು?

* ಪ್ರಧಾನಿ ಸಾಗುವ ದಾರಿ ಗಂಟೆಗೂ ಮೊದಲೇ ಪೊಲೀಸ್‌ ನಿಯಂತ್ರಣದಲ್ಲಿರಬೇಕು.

* ಎಲ್ಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರಬೇಕು.

* ರಸ್ತೆಯ ಎರಡೂ ಬದಿ ಶಸ್ತ್ರಸಜ್ಜಿತ ಪೊಲೀಸರು ನಿಂತಿರಬೇಕು.

* ಯಾರೂ ಕೂಡಾ ರಸ್ತೆಗೆ ಇಳಿಯಬಾರದು.

* ರಸ್ತೆ ಪಕ್ಕದ ಮನೆಗಳ ಸಮೀಕ್ಷೆ ನಡೆಸಬೇಕು.

* ಮನೆಗಳ ಮೇಲೆ ಕಣ್ಗಾವಲು ಇಡಬೇಕು.

* ಸಾದಾ ದಿರಿಸಿನಲ್ಲಿ ಪೊಲೀಸರನ್ನು ನೇಮಿಸಿರಬೇಕು.

ತಕ್ಷಣವೇ ವ್ಯವಸ್ಥೆ

ಮೋದಿ ಅವರು ಮೆರವಣಿಗೆಯಲ್ಲಿ ಸಾಗಿಬರುವ ಮಾಹಿತಿ ತಿಳಿಯುತ್ತಿದ್ದಂತೆಯೇ ದಾರಿಯಲ್ಲಿರುವ ಪ್ರತಿ ಮನೆಯನ್ನೂ ಪರೀಕ್ಷಿಸಿ, ಮನೆಯ ಮೇಲೆ ಪೊಲೀಸರನ್ನು ನೇಮಿಸಲಾಯಿತು. ಹಲವು ಸುತ್ತಿನ ಭದ್ರತಾ ವ್ಯವಸ್ಥೆ ಮಾಡಲಾಯಿತು. ಸುಮಾರು 3000 ಪೊಲೀಸರು ನಿಯೋಜನೆಯಲ್ಲಿದ್ದರು ಎಂದು ದಿಲ್ಲಿ ಪೊಲೀಸ ಕಮೀಷನರ್‌ ಅಮೂಲ್ಯ ಪಟ್ನಾಯಕ್‌ ಹೇಳಿದ್ದಾರೆ.

ಭದ್ರತೆ ಒದಗಿಸಲು ಪೊಲೀಸರು ಭಾರಿ ಸವಾಲು ಎದುರಿಸಿರಬಹುದು. ಹಲವು ವಿವಿಐಪಿಗಳು ಒಂದೇ ಕಡೆ ಸೇರಿದ್ದಾರೆ. ಪ್ರಧಾನಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ ಎಂದರೆ ಭದ್ರತಾ ಸಿಬ್ಬಂದಿಗೆ ಭಾರಿ ಕಷ್ಟ. 1984ರಲ್ಲಿ ಇಂದಿರಾ ಗಾಂಧಿ ಅವರ ಅಂತಿಯ ಯಾತ್ರೆಯ ಮೇಲ್ವಿಚಾರಣೆ ವಹಿಸಿದ ಅನುಭವ ನನಗಿದೆ. ಆಗಲೂ ಜನ ಬೀದಿಗೆ ಇಳಿದಿದ್ದರು. ನಿಯಂತ್ರಣ ತುಂಬ ಕಷ್ಟವಾಗಿತ್ತು. ನೆಹರೂ ಬಳಿಕ ಅತಿ ಹೆಚ್ಚು ಜನ ಸೇರಿದ್ದು ಈ ಮೆರವಣಿಗೆಗೆ ಅಂತ ಅನಿಸುತ್ತದೆ.
- ಅಮೋದ್‌ ಕಾಂತ್‌, ನಿವೃತ್ತ ಐಎಎಸ್‌ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ