ಆ್ಯಪ್ನಗರ

750 ಕೆ.ಜಿ ಈರುಳ್ಳಿ ಬೆಲೆ ₹ 1,064: ಪ್ರಧಾನಿಗೆ ಮನಿ ಆರ್ಡರ್ ಮಾಡಿದ ರೈತ

ಈರುಳ್ಳಿ ಬೆಳೆದ ರೈತನೊಬ್ಬನ ಕಣ್ಣೀರ ಕಥೆ ಇದು. ಇವರು ಬೆಳೆದ 750 ಕೆ.ಜಿ ಈರುಳ್ಳಿಗೆ ಸಿಕ್ಕಿದ್ದು ಬರೀ 1064 ರೂ. ಈ ಹಣವನ್ನು ಪ್ರಧಾನಮಂತ್ರಿಯ ವಿಪತ್ತು ನಿರ್ವಹಣಾ ನಿಧಿಗೆ ಕಳುಹಿಸಿದ್ದಾರೆ. ಮನಿ ಆರ್ಡರ್ ಕಳುಹಿಸಲು ₹ 54 ಶುಲ್ಕ ತಲುಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾರನ್ನು ಭೇಟಿಯಾಗಿದ್ದ ಈ ರೈತನಿಗೆ ಪ್ರಗತಿಪರ ರೈತ ಎಂಬ ಬಿರುದನ್ನೂ ನೀಡಲಾಗಿದೆ.

PTI 3 Dec 2018, 2:00 pm
ಮುಂಬೈ: ಈರುಳ್ಳಿ ಬೆಳೆದ ಮಹಾರಾಷ್ಟ್ರದ ರೈತನ ಕಣ್ಣೀರ ಗಾಥೆ ಇದು. ತಾನು ಬೆವರರಿಸಿ ದುಡಿದು ಬೆಳೆದ 750 ಕೆ.ಜಿ ಈರುಳ್ಳಿಗೆ ಸಿಕ್ಕಿದ್ದು ಬರೀ 1064 ರೂ. ಅಂದರೆ ಕೆ.ಜಿ ಈರುಳ್ಳಿ ಬೆಲೆ 1.50 ರೂ.ಗಿಂತಲೂ ಕಡಿಮೆ. ತನ್ನ ಬೆವರಿನ ದುಡಿಮೆಯನ್ನು ಪ್ರಧಾನಿಗೆ ಕಳುಹಿಸಿ ಪ್ರತಿಭಟಿಸಿದ್ದಾನೆ ಈ ಅನ್ನದಾತ.
Vijaya Karnataka Web onion


ನಾಸಿಕ್ ಜಿಲ್ಲೆಯ ನಿಫಾಡ್‌ ಮೂಲದ ಈರುಳ್ಳಿ ಬೆಳೆದ ಈ ರೈತನ ಹೆಸರು ಸಂಜಯ್ ಸಾಥೆ. 2010ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ಮಾತನಾಡಿದ್ದ ಇವರಿಗೆ ಕೇಂದ್ರ ಕೃಷಿ ಸಚಿವಾಲಯ 'ಪ್ರಗತಿಪರ ರೈತ' ಎಂಬ ಬಿರುದನ್ನು ನೀಡಿ ಗೌರವಿಸಿದೆ.

ಆದರೆ ಇಂದು ಈ ಪ್ರಗತಿಪರ ರೈತನ ಪರಿಸ್ಥಿತಿ ಶೋಚನೀಯವಾಗಿದೆ. ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿರುವ ಸಂಜಯ್, "ಈ ಋತುವಿನಲ್ಲಿ 750 ಕೆ.ಜಿ ಈರುಳ್ಳಿ ಬೆಳೆದೆ. ಕಳೆದ ವಾರ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ ಬೆಲೆ 1 ರೂ.ಗಿಂತಲೂ ಕಡಿಮೆ ಬೆಲೆ ಇತ್ತು. ಹೇಗೋ ಚೌಕಾಸಿ ಮಾಡಿ 1.40 ರೂ.ಗೆ ಮಾರಿದೆ. ಕೈಗೆ ಬಂದದ್ದು ₹ 1064. ಈ ಹಣವನ್ನು ಪ್ರಧಾನಮಂತ್ರಿಯ ವಿಪತ್ತು ನಿರ್ವಹಣಾ ನಿಧಿಗೆ ಕಳುಹಿಸಿದ್ದೇನೆ. ಮನಿ ಆರ್ಡರ್ ಕಳುಹಿಸಲು ₹ 54 ಶುಲ್ಕ ತಲುಲಿದೆ" ಎಂದಿದ್ದಾನೆ.

"ನಾನು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ. ಸರಕಾರ ಕೊಟ್ಟಿರುವ ಭರವಸೆಗಳನ್ನು ಈಡೇರಿಸದ ಬಗ್ಗೆ ನನಗೆ ಸಿಟ್ಟಿದೆ" ಎಂದು ನೋವಿನಿಂದ ನುಡಿದಿದ್ದಾನೆ ರೈತ. "Narendra Modi, Prime Minister of India" ಎಂದು ಬರೆದು ನಿಫಾಡ್ ಅಂಚೆ ಕಚೇರಿಯಿಂದ ನವೆಂಬರ್ 29ರಂದು ಮನಿ ಆರ್ಡರ್ ಮಾಡಿದ್ದಾರೆ.

ಭಾರತದ ಶೇ.50 ರಷ್ಟು ಈರುಳ್ಳಿಯನ್ನು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಎಂಟು ವರ್ಷಗಳ ಹಿಂದೆ ಒಬಾಮಾ ಜತೆಗೆ ತಾವು ಟೆಲಿಕಾಂ ಆಯೋಜಕರ ಧ್ವನಿ ಆಧಾರಿತ ಸಲಹಾ ಸೇವೆ ಮೂಲಕ ಅವರೊಂದಿಗೆ ಮಾತನಾಡಿದ್ದೆ. ಆಗ ಹವಾಮಾನ ಬದಲಾವಣೆ ನಡುವೆಯೂ ತಾನು ಹೆಚ್ಚು ಇಳುವರಿ ಪಡೆದ ಬಗ್ಗೆ ತಿಳಿಸಿದ್ದೆ ಎಂದಿದ್ದಾರೆ.

ಸ್ಥಳೀಯ ಆಕಾಶವಾಣಿ ಕೇಂದ್ರದ ಮೂಲಕ ತನ್ನ ಕೃಷಿ ಪ್ರಯೋಗಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಒಬಾಮಾ ಭೇಟಿ ನೀಡಿದಾಗ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಮಳಿಗೆ ತೆರೆಯಲು ಇವರಿಗೆ ಅವಕಾಶ ನೀಡಲಾಗಿತ್ತು. ಅರ್ಥ ನಿರೂಪಕರ ಮುಖಾಂತರ ಒಬಾಮಾ ಜತೆಗೆ ಕೆಲವು ನಿಮಿಷಗಳ ಕಾಲ ಮಾತನಾಡಿದ್ದೆ ಎಂದಿದ್ದಾರೆ ಸಂಜಯ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ