ಆ್ಯಪ್ನಗರ

ಸಂಪುಟ ತೊರೆದ ಸಿಧು, ಹೊಸ ಗೇಮ್‌ ಶುರು

ತಮ್ಮ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಸಿಧು ಮೇಲೆ ಅಮರೀಂದರ್‌ ಸಿಂಗ್‌ ಕತ್ತಿ ಮಸೆಯುತ್ತಲೇ ಬಂದಿದ್ದರು. ಕಳೆದ ತಿಂಗಳು ಸಿಧು ಅವರ ಖಾತೆ ಬದಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು.

PTI 15 Jul 2019, 5:00 am
ಚಂಡೀಗಢ: ಕರ್ನಾಟಕ, ಗೋವಾದಲ್ಲಿ ಒಡಕಿನ ಆಘಾತದಿಂದ ದಿಕ್ಕೆಟ್ಟಿರುವ ಕಾಂಗ್ರೆಸ್‌ಗೆ ಈಗ ಪಂಜಾಬ್‌ನಲ್ಲೂ ಮರ್ಮಾಘಾತ ಉಂಟಾಗಿದೆ. ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ವಿರುದ್ಧ ಹಲವು ತಿಂಗಳುಗಳಿಂದ ಸಂಘರ್ಷಕ್ಕಿಳಿದಿದ್ದ ಸಚಿವ ನವಜೋತ್‌ ಸಿಂಗ್‌ ಸಿಧು ಕೊನೆಗೂ ರಾಜೀನಾಮೆ ನೀಡಿ ಸಂಪುಟದಿಂದ ಹೊರ ಬಿದ್ದಿದ್ದಾರೆ.
Vijaya Karnataka Web sidhu

ತಮ್ಮ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಸಿಧು ಮೇಲೆ ಅಮರೀಂದರ್‌ ಸಿಂಗ್‌ ಕತ್ತಿ ಮಸೆಯುತ್ತಲೇ ಬಂದಿದ್ದರು. ಕಳೆದ ತಿಂಗಳು ಸಿಧು ಅವರ ಖಾತೆ ಬದಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಮಾಜಿ ಕ್ರಿಕೆಟಿಗ ಸಿಧು ಭಾನುವಾರ ರಾಜೀನಾಮೆ ನೀಡಿ ಎದುರೇಟು ಕೊಟ್ಟಿದ್ದಾರೆ.
ತಕ್ಷಣವೇ ಎದುರೇಟು: ಖಾತೆ ಬದಲಿಸಿದ ಮರುದಿನ ಅಂದರೆ, ಜೂನ್‌ 10ರಂದೇ ಸಿಧು ರಾಜೀನಾಮೆ ನೀಡಿದ್ದರು. ಆ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯ ಬದಲಿಗೆ ಅಂದಿನ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಕಳಿಸಿಕೊಟ್ಟಿದ್ದರು. ಆದರೆ ಇದುವರೆಗೆ ಆ ಬಗ್ಗೆ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಇದರಿಂದ ಬೇಸತ್ತ ಸಿಧು, ಭಾನುವಾರ ಟ್ವಿಟರ್‌ ಮೂಲಕ ರಾಜೀನಾಮೆ ಪತ್ರ ಬಹಿರಂಗಪಡಿಸಿದ್ದಾರೆ.

ಒಂದೇ ಸಾಲು: ನೇರ ನಡೆ ನುಡಿಗೆ ಹೆಸರಾದ ಸಿಧು, ತಮ್ಮ ರಾಜೀನಾಮೆ ಪತ್ರದಲ್ಲೂ ಹೆಚ್ಚಿನ ವಿಷಯ ಕೆದಕದೇ ಒಂದೇ ಸಾಲಿನಲ್ಲಿ ಕೊನೆಗೊಳಿಸಿದ್ದಾರೆ. ''ಸಚಿವನಾದ ನಾನು, ಪಂಜಾಬ್‌ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ,'' ಎಂದು ಚುಟುಕಾಗಿ ಮುಗಿಸಿದ್ದಾರೆ. ವಿಶೇಷವೆಂದರೆ, ಆ ಪತ್ರದಲ್ಲೆಲ್ಲೂ ಮುಖ್ಯಮಂತ್ರಿಯ ಹೆಸರು ನಮೂದಿಸಿಲ್ಲ. ನೇರ ಪಕ್ಷದ ಅಧ್ಯಕ್ಷರಿಗೆ ಪತ್ರ ಕಳಿಸಿಕೊಟ್ಟು, ಸಿಎಂ ವಿರುದ್ಧದ ತಮ್ಮ ಸೇಡಿನ ತೀವ್ರತೆಯನ್ನು ಹೊರ ಹಾಕಿದ್ದಾರೆ. ಈಗ ಅಮರೀಂದರ್‌ ಸಿಂಗ್‌ ಅವರಿಗೂ ರಾಜೀನಾಮೆ ಪತ್ರ ಕಳಿಸಿಕೊಡುವುದಾಗಿ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
.............
ಇಷ್ಟದ ಖಾತೆಗೆ ಕೊಕ್‌
ಸಿಧು ಬಹುವಾಗಿ ಇಷ್ಟಪಟ್ಟಿದ್ದ ಸ್ಥಳೀಯ ಸಂಸ್ಥೆಗಳ ಆಡಳಿತ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಕ ವ್ಯವಹಾರಗಳ ಖಾತೆಯಿಂದ ಇಂಧನ ಖಾತೆಗೆ ಎತ್ತಂಗಡಿ ಮಾಡಿ ಅಮರಿಂದರ್‌ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಇದರ ಜತೆಗೆ ಸರಕಾರದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕಾಗಿ ರಚಿಸಲಾಗಿದ್ದ ಪ್ರಮುಖ ಸಚಿವರ ಸಲಹಾ ಮಂಡಳಿಯಿಂದಲೂ ಅವರನ್ನು ಕೈಬಿಟ್ಟಿದ್ದರು. ಇದನ್ನು ಪ್ರತಿಭಟಿಸಿದ್ದ ಸಿಧು, ತಮಗೆ ನೀಡಿದ್ದ ನೂತನ ಖಾತೆ ವಹಿಸಿಕೊಳ್ಳದೇ ದೂರವೇ ಉಳಿದಿದ್ದರು. ಏತನ್ಮಧ್ಯೆ, ಹಲವು ಬಾರಿ ದಿಲ್ಲಿಗೆ ತೆರಳಿ, ತಮಗಾದ ಅನ್ಯಾಯ ಕುರಿತು ಪಕ್ಷದ ವರಿಷ್ಠರಿಗೆ ವಿವರಿಸಿದ್ದರು. ಆದರೆ, ಆ ವೇಳೆಗಾಗಲೇ ವರಿಷ್ಠರ ಸಮಸ್ಯೆಗಳ ಅಳವಂಡವೇ ದೊಡ್ಡದಾಗಿದ್ದರಿಂದ ಇವರ ಅಳಲಿಗೆ ಸರಿಯಾದ ಪ್ರತಿಕ್ರಿಯೆ ಲಭಿಸಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ