ಆ್ಯಪ್ನಗರ

ಕೊರೊನಾ ಪ್ಯಾಕೇಜ್‌: ಕೇಂದ್ರದಿಂದ 5 ಕೆಜಿ ಅಕ್ಕಿ, 1 ಕೆಜಿ ಬೇಳೆ ಫ್ರೀ; ಜೊತೆಗೆ ಮತ್ತಷ್ಟು ಕೊಡುಗೆ

'ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ'ಯಡಿಯಲ್ಲಿ ಮುಂದಿನ ಮೂರು ತಿಂಗಳ ಕಾಲ ಕೇಂದ್ರ ಸರಕಾರ ಜನರಿಗೆ ಧವಸ-ಧಾನ್ಯಗಳನ್ನು ನೀಡಲಿದೆ. ಇದರಿಂದ ದಿನಗೂಲಿ ನೌಕರರು, ಪಟ್ಟಣ ಮತ್ತು ಹಳ್ಳಿಯಲ್ಲಿರುವ 80 ಕೋಟಿ ಬಡವರಿಗೆ ಅನುಕೂಲವಾಗಲಿದೆ.

ANI 26 Mar 2020, 2:16 pm

ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಣೆಯಾಗಿದ್ದು, ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಇದೀಗ ಇವರ ನೆರವಿಗೆ ಕೇಂದ್ರ ಸರಕಾರ ಧಾವಿಸಿದ್ದು, ಜನರಿಗೆ ಉಚಿತವಾಗಿ ಪಡಿತರ ವಿತರಿಸುವುದಾಗಿ ಘೋಷಿಸಿದೆ.
Vijaya Karnataka Web Union Finance Minister Nirmala Sitharaman


ಗುರುವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ 'ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ' ಘೋಷಣೆ ಮಾಡಿದ್ದಾರೆ.

ಈ ಯೋಜನೆ ಪ್ರಕಾರ ಈಗಾಗಲೇ ಕುಟುಂಬದ ಪ್ರತಿ ಸದಸ್ಯನಿಗೆ ನೀಡಲಾಗುತ್ತಿರುವ 5 ಕೆಜಿ ಅಕ್ಕಿ ಅಥವಾ ಗೋಧಿ ಜೊತೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ನೀಡಲಾಗುವುದು. ಅಲ್ಲದೆ ಕುಟುಂಬವೊಂದಕ್ಕೆ ಆಯಾ ಪ್ರದೇಶಕ್ಕೆ ಅನುಗುಣವಾಗಿ 1 ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗುವುದು ಎಂಬುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಮುಂದಿನ ಮೂರು ತಿಂಗಳ ಕಾಲ ಸರಕಾರ ಈ ಧವಸ-ಧಾನ್ಯಗಳನ್ನು ನೀಡಲಿದೆ. ಇದರಿಂದ ದಿನಗೂಲಿ ನೌಕರರು, ಪಟ್ಟಣ ಮತ್ತು ಹಳ್ಳಿಯಲ್ಲಿರುವ 80 ಕೋಟಿ ಬಡವರಿಗೆ ಅನುಕೂಲವಾಗಲಿದೆ. ಅಲ್ಲಿಗೆ ದೇಶದ ಮೂರನೇ ಎರಡು ಭಾಗ ಜನರಿಗೆ ಇದರಿಂದ ಸಹಾಯವಾಗಲಿದೆ ಎಂಬುದಾಗಿ ಅವರು ವಿವರಿಸಿದ್ದಾರೆ.

ಕೊರೊನಾ ಸೋಂಕು ಪರಿಹಾರ ನಿಧಿಗೆ 1.70 ಲಕ್ಷ ಕೋಟಿ ರೂ. ಘೋಷಿಸಿದ ಸೀತಾರಾಮನ್‌

ಉಜ್ವಲ ಯೋಜನೆಯಡಿಯಲ್ಲಿ 8.3 ಕೋಟಿ ಬಡ ಕುಟುಂಬಗಳಿದ್ದು, ಇವರಿಗೆ ಮುಂದಿನ ಮೂರು ತಿಂಗಳು ಉಚಿತವಾಗಿ ಗ್ಯಾಸ್‌ ಸಿಲಿಂಡರ್‌ ವಿತರಣೆ ಮಾಡುವುದಾಗಿಯೂ ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

20 ಕೋಟಿ ಜನ್‌ ಧನ್‌ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ ತಲಾ 500 ರೂಪಾಯಿಯಂತೆ ಮುಂದಿನ ಮೂರು ತಿಂಗಳು ನೀಡಲಾಗುತ್ತದೆ. ವೃದ್ಧಾಪ್ಯ, ವಿಧವಾ ಮತ್ತು ದಿವ್ಯಾಂಗ ಪಿಂಚಣಿ ಪಡೆಯುತ್ತಿರುವವರಿಗೆ ಮುಂದಿನ ಮೂರು ತಿಂಗಳು ಎರಡು ಕಂತುಗಳಲ್ಲಿ ಹೆಚ್ಚುವರಿಯಾಗಿ 1,000 ರೂಪಾಯಿಗಳನ್ನು ನೀಡಲಾಗುವುದು. ನರೇಗಾ ಯೋಜನೆಯಡಿಯಲ್ಲಿ ದಿನಗೂಲಿ ಹೆಚ್ಚಳ ಮಾಡಲಾಗಿದ್ದು, ಇದರಿಂದ ಪ್ರತಿಯೊಬ್ಬರಿಗೆ ಸರಾಸರಿ 2,000 ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ. ಕೃಷಿ ಸಮ್ಮಾನ್‌ ಯೋಜನೆಯಡಿ 8.69 ಕೋಟಿ ರೈತರಿಗೆ ಏಪ್ರಿಲ್‌ ಕಂತಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ವಿವರ ನೀಡಿದ್ದಾರೆ.

ಕೊರೊನಾ ಪ್ಯಾಕೇಜ್: ಕಿಸಾನ್ ಸಮ್ಮಾನ್ ಹಣ ಶೀಘ್ರ ಬಿಡುಗಡೆಗೆ ವಿತ್ತ ಸಚಿವಾಲಯ ಸಮ್ಮತಿ


ಒಟ್ಟಾರೆ ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ 1.70 ಲಕ್ಷ ಕೋಟಿ ರೂ. ಪರಿಹಾರ ನಿಧಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ