ಆ್ಯಪ್ನಗರ

ಏಪ್ರಿಲ್‌ಗೆ ಆಕ್ಸ್‌ಫರ್ಡ್‌ ಕೊರೊನಾ ಲಸಿಕೆ ಲಭ್ಯ, 2 ಡೋಸ್‌ಗೆ 1,000 ರೂ.: ಅದಾರ್‌ ಪೂನಾವಾಲ

ಬಹುಶಃ 2024ರ ವೇಳೆಗೆ ಎಲ್ಲಾ ಭಾರತೀಯರು ಕೊರೊನಾ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ಸೆರಂ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಅದಾರ್‌ ಪೂನಾವಾಲ ಹೇಳಿದ್ದಾರೆ. ಲಸಿಕೆಯ ಎರಡು ಡೋಸ್‌ಗೆ ಗರಿಷ್ಠ 1,000 ರೂಪಾಯಿ ದರ ಇರಬಹುದು ಎಂದು ಅವರು ಅಂದಾಜಿಸಿದ್ದಾರೆ.

Agencies 20 Nov 2020, 6:38 pm
ಹೊಸದಿಲ್ಲಿ: 2021ರ ಏಪ್ರಿಲ್‌ ವೇಳೆಗೆ ಸಾರ್ವಜನಿಕರ ಬಳಕೆಗೆ ಆಕ್ಸ್‌ಫರ್ಡ್‌ ವಿವಿ ತಯಾರಿಸಿರುವ ಕೋವಿಡ್‌ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಸೆರಂ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಅದಾರ್‌ ಪೂನಾವಾಲ ಹೇಳಿದ್ದಾರೆ. ಇದಕ್ಕೂ ಮೊದಲೇ ಅಂದರೆ ಫೆಬ್ರವರಿಗೆ ವೃದ್ಧರು ಮ್ತತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಲಭ್ಯವಾಗಬಹುದು ಎಂದು ಅವರು ಅಂದಾಜಿಸಿದ್ದಾರೆ.
Vijaya Karnataka Web oxford vaccine (1)


ಲಸಿಕೆಯ ಎರಡು ಡೋಸ್‌ಗೆ ಗರಿಷ್ಠ 1,000 ರೂಪಾಯಿ ದರ ಇರಬಹುದು ಎಂದು ಅಂದಾಜಿಸಿರುವ ಅವರು, ಅಂತಿಮ ಫಲಿತಾಂಶ ಮತ್ತು ಮತ್ತು ನಿಯಂತ್ರಕರ ಅನುಮೋದನೆಯ ನಂತರ ಲಸಿಕೆಯ ಯಾವಾಗ ಮತ್ತು ಎಷ್ಟು ಬೆಲೆಗೆ ಲಭ್ಯವಾಗಬಹುದು ಎಂಬುದರ ಅಂತಿಮ ಚಿತ್ರಣ ಸಿಗಲಿದೆ ಎಂದು ವಿವರಿಸಿದ್ದಾರೆ.

2024ರ ವೇಳೆಗೆ ಇಡೀ ಭಾರತಕ್ಕೆ ಲಸಿಕೆ ನೀಡಲು ಸಾಧ್ಯವಿದೆ ಎಂದಿರುವ ಪೂನಾವಾಲ, ಮೂರು ವರ್ಷಗಳ ವಿಳಂಬಕ್ಕೆ ಪೂರೈಕೆ ಒಂದೇ ಕಾರಣ ಅಲ್ಲ, ಬಜೆಟ್‌, ಲಸಿಕೆ, ಮೂಲಸೌಕರ್ಯ, ಜೊತೆಗೆ ಜನರು ಈ ಲಸಿಕೆ ಪಡೆದುಕೊಳ್ಳಲು ಮುಂದೆ ಬರಬೇಕಾಗುತ್ತದೆ ಎಂದು ಹೇಳಿದ್ದಾರೆ.

1,000 ರೂಪಾಯಿ ಗರಿಷ್ಠ ಮಾರಾಟ ದರ ಇರಬಹುದು ಎಂದು ಹೇಳಿರುವ ಅವರು, ದೊಡ್ಡ ಪ್ರಮಾಣದಲ್ಲಿ ಭಾರತ ಸರಕಾರ ಲಸಿಕೆ ಖರೀದಿಸುವ ಕಾರಣ ದರ ಕಡಿತಗೊಳ್ಳಬಹುದು. ಮಾರುಕಟ್ಟೆಯಲ್ಲಿ ಎಲ್ಲಾ ಲಸಿಕೆಗಳಿಗಿಂತ ಕಡಿಮೆ ಬೆಲೆಗೆ ಹಾಗೂ ಎಲ್ಲರ ಕೈಗೆಟುಕುವ ದರಕ್ಕೆ ಕೊರೊನಾ ಲಸಿಕೆಯನ್ನು ಪೂರೈಸಲು ನಾವು ಉದ್ದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಝೆನಿಕಾ ಕಂಪನಿ ಜಂಟಿಯಾಗಿ ತಯಾರಿಸಿರುವ ಈ ಲಸಿಕೆ ಹಿರಿಯರಲ್ಲೂ ಪರಿಣಾಮಕಾರಿಯಾಗಿದೆ. ದೀರ್ಘ ಕಾಲ ಈ ಲಸಿಕೆ ನಿಮ್ಮನ್ನು ಕಾಪಾಡಲಿದೆಯೇ ಎಂಬುದನ್ನು ಮಾತ್ರ ಕಾಲವೇ ನಿರ್ಧರಿಸಬೇಕು. ಅದನ್ನು ಈಗ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಸದ್ಯಕ್ಕೆ ಲಸಿಕೆ ಯಾವುದೇ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟು ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ವರ್ಷಾಂತ್ಯಕ್ಕೆ ಆಕ್ಸ್‌ಫರ್ಡ್‌-ಆಸ್ಟ್ರಾಝೆನಿಕಾ ಕೊರೊನಾ ಲಸಿಕೆ ಲಭ್ಯ: ಕಂಪನಿ ವಿಶ್ವಾಸ

ಬ್ರಿಟನ್‌ ಮತ್ತು ಯುರೋಪ್‌ನಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುತ್ತಿದ್ದಂತೆ ಭಾರತದಲ್ಲೂ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಲಾಗುವುದು. ಆದರೆ ಇದನ್ನು ಆರೋಗ್ಯ ಕಾರ್ಯಕರ್ತರು, ಕೊರೊನಾ ವಾರಿಯರ್ಸ್‌ ಹಾಗೂ ಹಿರಿಯರಿಗೆ ಮಾತ್ರ ನೀಡಲಾಗುವುದು ಎಂದಿದ್ದಾರೆ.

ಮಕ್ಕಳಿಗೆ ಲಸಿಕೆ ನೀಡಲು ಪ್ರಯೋಗದ ಅಂತಿಮ ವರದಿ ಬರಲೇಬೇಕು. ಸದ್ಯದ ಶುಭ ಸುದ್ದಿ ಏನೆಂದರೆ ಮಕ್ಕಳ ಮೇಲೆ ಲಸಿಕೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಆಕ್ಸ್‌ಫರ್ಡ್‌ ಲಸಿಕೆ ಸುರಕ್ಷಿತವಾಗಿದೆ, ಕೈಗೆಟುಕುವಂತಿದೆ ಮತ್ತು 2 ರಿಂದ 8 ಡಿಗ್ರಿ ತಾಪಮಾನದಲ್ಲಿ ಇಡಬೇಕಾಗಿದ್ದು, ಭಾರತದ ಕೋಲ್ಡ್‌ ಸ್ಟೋರೇಜ್‌ನಲ್ಲಿ ಸುಲಭವಾಗಿ ಇಡಬಹುದು. ಫೆಬ್ರವರಿಯಿಂದ ಪ್ರತಿ ತಿಂಗಳು ಲಸಿಕೆಯ 10 ಕೋಟಿ ಡೋಸ್‌ ಉತ್ಪಾದನೆಗೆ ಸೆರಂ ಇನ್ಸ್ಟಿಟ್ಯೂಟ್‌ ಯೋಜನೆ ರೂಪಿಸಿದೆ ಎಂದು ಅವರು ಹೇಳಿದ್ದಾರೆ.

ಜುಲೈ ವೇಳೆಗೆ ಭಾರತಕ್ಕೆ 4 ಕೋಟಿ ಡೋಸ್‌ಗಳ ಅಗತ್ಯವಿದೆ. ಇಷ್ಟೂ ಡೋಸ್‌ಗಳನ್ನು ಸೆರಂ ಇನ್ಟಿಟ್ಯೂಟ್‌ ಒಂದೇ ಪೂರೈಸಲಿದೆಯಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅದರೆ ಈ ಪ್ರಮಾಣದ ಪೂರೈಕೆಗೆ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದಷ್ಟೆ ಪೂನಾವಾಲ ಹೇಳಿದ್ದಾರೆ. ಜೊತೆಗೆ ಭಾರತಕ್ಕೆ ನಾವು ಪ್ರಾಮುಖ್ಯತೆ ನೀಡಲಿದ್ದು, ಉಳಿದ ದೇಶಗಳ ಜೊತೆ ಸದ್ಯಕ್ಕೆ ಯಾವುದೇ ಒಪ್ಪಂದ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಮೊದಲಿಗೆ ಭಾರತ, ನಂತರ ಆಫ್ರಿಕಾ, ಬಳಿಕ ಉಳಿದ ದೇಶಗಳತ್ತ ಚಿತ್ತ ಹರಿಸಲಿದ್ದೇವೆ ಎಂದಿರುವ ಅವರು, 2021ರ ಮೊದಲ ತ್ರೈಮಾಸಿಕದ ವೇಳೆಗೆ 30 ರಿಂದ 40 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ