ಆ್ಯಪ್ನಗರ

ಡಿಸೆಂಬರ್‌ ಅಂತ್ಯಕ್ಕೇ ಕೊರೊನಾ ಲಸಿಕೆ, ಸೆರಮ್‌ ಇಂಡಿಯಾ ಮುಖ್ಯಸ್ಥ ಪೂನಾವಾಲಾ ವಿಶ್ವಾಸ

ಬ್ರಿಟನ್‌ನಲ್ಲಿ ನಡೆದ ಪ್ರಯೋಗದ ವರದಿ ಆಧರಿಸಿ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ತುರ್ತು ಪರವಾನಗಿ ಕೋರುವ ಇಂಗಿತವನ್ನು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಆದರ್‌ ಪೂನಾವಾಲಾ ವ್ಯಕ್ತಪಡಿಸಿದ್ದಾರೆ.

Agencies 30 Oct 2020, 8:21 pm
ಮುಂಬಯಿ: ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಗಳು ಬ್ರಿಟನ್‌ನಲ್ಲಿ ನಡೆಸಿದ ಕೊರೊನಾ ನಿರೋಧಕ ಲಸಿಕೆ ಸಂಶೋಧನೆಯ ಮಾಹಿತಿ, ಸುರಕ್ಷಾ ಕ್ರಮಗಳನ್ನು ಹಂಚಿಕೊಂಡಲ್ಲಿ ಇದೇ ಡಿಸೆಂಬರ್‌ ಅಂತ್ಯದ ಒಳಗಾಗಿ ಭಾರತದಲ್ಲಿ ಲಸಿಕೆ ಉತ್ಪಾದನೆ ಸಾಧ್ಯವಾಗಲಿದೆ ಎಂದು ಪುಣೆಯ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್‌ ಪೂನಾವಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಬ್ರಿಟನ್‌ನಲ್ಲಿ ನಡೆದ ಪ್ರಯೋಗದ ವರದಿ ಆಧರಿಸಿ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ತುರ್ತು ಪರವಾನಗಿ ಕೋರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸೆರಮ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆಯಾಗಿದೆ.
Vijaya Karnataka Web SIIs Covishield vaccine


2020ರ ಅಂತ್ಯಕ್ಕೆ ಕೊರೊನಾ ಲಸಿಕೆ ಲಭ್ಯವಾಗಲಿದೆಯೆ?

ಅದನ್ನು ಖಚಿತವಾಗಿ ಹೇಳಲಾಗದು. ಬ್ರಿಟನ್‌ನಲ್ಲಿ ನಡೆಯುತ್ತಿರುವ ಕೊನೆಯ ಹಂತದ ಕ್ಲಿನಿಕಲ್‌ ಟ್ರಯಲ್‌ ಶೀಘ್ರವೇ ಮುಕ್ತಾಯವಾಗಲಿದೆ. ಸುರಕ್ಷತೆಗೆ ಸಂಬಂಧಿಸಿ ಇಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಬ್ರಿಟನ್‌ನಲ್ಲಿ ನಡೆದ ಸಂಶೋಧನೆ, ಪ್ರಯೋಗದ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ನಮ್ಮೊಂದಿಗೆ ಹಂಚಿಕೊಂಡರೆ, ಅದರ ಆಧಾರದಲ್ಲಿ ಭಾರತದಲ್ಲಿಲಸಿಕೆ ಉತ್ಪಾದನೆಗೆ ತುರ್ತು ಪರವಾನಗಿಗೆ ಮನವಿ ಮಾಡಬಹುದು. ಅದು ಸಾಧ್ಯವಾದರೆ 2020ರ ಡಿಸೆಂಬರ್‌ ಅಂತಕ್ಕೇ ಲಸಿಕೆ ಉತ್ಪಾದನೆ ಆರಂಭವಾಗಲಿದೆ. ತುರ್ತು ಪರವಾನಗಿಗೆ ಮನವಿ ಮಾಡದಿದ್ದರೆ ಭಾರತದಲ್ಲಿ 2021ರ ಜನವರಿ ಅಂತ್ಯಕ್ಕೆ ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಮುಕ್ತಾಯವಾಗಲಿದೆ.

ಈವರೆಗಿನ ಕ್ಲಿನಿಕಲ್‌ ಟ್ರಯಲ್‌ನ ಫಲಿತಾಂಶವೇನು?

ಯಾವುದೇ ಲಸಿಕೆಯ ದೀರ್ಘಕಾಲೀನ ಪರಿಣಾಮ ತಿಳಿಯಲು ಕನಿಷ್ಠ 2-3 ವರ್ಷ ಬೇಕಾಗುತ್ತದೆ. ಸದ್ಯದ ಮಾಹಿತಿಯಂತೆ ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ‘ಕೋವಿಶೀಲ್ಡ್‌’ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ.

ಲಸಿಕೆಯ ವೆಚ್ಚ ಮತ್ತು ಡೋಸ್‌ ಕುರಿತು ಮಾಹಿತಿ?

ಜನರ ಕೈಗೆಟುಕುವ ದರದಲ್ಲಿರುತ್ತದೆ ಎಂದಷ್ಟೇ ಹೇಳಬಲ್ಲೆ. ಈ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಬೇಕು. ಮೊದಲ ಡೋಸ್‌ ನೀಡಿದ 28 ದಿನಗಳ ಬಳಿಕ ಎರಡನೇ ಡೋಸ್‌ ನೀಡಬೇಕು. ಇಡೀ ಜಗತ್ತು ಕೊರೊನಾ ಸೋಂಕಿನಿಂದ ತತ್ತರಿಸಿರುವುದರಿಂದ ‘ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ’ದಲ್ಲಿಇದನ್ನು ಸೇರ್ಪಡೆ ಮಾಡುವುದು ಉತ್ತಮ.

ಭಾರತದಲ್ಲಿ ಎಲ್ಲರಿಗೂ ಲಸಿಕೆ ವಿತರಿಸಲು 80 ಸಾವಿರ ಕೋಟಿ ರೂ. ಬೇಕೆಂದು ಹೇಳಿದ್ದಿರಿ. ಕೇಂದ್ರ ಸರಕಾರ ಅದಕ್ಕಿಂತ ಕಡಿಮೆ ಮೊತ್ತ ನಿಗದಿಪಡಿಸಿದೆಯಲ್ಲ?

ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ. ಅನುದಾನ ಹಂಚಿಕೆಯನ್ನು ಸರಕಾರ ನೋಡಿಕೊಳ್ಳುತ್ತದೆ. ಎಲ್ಲರಿಗೂ ಉಚಿತವಾಗಿ ಲಸಿಕೆ ವಿತರಿಸಲು ಸಂಪನ್ಮೂಲದ ಸಮಸ್ಯೆ ಇಲ್ಲವೆಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ನಿಮ್ಮ ಸಂಸ್ಥೆ ಯಾವ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲಿದೆ?

ಆರಂಭದಲ್ಲಿ ತಿಂಗಳಿಗೆ 60-70 ದಶಲಕ್ಷ ಡೋಸ್‌ ಉತ್ಪಾದಿಸುವ ಗುರಿ ಇಟ್ಟುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನು 100 ದಶಲಕ್ಷ ಡೋಸ್‌ಗೆ ಹೆಚ್ಚಿಸಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ