ಆ್ಯಪ್ನಗರ

ಭಾರತದ ವಿಮಾನಗಳಿಗೆ ತನ್ನ ವಾಯುಮಾರ್ಗ ತೆರೆದ ಪಾಕ್‌

ಪಾಕಿಸ್ತಾನದ ನಿರ್ಬಂಧದ ತೆರವಿನಿಂದ ಏರ್‌ ಇಂಡಿಯಾ, ಇಂಡಿಗೋ, ಸ್ಪೈಸ್‌ ಜೆಟ್‌, ಗೋ ಏರ್‌ ಸೇರಿ ಅನೇಕ ವಿಮಾನಯಾನ ಸಂಸ್ಥೆಗಳಿಗೆ ಅನುಕೂಲವಾಗಲಿದೆ.

PTI 17 Jul 2019, 5:00 am
ಹೊಸದಿಲ್ಲಿ: ಬಾಲಾಕೋಟ್‌ ವಾಯುದಾಳಿ ಬಳಿಕ ಪಾಕಿಸ್ತಾನವು ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ಮಂಗಳವಾರ ತೆರವುಗೊಳಿಸಿದೆ. ಪಾಕಿಸ್ತಾನ ಸರಕಾರದ ಈ ತೀರ್ಮಾನದಿಂದ ಭಾರತೀಯ ವೈಮಾನಿಕ ಉದ್ಯಮಕ್ಕೆ ಅನುಕೂಲವಾದಂತಾಗಿದೆ. ಪುಲ್ವಾಮಾ ಉಗ್ರ ದಾಳಿಗೆ ಭಾರತೀಯ ವಾಯುಪಡೆ ಕಳೆದ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್‌ ಮೇಲೆ ವಾಯುದಾಳಿ ನಡೆಸಿ ಜೈಷೆ ಮೊಹಮ್ಮದ್‌ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು. ಇದಾದ ನಂತರ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಭಾರತದ ವಿಮಾನಗಳ ಹಾರಾಟಕ್ಕೆ ಸಂಪೂರ್ಣ ತಡೆಯೊಡ್ಡಿತ್ತು.
Vijaya Karnataka Web flight


ಮಂಗಳವಾರ ನಸುಕಿನ 12.41ರಿಂದ ತನ್ನ ವಾಯುಪ್ರದೇಶದ ಮೂಲಕ ಭಾರತದ ನಾಗರಿಕ ವಿಮಾನಗಳು ಹಾರಾಟ ನಡೆಸಬಹುದು ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ಬಂಧ ತೆರವುಗೊಳಿಸುವಂತೆ ಭಾರತದ ಕೋರಿಕೆಯನ್ನು ಪಾಕ್‌ ನಾಲ್ಕೂವರೆ ತಿಂಗಳ ಬಳಿಕ ಮನ್ನಿಸಿದೆ.

ಉದ್ಯಮಕ್ಕೆ ಅನುಕೂಲ: ಪಾಕಿಸ್ತಾನದ ನಿರ್ಬಂಧದ ತೆರವಿನಿಂದ ಏರ್‌ ಇಂಡಿಯಾ, ಇಂಡಿಗೋ, ಸ್ಪೈಸ್‌ ಜೆಟ್‌, ಗೋ ಏರ್‌ ಸೇರಿ ಅನೇಕ ವಿಮಾನಯಾನ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಭಾರತದ ವೈಮಾನಿಕ ಉದ್ಯಮಕ್ಕೆ ಹಲವು ಲಾಭಗಳಾಗಲಿವೆ ಎನ್ನಲಾಗಿದೆ. ಈ ನಿರ್ಧಾರದಿಂದ ಭಾರತದಿಂದ ಅಮೆರಿಕಕ್ಕೆ ತೆರಳುವ ಒಂದು ಕಡೆ ಪಯಣದಲ್ಲಿ (ಒನ್‌ ವೇ ರೂಟ್‌) ಕನಿಷ್ಠ 20 ಲಕ್ಷ ರೂ. ಉಳಿತಾಯವಾಗಲಿದೆ ಎಂದು ಏರ್‌ ಇಂಡಿಯಾ ಹೇಳಿದೆ.

ನಷ್ಟ ಅನುಭವಿಸಿದ್ದವು: ಪಾಕ್‌ ನಿರ್ಬಂಧದಿಂದ ಏರ್‌ ಇಂಡಿಯಾ ಒಂದೇ ಜುಲೈ 2ರ ಅಂತ್ಯಕ್ಕೆ 491 ಕೋಟಿ ರೂ. ನಷ್ಟ ಅನುಭವಿಸಿತ್ತು. ಸ್ಪೈಸ್‌ ಜೆಟ್‌ 30.73 ಕೋಟಿ ರೂ., ಇಂಡಿಗೋ 25.1 ಕೋಟಿ ರೂ. ಹಾಗೂ ಗೋ ಏರ್‌ 2.1 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಜುಲೈ 3ರಂದು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ