ಆ್ಯಪ್ನಗರ

ಮಂದಿರ ವಿರೋಧಕ್ಕೆ ಪಾಕ್‌ ಕುಮ್ಮಕ್ಕು!

ಭಾರತದಲ್ಲಿ ಸಹಬಾಳ್ವೆಯನ್ನು ಪಾಕಿಸ್ತಾನ ಸಹಿಸುವುದಿಲ್ಲ. ಹೀಗಾಗಿಯೇ ಸುನ್ನಿ ವಕ್ಫ್ ಮಂಡಳಿಗೆ ಆ ದೇಶವು ಹಣಕಾಸು ನೆರವು ಒದಗಿಸುತ್ತಿದೆ ಎಂದು ರಿಜ್ವಿ ಆರೋಪಿಸಿದ್ದಾರೆ.

Agencies 13 Jul 2019, 5:00 am
ಲಖನೌ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುವ ಸಲುವಾಗಿ ನಿರಂತರ ಖಟ್ಲೆಗಳನ್ನು ಹೂಡಿ ವಿಚಾರಣೆ ಮುಂದೂಡಲು ಸುನ್ನಿ ವಕ್ಫ್ ಮಂಡಳಿಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಮ್‌ ರಿಜ್ವಿ ಅವರು ಆರೋಪಿಸಿದ್ದಾರೆ. ಈ ಸಂಬಂಧ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.
Vijaya Karnataka Web pakistan sponsoring sunni waqf board to oppose ram temple construction waseem rizvi tells supreme court
ಮಂದಿರ ವಿರೋಧಕ್ಕೆ ಪಾಕ್‌ ಕುಮ್ಮಕ್ಕು!


''ದೇಶದಲ್ಲಿ ಎಲ್ಲರೂ ಸಹಬಾಳ್ವೆಯನ್ನು ಬಯಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ 'ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌' ಎನ್ನುವ ಮೂಲಕ ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಸೇರಿಸಿಕೊಂಡಿದ್ದಾರೆ. ಆದರೆ, ಭಾರತದಲ್ಲಿ ಸಹಬಾಳ್ವೆಯನ್ನು ಪಾಕಿಸ್ತಾನ ಸಹಿಸುವುದಿಲ್ಲ. ಹೀಗಾಗಿಯೇ ಸುನ್ನಿ ವಕ್ಫ್ ಮಂಡಳಿಗೆ ಆ ದೇಶವು ಹಣಕಾಸು ನೆರವು ಒದಗಿಸುತ್ತಿದೆ,'' ಎಂದು ರಿಜ್ವಿ ಆರೋಪಿಸಿದ್ದಾರೆ.

ಬಾಬರ್‌ ಮಸೀದಿ ನಿರ್ಮಿಸಿಲ್ಲ: ''ರಾಮ ಜನ್ಮಭೂಮಿ ಎಂದು ನಂಬಲಾದ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಬೇಕು ಮತ್ತು ಲಖನೌನಲ್ಲಿ ಮಸೀದಿ ನಿರ್ಮಿಸಬೇಕು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ್ದು ಬಾಬರ್‌ ಅಲ್ಲ. ಮಿರ್‌ ಬಕಿ ಮತ್ತು ಬಕಿ ತಷ್ಕಾಂಡಿ ಹೆಸರಿನಿಂದ ಕರೆಯಲಾಗುತ್ತಿದ್ದ ಶಿಯಾ ಮುಸ್ಲಿಂ ವ್ಯಕ್ತಿ ಮಸೀದಿಯನ್ನು ನಿರ್ಮಿಸಿದ್ದರು. ಅಯೋಧ್ಯೆಯಲ್ಲಿ ಬಾಬರ್‌ ಹೆಸರಿನ ಒಂದೇ ಒಂದು ಸ್ಥಳವೂ ಇಲ್ಲ. ಅಲ್ಲಿರುವ ಪ್ರತಿಯೊಂದಕ್ಕೂ ರಾಮನ ಹೆಸರೇ ಇದೆ. ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಯಾಗಳಾದ ನಮ್ಮೆಲ್ಲರ ಬೆಂಬಲವಿದೆ,'' ಎಂದು ರಿಜ್ವಿ ಹೇಳಿದ್ದಾರೆ.

''ಮುಸ್ಲಿಮರು ಮಸೀದಿ ನಿರ್ಮಾಣವಾಗಲೇಬೇಕೆಂದು ಬಯಸುವುದಾದರೆ, ಅದನ್ನು ಮೊದಲು ಹರಿಯಾಣದಲ್ಲಿ ನಿರ್ಮಿಸಬೇಕು. ಏಕೆಂದರೆ ಬಾಬರ್‌ ಮೊದಲು ಹೆಜ್ಜೆ ಇರಿಸಿದ್ದು ಆ ರಾಜ್ಯದಲ್ಲೇ,'' ಎಂದು ಅವರು ವಾದಿಸಿದ್ದಾರೆ.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ ವಿಶೇಷ ಸಮಿತಿಯನ್ನು ರಚಿಸಿದ್ದು, ಪ್ರಸ್ತುತ ಸಂಧಾನದ ಸ್ಥಿತಿಗತಿ ಏನೆಂದು ಜು.18ಕ್ಕೆ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಸಂಧಾನ ವಿಫಲವಾದರೆ ಜು.25ರಿಂದ ನಿತ್ಯ ಪ್ರಕರಣದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ.

ಮೂಲಭೂತವಾದಿಗಳಿಂದ ವಿರೋಧ
ಮೂಲಭೂತವಾದಿಗಳನ್ನು ಹೊರತುಪಡಿಸಿ ದೇಶದ ಶೇ.80ರಷ್ಟು ಮುಸ್ಲಿಮರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಯಸುತ್ತಿದ್ದಾರೆ ಎಂದು ರಾಮ ಜನ್ಮಭೂಮಿ ನ್ಯಾಸ್‌ ಸದಸ್ಯ ಹಾಗೂ ಮಾಜಿ ಬಿಜೆಪಿ ಸಂಸದ ರಾಮ್‌ ವಿಲಾಸ್‌ ವೇದಾಂತಿ ಶುಕ್ರವಾರ ಹೇಳಿದ್ದಾರೆ. ''ಈಗಾಗಲೇ ಶಿಯಾ ಮುಸ್ಲಿಂ ವಕ್ಫ್ ಮಂಡಳಿ ಮಂದಿರ ನಿರ್ಮಾಣಕ್ಕೆ ಬೆಂಬಲ ತೋರಿದೆ. ದೆಶದಲ್ಲಿ ಭ್ರಾತೃತ್ವ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಮುಸ್ಲಿಮರು ಮುಂದೆ ಬಂದು ರಾಮ ಜನ್ಮಭೂಮಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಬೇಕು. ಸನ್ನಿ ವಕ್ಫ್ ಮಂಡಳಿಯು ಪ್ರಕರಣವನ್ನು ವಾಪಸ್‌ ಪಡೆಯಬೇಕು. ಶೇ. 90ರಷ್ಟು ಹಿಂದೂಗಳನ್ನು ಹೊಂದಿರುವ ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನ್ಯಾಯಾಂಗ ಹೋರಾಟ ನಡೆಸುವ ಸ್ಥಿತಿ ಬಂದಿರುವುದು ದುರದೃಷ್ಟಕರ,'' ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ