ಆ್ಯಪ್ನಗರ

ಜಯಾ ವಿಚಾರಣೆ: ಕರ್ನಾಟಕಕ್ಕೆ 5 ಕೋಟಿ ವೆಚ್ಚ ಪಾವತಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ಕರ್ನಾಟಕ ಸರಕಾರ ವ್ಯಯ ಮಾಡಿದ ಸುಮಾರು 5 ಕೋಟಿ ರೂ...

ಏಜೆನ್ಸೀಸ್ 15 Feb 2017, 7:11 am

ಹೊಸದಿಲ್ಲಿ: ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ಕರ್ನಾಟಕ ಸರಕಾರ ವ್ಯಯ ಮಾಡಿದ ಸುಮಾರು 5 ಕೋಟಿ ರೂ.ಗಳನ್ನು ಪಾವತಿ ಮಾಡುವಂತೆ ಸುಪ್ರೀಂ ಕೋರ್ಟ್‌ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿದೆ. ಮಂಗಳವಾರ ಶಶಿಕಲಾಗೆ ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟು ಈ ರೀತಿ ಸೂಚನೆ ನೀಡಿತು.

Vijaya Karnataka Web pay karnataka 5 crores as expenditure says supreme court
ಜಯಾ ವಿಚಾರಣೆ: ಕರ್ನಾಟಕಕ್ಕೆ 5 ಕೋಟಿ ವೆಚ್ಚ ಪಾವತಿಸಲು ಸುಪ್ರೀಂ ಕೋರ್ಟ್ ನಿರ್ದೇಶನ


ವಿಚಾರಣೆಗೆ ತಗುಲುವ ಅಷ್ಟೂ ವೆಚ್ಚವನ್ನು ಕರ್ನಾಟಕ ಸರಕಾರ ಭರಿಸಬೇಕು ಎಂದು, ಪ್ರಕರಣವನ್ನು ವರ್ಗಾಯಿಸುವಾಗಲೇ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿತ್ತು. ಅದರಂತೆ ವಿಶೇಷ ನ್ಯಾಯಾಲಯ ಸ್ಥಾಪನೆ, ಸಿಬ್ಬಂದಿ ವೇತನ, ನಿರ್ವಹಣೆ, ಎಸ್‌ಪಿಪಿ ವೇತನ ಸೇರಿದಂತೆ ಎಲ್ಲವನ್ನೂ ರಾಜ್ಯ ಸರಕಾರ ಮಾಡಿದೆ.

8 ನಿಮಿಷದಲ್ಲಿ ತೀರ್ಪು ಪ್ರಕಟ

ದೇಶಾದ್ಯಂತ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಶಶಿಕಲಾ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಪ್ರಕಟಣೆ ಪ್ರಕ್ರಿಯೆಯು ಕೇವಲ 8 ನಿಮಿಷದಲ್ಲೇ ಮುಗಿದುಹೋಯಿತು.

ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಾದ ಜಸ್ಟಿಸ್‌ ಪಿ ಸಿ ಘೋಶ್‌ ಮತ್ತು ಜಸ್ಟಿಸ್‌ ಅಮಿತವ ರಾಯ್‌ ಅವರು, ಬೆಳಗ್ಗೆ 10.30ಕ್ಕೆ ಸರಿಯಾಗಿ, ವಕೀಲರು ಮತ್ತು ಪತ್ರಕರ್ತರಿಂದ ಕಿಕ್ಕಿರಿದು ತುಂಬಿದ್ದ ಕೋರ್ಟ್‌ ಹಾಲ್‌ ನಂ.6ಕ್ಕೆ ಆಗಮಿಸಿದರು.

ಕೋರ್ಟ್‌ ಸಿಬ್ಬಂದಿ ಸೀಲ್‌ ಮಾಡಲಾಗಿದ್ದ ತೀರ್ಪಿನ ಕಡತವನ್ನು ತೆರೆದ ನಂತರ, ಇಬ್ಬರೂ ನ್ಯಾಯಮೂರ್ತಿಗಳು ಕೆಲಹೊತ್ತು ಪರಸ್ಪರ ಚರ್ಚೆಯಲ್ಲಿ ಮಗ್ನರಾದರು.

ಪಿನ್‌ ಡ್ರಾಪ್‌ ಸೈಲೆನ್ಸ್‌
ನ್ಯಾಯಮೂರ್ತಿಗಳ ಮಾತು ಶುರುವಾಗುತ್ತಿದ್ದಂತೇ, ಕೋರ್ಟ್‌ ಹಾಲ್‌ನಲ್ಲಿ ಪಿನ್‌ ಡ್ರಾಪ್‌ ಸೈಲೆನ್ಸ್‌. ತೀರ್ಪು ಓದುವ ಮುನ್ನ ವಕೀಲರು ಮತ್ತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ನ್ಯಾ. ಘೋಶ್‌ ಅವರು ''ಇದು ಭಾರಿ ಸಂಖ್ಯೆ ಪುಟಗಳನ್ನು ಹೊಂದಿರುವ ಅತಿದೊಡ್ಡ ತೀರ್ಪು ಎಂಬುದು ನಿಮಗೆ ಅರ್ಥವಾಗಿರಬಹುದು. ಆದರೆ, ಅದರ ಭಾರವನ್ನು ನಾವೇ ಹೊತ್ತಿದ್ದೇವೆ,'' ಎಂದರು. ಕೂಡಲೇ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು ಬೆಳಗ್ಗೆ 10.40ರ ವೇಳೆಗೆ ಅದನ್ನು ಮುಗಿಸಿಬಿಟ್ಟರು.

ತೀರ್ಪು ಹೊರಬಿದ್ದ ಕೂಡಲೇ ಕೋರ್ಟ್‌ ಹಾಲ್‌ನಲ್ಲಿ ಇದ್ದಕ್ಕಿದ್ದಂತೆ ಗಲಿಬಿಲಿ ಶುರುವಾಯಿತು. ಮಾಧ್ಯಮ ಪ್ರತಿನಿಧಿಗಳು ಮತ್ತು ಕೆಲ ವಕೀಲರು ತೀರ್ಪಿನ ಬಗ್ಗೆ ವಿವರಿಸಲು ಹೊರಗೆ ಧಾವಿಸಿದರು. ಈ ಗದ್ದಲದ ನಡುವೆಯೇ, ಮಾತು ಮುಂದುವರಿಸಿದ ನ್ಯಾ. ರಾಯ್‌ ಅವರು ''ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಪಿಡುಗಿನ ಬಗ್ಗೆ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ,'' ಎಂದರು.

===

ತೀರ್ಪು ಐತಿಹಾಸಿಕ: ಡಿಎಂಕೆ

ಚೆನ್ನೈ: ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಅವರಿಗೆ ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.

''ಸುಮಾರು ಎರಡು ದಶಕಗಳ ಸುದೀರ್ಘ ಅವಧಿಯ ಬಳಿಕ ಕೊನೆಗೂ ನ್ಯಾಯ ಸಿಕ್ಕಿದೆ. ಇದು ಐತಿಹಾಸಿಕ ತೀರ್ಪು. ಯಾರೇ ಆದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತೀರ್ಪು ಎತ್ತಿ ತೋರಿದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯ. ಇತರ ಎಲ್ಲಾ ರಾಜಕಾರಣಿಗಳಿಗೆ ಇದೊಂದು ಪಾಠ,'' ಎಂದು ಸ್ಟಾಲಿನ್‌ ಹೇಳಿದ್ದಾರೆ.

ಇದೇ ವೇಳೆ ತಮಿಳುನಾಡಿನಲ್ಲಿ ಸುಸ್ಥಿರ ಸರಕಾರ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರಿಗೆ ಸ್ಟಾಲಿನ್‌ ಕರೆ ನೀಡಿದ್ದಾರೆ.

=====

ದೀಪಾ ಬೆಂಬಲಿಗರಿಂದ ಸಂಭ್ರಮಾಚರಣೆ

ಶಶಿಕಲಾ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುತ್ತಿದ್ದಂತೆಯೇ, ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್‌ ಅವರ ಪಾಳಯದಲ್ಲಿ ಸಂಭ್ರಮಾಚರಣೆ ಆರಂಭವಾಯಿತು. ದೀಪಾ ಅವರ ಬೆಂಬಲಿಗರ ವೇದಿಕೆಯಾದ 'ದೀಪಾ ಪೆರವೈ' ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷೋದ್ಘಾರ ಮಾಡಿದರು.

''ಈ ಶಿಕ್ಷೆಯು ದೇವರ ತೀರ್ಪು. ಪ್ರಜಾಪ್ರಭುತ್ವವನ್ನು ಬತ್ತಲೆ ಮಾಡಲು ಹೊರಟಿದ್ದ ಶಶಿಕಲಾ ಅವರ ಸಂಚು ಸುಪ್ರೀಂ ಕೋರ್ಟ್‌ ತೀರ್ಪಿನಿಂದ ನುಚ್ಚುನೂರಾಗಿದೆ,'' ಎಂದು ವೇದಿಕೆಯ ಪುದುಚೆರಿ ಘಟಕದ ಸಂಚಾಲಕ ಪಿ ಎಂ ಭಾಸ್ಕರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ