ಆ್ಯಪ್ನಗರ

ದೇಶದ ಮೊದಲ ಸ್ಮಾರ್ಟ್‌, ಹಸಿರು ಹೆದ್ದಾರಿಗೆ ಚಾಲನೆ

ಕೇವಲ 500 ದಿನಗಳ ದಾಖಲೆ ಸಮಯದಲ್ಲಿ ನಿರ್ಮಿಸಲಾಗಿರುವ 14 ಪಥಗಳ ದೇಶದ ಚೊಚ್ಚಲ ಸ್ಮಾರ್ಟ್‌ ಮತ್ತು ಹಸಿರು ಹೆದ್ದಾರಿಯನ್ನು ಪ್ರಧಾನಿ ಮೋದಿ ಭಾನುವಾರ ದೇಶಕ್ಕೆ ಅರ್ಪಿಸಿದರು.

Vijaya Karnataka 28 May 2018, 8:55 am
ಬಾಗ್ಪತ್‌: ಕೇವಲ 500 ದಿನಗಳ ದಾಖಲೆ ಸಮಯದಲ್ಲಿ ನಿರ್ಮಿಸಲಾಗಿರುವ 14 ಪಥಗಳ ದೇಶದ ಚೊಚ್ಚಲ ಸ್ಮಾರ್ಟ್‌ ಮತ್ತು ಹಸಿರು ಹೆದ್ದಾರಿಯನ್ನು ಪ್ರಧಾನಿ ಮೋದಿ ಭಾನುವಾರ ದೇಶಕ್ಕೆ ಅರ್ಪಿಸಿದರು.
Vijaya Karnataka Web Smart Road


ಮೀರತ್‌ನಿಂದ ದಿಲ್ಲಿಗೆ ಸಂಪರ್ಕ ಕಲ್ಪಿಸುವ ಈ ಈಸ್ಟರ್ನ್‌ ಪೆರಿಫೆರಲ್‌ ಎಕ್ಸ್‌ಪ್ರೆಸ್‌ ವೇಗೆ ಉತ್ತರ ಪ್ರದೇಶದ ಬಾಗ್ಪತ್‌ನಲ್ಲಿ ಚಾಲನೆ ನೀಡಿದ ಅವರು, ಸುಮಾರು 3 ಕಿ.ಮೀ. ತೆರೆದ ಜೀಪ್‌ನಲ್ಲಿ ರೋಡ್‌ ಶೋ ನಡೆಸಿದರು. ಬಳಿಕ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು, ಮೂಲ ಸೌಕರ್ಯ ಅಭಿವೃದ್ಧಿಗೆ ಸರಕಾರದ ಕೊಡುಗೆಗಳ ಬಗ್ಗೆ ವಿವರಿಸಿದರು.

''ಮೂಲಸೌಕರ್ಯವು ಎನ್‌ಡಿಎ ಸರಕಾರದ ಮೊದಲ ಆದ್ಯತೆಯಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 28,000 ಕಿ.ಮೀ. ರಸ್ತೆ ನಿರ್ಮಾಣಕ್ಕೆ 3 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದೆ,'' ಎಂದು ಮೋದಿ ಹೇಳಿದರು.

''ಹೆದ್ದಾರಿ, ರೈಲು ಮತ್ತು ವಿಮಾನಯಾನ ಸಂಪರ್ಕ ಅಭಿವೃದ್ಧಿಯತ್ತ ಸರಕಾರ ಹೆಚ್ಚಿನ ಗಮನ ನೀಡುತ್ತಿದೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ದಿನಕ್ಕೆ ಕೇವಲ 12 ಕಿ.ಮೀ ಹೆದ್ದಾರಿ ನಿರ್ಮಾಣವಾಗುತ್ತಿತ್ತು. ಈಗ ಅದು ದಿನಕ್ಕೆ 27 ಕಿ.ಮೀ.ಗೆ ತಲುಪಿದೆ. ಕಳೆದ ವರ್ಷ 10 ಕೋಟಿ ಜನರು ವಿಮಾನಯಾನ ಕೈಗೊಂಡಿದ್ದಾರೆ'' ಎಂದು ಮಾಹಿತಿ ನೀಡಿದರು.

ಕೃಷಿಕರಿಗೂ ಆದ್ಯತೆ:


''ದೇಶಾದ್ಯಂತ ಹೆದ್ದಾರಿ ಸಂಪರ್ಕ ವೃದ್ಧಿ ಉದ್ದೇಶದ 'ಭಾರತಮಾಲ' ಯೋಜನೆಗಾಗಿ 5 ಲಕ್ಷ ಕೋಟಿ ರೂ. ನೀಡಿದ್ದಲ್ಲದೆ, ಈ ಬಾರಿ ಬಜೆಟ್‌ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ 14 ಕೋಟಿ ರೂ. ನೀಡಲಾಗಿದೆ. ಕಬ್ಬು ಬೆಳೆಗಾರರ ಸಂಕಷ್ಟದ ಬಗ್ಗೆ ಸರಕಾರ ಕಳಕಳಿ ಹೊಂದಿದ್ದು, ಸೂಕ್ತ ಬೆಲೆಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ,'' ಎಂದರು.

ದಲಿತರ ಸಂರಕ್ಷಣೆ: ಸಾಮಾಜಿಕ ನ್ಯಾಯದ ಕುರಿತಾಗಿ ಮಾತನಾಡಿದ ಮೋದಿ, ''ದಲಿತರ ಹಕ್ಕುಗಳ ರಕ್ಷಣೆಗೆ ಸರಕಾರ ಬದ್ಧವಾಗಿದ್ದು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸಲಾಗಿದೆ,'' ಎಂದರು.

ಕಾಂಗ್ರೆಸ್‌ನಿಂದ ಮಹಾಮೋಸ: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮೋದಿ ಅವರು, ಕೈ ಪಾಳಯವು ಕಳೆದ 7 ದಶಕಗಳಿಂದ ದೇಶದ ಜನತೆಗೆ ಮೋಸ ಮಾಡಿದೆ ಎಂದು ಆರೋಪಿಸಿದರು. ಇವಿಎಂನಿಂದ ಹಿಡಿದು ಎಲ್ಲಾ ವಿಷಯಗಳಲ್ಲೂ ಜನರ ವಿಶ್ವಾಸಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದರು.

ಪ್ರತಿಪಕ್ಷಗಳು ರೈತರ ವಿಷಯದಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದು, ಅವರ ಮಾತುಗಳನ್ನು ನಂಬಬೇಡಿ ಎಂದು ಮನವಿ ಮಾಡಿದರು.

ರಸ್ತೆ ವಿಶೇಷವೇನು?


* ದೇಶದ ಮೊಟ್ಟ ಮೊದಲ ಸ್ಮಾರ್ಟ್‌ ಮತ್ತು ಗ್ರೀನ್‌ ಹೈವೇ

* ಸಿಸಿಟಿವಿ, ಓವರ್‌ ಸ್ಪೀಡ್‌ ನಿಗಾ ಸಾಧನ, ಎಚ್ಚರಿಕೆ ಸಾಧನಗಳು, ಫೈಬರ್‌ ಆಪ್ಟಿಕಲ್‌ ನೆಟ್‌ವರ್ಕ್‌ ಒಳಗೊಂಡಿದೆ.

* ಎಲೆಕ್ಟ್ರಾನಿಕ್‌ ಟೋಲ್‌ ಕಲೆಕ್ಷನ್‌ನಿಂದ ವಿಳಂಬಕ್ಕೆ ಬ್ರೇಕ್‌; ಕ್ರಮಿಸಿದ ದೂರಕ್ಕಷ್ಟೇ ಶುಲ್ಕ

* 100% ಸೌರಶಕ್ತಿ ವಿದ್ಯುತ್‌ ಬಳಕೆ, 4000 ಕಿಲೋವ್ಯಾಟ್‌ ಸಾಮರ್ಥ್ಯ‌ದ 8 ಸೋಲಾರ್‌ ಘಟಕಗಳಿಂದ ವಿದ್ಯುತ್‌ ಪೂರೈಕೆ

*ರಸ್ತೆ ಬದಿ ಶೌಚಾಲಯ, ಅಂಗಡಿ, ಹೋಟೆಲ್‌, ವಿಶ್ರಾಂತಿ ಸ್ಥಳಗಳು, ಪೆಟ್ರೋಲ್‌ ಪಂಪ್‌, ಗ್ಯಾರೇಜ್‌ಗಳ ಅಭಿವೃದ್ಧಿ

* ಮಳೆಕೊಯ್ಲು ವ್ಯವಸ್ಥೆ ಮತ್ತು ಲಂಬ ಉದ್ಯಾನವನಗಳ ಅಭಿವೃದ್ಧಿ

* ರಸ್ತೆಯ ಎರಡೂ ಬದಿ 2.5 ಮೀಟರ್‌ ಅಗಲದ ಸೈಕಲ್‌ ಟ್ರ್ಯಾಕ್‌

* 4 ದೊಡ್ಡ ಬ್ರಿಜ್‌ಗಳು, 46 ಸಣ್ಣ ಬ್ರಿಜ್‌ಗಳು, 3 ಮೇಲ್ಸೇತುವೆ, 221 ಅಂಡರ್‌ಪಾಸ್‌ಗಳನ್ನು ಒಳಗೊಂಡಿದೆ.


11,000 ಕೋಟಿ ರೂ.: ಹೆದ್ದಾರಿ ನಿರ್ಮಾಣ ವೆಚ್ಚ

2,00,000 ಹೊಸ ಹೆದ್ದಾರಿ ಬಳಸಿ, ದಿಲ್ಲಿ ಪ್ರವೇಶಿಸದೆಯೇ ನಿತ್ಯ ಬೈಪಾಸ್‌ನಲ್ಲಿ ಹಾದುಹೋಗುವ ವಾಹನಗಳ ಸಂಖ್ಯೆ

135 ಕಿ.ಮೀ.: ಹೆದ್ದಾರಿಯ ಒಟ್ಟ ಉದ್ದ. ಹೊಸ ಹೆದ್ದಾರಿಯಿಂದ ಹೊಸದಿಲ್ಲಿ-ಮೀರತ್‌ ನಡುವಿನ ಸಂಚಾರ ಅವಧಿ ಈಗಿರುವ ಎರಡೂವರೆ ಗಂಟೆಯಿಂದ ಕೇವಲ 40 ನಿಮಿಷಕ್ಕೆ ಇಳಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ