ಆ್ಯಪ್ನಗರ

ಉಗ್ರ ಪೋಷಕ ದೇಶಗಳು ಉತ್ತರದಾಯಿಗಳಾಗಿರಬೇಕು: ಪ್ರಧಾನಿ ಮೋದಿ

ಶಾಂಘಾಯ್ ಸಹಕಾರ ಸಂಘಟನೆ (ಎಸ್‌ಸಿಓ) ಶೃಂಗಸಭೆ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಭಯೋತ್ಪಾದನೆ ಪಿಡುಗಿನ ವಿರುದ್ಧ ಸಮರ ಸಾರಲು ಜಾಗತಿಕ ಸಮಾವೇಶದ ಅಗತ್ಯವಿದೆ ಎಂದು ಕರೆ ನೀಡಿದರು. ಸಹಕಾರ ವರ್ಧನೆ ಮತ್ತು ಭಯೋತ್ಪಾದನೆ ವಿರುದ್ಧ ಸಮರದ ಉದ್ದೇಶ ಮತ್ತು ಆದರ್ಶಗಳನ್ನು ಪಟ್ಟಿ ಮಾಡಿದ ಅವರು, ಎಸ್‌ಸಿಓ ಮತ್ತಷ್ಟು ಬಲಗೊಳ್ಳಬೇಕಾದರೆ ಈ ವಿಷಯಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

PTI 14 Jun 2019, 4:17 pm
ಬಿಷ್ಕೆಕ್: ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುವ, ನೆರವು ನೀಡುವ ಮತ್ತು ಆರ್ಥಿಕ ಬೆಂಬಲ ನೀಡುವ ದೇಶಗಳು ಉತ್ತರದಾಯಿಗಳಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಶಾಂಘಾಯ್ ಸಹಕಾರ ಸಂಘಟನೆ (ಎಸ್‌ಸಿಓ) ಶೃಂಗಸಭೆ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಭಯೋತ್ಪಾದನೆ ಪಿಡುಗಿನ ವಿರುದ್ಧ ಸಮರ ಸಾರಲು ಜಾಗತಿಕ ಸಮಾವೇಶದ ಅಗತ್ಯವಿದೆ ಎಂದು ಕರೆ ನೀಡಿದರು.

ಸಹಕಾರ ವರ್ಧನೆ ಮತ್ತು ಭಯೋತ್ಪಾದನೆ ವಿರುದ್ಧ ಸಮರದ ಉದ್ದೇಶ ಮತ್ತು ಆದರ್ಶಗಳನ್ನು ಪಟ್ಟಿ ಮಾಡಿದ ಅವರು, ಎಸ್‌ಸಿಓ ಮತ್ತಷ್ಟು ಬಲಗೊಳ್ಳಬೇಕಾದರೆ ಈ ವಿಷಯಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಭಯೋತ್ಪಾದನೆಮುಕ್ತ ಸಮಾಜದ ನಿರ್ಮಾಣವೇ ಭಾರತದ ದೃಢ ನಿಲುವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.

'ಭಾನುವಾರ ನಾನು ಶ್ರೀಲಂಕಾಗೆ ಭೇಟಿ ನೀಡಿದ ವೇಳೆ, ಇತ್ತೀಚೆಗೆ ಸರಣಿ ಭಯೋತ್ಪಾದಕ ದಾಳಿಗೆ ಗುರಿಯಾದ ಸೇಂಟ್ ಆಂಟನಿ ಚರ್ಚ್‌ಗೆ ಭೇಟಿ ನೀಡಿದ್ದೆ. ಅಮಾಯಕರ ರಕ್ತದೋಕುಳಿ ಹರಿಸಿದ ಭಯೋತ್ಪಾದಕರ ಕ್ರೌರ್ಯಕ್ಕೆ ಸಾಕ್ಷಿಯಾಗಿರುವ ಆ ಸ್ಥಳವನ್ನು ಸಂದರ್ಶಿಸಿದ್ದೆ' ಎಂದು ಮೋದಿ ಹೇಳಿದರು.

ಎಲ್ಲ ದೇಶಗಳು ತಮ್ಮ ಸಂಕುಚಿತ ಧೋರಣೆಗಳನ್ನು ಬಿಟ್ಟು ಭಯೋತ್ಪಾದನೆಯ ಪಿಡುಗಿನ ವಿರುದ್ಧ ಸಮರ ಹೂಡಲು ಒಂದಾಗಬೇಕು ಎಂದು ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಉಪಸ್ಥಿತಿಯಲ್ಲೇ ಪ್ರಧಾನಿ ಮೋದಿ ಸಾರಿದರು.

'ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುವ, ಸಹಾಯ ಮಾಡುವ ಮತ್ತು ಆರ್ಥಿಕ ಬೆಂಬಲ ನೀಡುವ ದೇಶಗಳು ತಕ್ಕ ಬೆಲೆ ತೆರಲೇಬೇಕು' ಎಂದು ಮೋದಿ ಪ್ರತಿಪಾದಿಸಿದರು.

ಎಸ್‌ಸಿಓ ಪ್ರಾದೇಶಿಕ ಭಯೋತ್ಪಾದನೆ ನಿಗ್ರಹ ದಳ (ಆರ್‌ಎಟಿಎಸ್‌)ವೊಂದನ್ನು ಎಸ್‌ಸಿಓ ಸದಸ್ಯ ರಾಷ್ಟ್ರಗಳು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

'ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಸಮಾಜಗಳನ್ನು ಧನಾತ್ಮಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತವೆ. ವಿಶೇಷವಾಗಿ ಯುವ ಮನಸ್ಸುಗಳನ್ನು ಭಯೋತ್ಪಾದನೆ ಮತ್ತು ಮೂಲಭೂತವಾದದ ಕಡೆಗೆ ಸೆಳೆಯುವ ಶಕ್ತಿಗಳಿಂದ ದೂರವಿರಿಸಲು ಅವು ಸಹಾಯ ಮಾಡುತ್ತವೆ' ಎಂದು ಪ್ರಧಾನಿ ಮೋದಿ ನುಡಿದರು.

ಶಾಂತಿಯುತ, ಸಂಘಟಿತ, ಸುರಕ್ಷಿತ ಮತ್ತು ಸಮೃದ್ಧ ಅಫ್ಘಾನಿಸ್ತಾನ ಶಾಂಘಾಯ್ ಸಹಕಾರ ಸಂಘಟನೆಯ ಸ್ಥಿರತೆ ಮತ್ತು ಸುಭದ್ರತೆಗೆ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ