ಆ್ಯಪ್ನಗರ

ಜಿಎಸ್‌ಟಿ: ಒಂದೇ ದೇಶ-ಒಂದೇ ತೆರಿಗೆಗೆ ಐತಿಹಾಸಿಕ ಚಾಲನೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ದೇಶ ಸಜ್ಜಾಗಿದೆ. ಭಾರತದ ಭವಿಷ್ಯದ ಪಯಣ ಉಜ್ವಲವಾಗಿರಲಿದೆ. ಇನ್ನು ಸ್ವಲ್ಪವೇ ಸಮಯದ ಬಳಿಕ ಅಭಿವೃದ್ಧಿಯ ಹೊಸ ಹಾದಿಯಲ್ಲಿ ದೇಶ ಮುನ್ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಟೈಮ್ಸ್ ಆಫ್ ಇಂಡಿಯಾ 1 Jul 2017, 12:26 am
ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ದೇಶ ಸಜ್ಜಾಗಿದೆ. ಭಾರತದ ಭವಿಷ್ಯದ ಪಯಣ ಉಜ್ವಲವಾಗಿರಲಿದೆ. ಇನ್ನು ಸ್ವಲ್ಪವೇ ಸಮಯದ ಬಳಿಕ ಅಭಿವೃದ್ಧಿಯ ಹೊಸ ಹಾದಿಯಲ್ಲಿ ದೇಶ ಮುನ್ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
Vijaya Karnataka Web pm narendra modi begins his gst address in parliaments central hall
ಜಿಎಸ್‌ಟಿ: ಒಂದೇ ದೇಶ-ಒಂದೇ ತೆರಿಗೆಗೆ ಐತಿಹಾಸಿಕ ಚಾಲನೆ


ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಗೆ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದ್ದು ಪ್ರಧಾನಿ ನರೇಂದ್ರಮೋದಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಿದರು.

ಸರಿಯಾಗಿ 11 ಗಂಟೆಗೆ ಆರಂಭವಾದ ವಿಶೇಷ ಮಧ್ಯರಾತ್ರಿ ಅಧಿವೇಶನ ರಾಷ್ಟ್ರಗೀತೆಯೊಂದಿಗೆ ಆರಂಭವಾಯಿತು.

ಮೊದಲು ವಿತ್ತಸಚಿವ ಅರುಣ್ ಜೇಟ್ಲಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಇನ್ನು ಮುಂದೆ ಬಡವರು ಮತ್ತು ದುರ್ಬಲ ವರ್ಗದವರ ಮೇಲೆ ಅನಗತ್ಯ ತೆರಿಗೆ ಹೊರೆ ಇರುವುದಿಲ್ಲ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನುಡಿದರು. ಎಲ್ಲ ತೆರಿಗೆಗಳನ್ನೂ ಒಂದೇ ತೆರಿಗೆ ಅಡಿ ತರಲಾಗಿದೆ ಎಂದು ಜೇಟ್ಲಿ ತಿಳಿಸಿದರು.

ಪ್ರಧಾನಿ ಭಾಷಣದ ಮುಖ್ಯಾಂಶಗಳು:

ಇದು (ಸೆಂಟ್ರಲ್‌ ಹಾಲ್) ನಮ್ಮ ದೇಶದ ಗಣ್ಯ ನಾಯಕರು ಅಲಂಕರಿಸಿದ ಜಾಗ. ಪವಿತ್ರ ಸ್ಥಳ. ಇದು ಆಗಸ್ಟ್‌ 14ರ ಮಧ್ಯರಾತ್ರಿ ದೇಶದ ಸ್ವಾತಂತ್ರ್ಯ ಘೋಷಣೆಯಾದ ಸ್ಥಳ. ಇಂದು ಹಲವು ವರ್ಷಗಳ ಬಳಿಕ ಮತ್ತೆ ಆರ್ಥಿಕ ಸುಧಾರಣೆಯ ಮಹಾಪರ್ವದ ಘೋಷಣೆಗೆ ಸಾಕ್ಷಿಯಾಗುತ್ತಿದೆ ಎಂದು ಪ್ರಧಾನಿ ನುಡಿದರು.

ದೇಶದ ಅತ್ಯುತ್ತಮ ಮೇಧಾವಿಗಳು ಈ ತೆರಿಗೆ ವ್ಯವಸ್ಥೆಯ ಹಿಂದೆ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ನುಡಿದರು.

ದೇಶದ ಒಕ್ಕೂಟ ವ್ಯವಸ್ಥೆಗೆ ಜಿಎಸ್‌ಟಿ ಅತ್ಯುತ್ತಮ ಉದಾಹರಣೆ ಎಂದ ಪ್ರಧಾನಿ.

ಜಿಎಸ್‌ಟಿ ಒಂದು ಸರಕಾರದ ಸಾಧನೆಯಲ್ಲ. ಇದು ಎಲ್ಲರ ಸಂಘಟಿತ ಪ್ರಯತ್ನದ ಫಲ.

ಗಂಗಾನಗರದಿಂದ ಇಟಾನಗರದ ವರೆಗೆ, ಲೇಹ್‌ನಿಂದ ಲಕ್ಷದ್ವೀಪದ ವರೆಗೆ ಒಂದು ದೇಶ-ಒಂದು ತೆರಿಗೆ ಇರಲಿದೆ.

ಸ್ವಾತಂತ್ರ್ಯದ ಬಳಿಕ ಸರ್ದಾರ್‌ ಪಟೇಲ್‌ ದೇಶವನ್ನು ಒಗ್ಗೂಡಿಸಿದಂತೆ ಜಿಎಸ್‌ಟಿ ಕೂಡ ಒಗ್ಗೂಡಿಸಿದೆ.

ಅಭಿವೃದ್ಧಿಯ ಹಾದಿಯಲ್ಲಿ ಇದ್ದ ನಾನಾ ತೊಡಕುಗಳು ಇದರಿಂದ ನಿವಾರಣೆಯಾಗಿವೆ.

ಜಿಎಸ್‌ಟಿ ಭ್ರಷ್ಟಾಚಾರವನ್ನು ತೊಡೆದುಹಾಕಿ ಪ್ರಾಮಾಣಿಕರಿಗೆ ಉತ್ತಮ ಅವಕಾಶಗಳನ್ನು ಒದಗಿಸಲಿದೆ. ಉತ್ತಮ ಆಡಳಿತಕ್ಕೂ ಇದು ಒಳ್ಳೆಯ ಅವಕಾಶ ಒದಗಿಸಲಿದೆ.

ನಾನಾ ಬಗೆಯ ತೆರಿಗೆಗಳು ವಿದೇಶಿ ಹೂಡಿಕೆದಾರರಿಗೆ ಗೊಂದಲ ಹುಟ್ಟಿಸುತ್ತಿದ್ದವು. ಈಗ ನಾವು ಅವುಗಳನ್ನೆಲ್ಲ ತೊಡೆದುಹಾಕಿದ್ದೇವೆ.

ಸ್ವಾತಂತ್ರ್ಯದ 70 ವರ್ಷಗಳ ಬಳಿಕವೂ ದೇಶದಲ್ಲಿ ಬಹಳ ಸಂಖ್ಯೆಯ ಬಡವರಿಗೆ ಸೌಲಭ್ಯಗಳು ತಲುಪಿಲ್ಲ. ಜಿಎಸ್‌ಟಿ ಈ ದಿಕ್ಕಿನಲ್ಲಿ ನೆರವಾಗಲಿದೆ.

ಇನ್ನು ಕಚ್ಚಾಬಿಲ್‌ ಇರುವುದಿಲ್ಲ, ನಾಳೆಯಿಂದ ಪಕ್ಕಾ ಬಿಲ್‌ ಮಾತ್ರ ಇರುತ್ತದೆ.

ನಮ್ಮ ಅರ್ಥವ್ಯವಸ್ಥೆಯಲ್ಲಿ ಹಿಂದೆ ಇದ್ದ ಅಸಮತೋಲನವನ್ನು ಕಡಿಮೆ ಮಾಡುವಲ್ಲಿ ಜಿಎಸ್‌ಟಿ ವೇಗವರ್ಧಕವಾಗಿ ಕೆಲಸ ಮಾಡಲಿದೆ.

ನವಭಾರತದ (ನ್ಯೂ ಇಂಡಿಯಾ) ಕನಸು ಸಾಕಾರದಲ್ಲಿ ಜಿಎಸ್‌ಟಿ ಮಹತ್ವದ ಪಾತ್ರ ವಹಿಸಲಿದೆ.

ಜಿಎಸ್‌ಟಿ ಎಂಬುದು ಕೇವಲ ತೆರಿಗೆ ಸುಧಾರಣೆಯಲ್ಲ. ಇದು ಆರ್ಥಿಕ ಸುಧಾರಣೆ ಮಾತ್ರವಲ್ಲ, ಸಾಮಾಜಿಕ ಸುಧಾರಣೆಯೂ ಹೌದು.

ಜಿಎಸ್‌ಟಿ ಎಂದರೆ 'ಗುಡ್‌ ಅಂಡ್‌ ಸಿಂಪಲ್ ಟ್ಯಾಕ್ಸ್‌' ಎಂದು ಬಣ್ಣಿಸಿದ ಮೋದಿ.

ಜಿಎಸ್‌ಟಿ ಉದ್ಯಮವನ್ನು ಸುಲಭಗೊಳಿಸುವುದಷ್ಟೇ ಅಲ್ಲ, ಉದ್ಯಮದ ವಿಧಾನವನ್ನೂ ಸುಲಭಗೊಳಿಸಲಿದೆ.

ಜಿಎಸ್‌ಟಿ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ:

ಜಿಎಸ್‍ಟಿ ಬಗ್ಗೆ ಅನೇಕ ಗೊಂದಲಗಳಿದ್ದವು. ಆದರೆ ಕಾಲ ಸರಿಯುತ್ತಿದ್ದಂತೆ ಇದರ ಬಗ್ಗೆ ನಿಮಗೇ ಭರವಸೆ ಬರುತ್ತದೆ. ಈ ಬಗ್ಗೆ ನನಗಂತೂ ವೈಯಕ್ತಿಕವಾಗಿ ತೃಪ್ತಿ ಇದೆ. ಹಣಕಾಸು ಸಚಿವನಾಗಿಯೂ ನನಗೆ ಅನುಭವ ಇದೆ, ನಾನು GST ಯ ಸಂವಿಧಾನಾತ್ಮಕ ತಿದ್ದುಪಡಿಯನ್ನು ತರುವಲ್ಲಿ ಹಾಗೂ ಅದನ್ನು ಜಾರಿಗೊಳಿಸುವ ಪ್ರಯಾಣದಲ್ಲಿ ಭಾಗಿಯಾಗಿದ್ದೆ ಎಂದಿದ್ದಾರೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ