ಆ್ಯಪ್ನಗರ

ಪಿಎಂಸಿ ಬ್ಯಾಂಕ್ ಕರ್ಮಕಾಂಡ: 6,500 ಕೋಟಿ ಹಗರಣದ ಕಿಂಗ್‌ಪಿನ್ ಬಂಧನ!

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಹಗರಣ ಇನ್ನೂ ಹಸಿಯಾಗಿರುವಾಗಲೇ, ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣದ ಸುಳಿಯಲ್ಲಿ ತಗಲಾಕಿಕೊಂಡಿದೆ. ಹೀಗಾಗಿ, ಪಿಎಂಸಿ ಬ್ಯಾಂಕ್‌ನ ಗ್ರಾಹಕರಿಗೆ ತಮ್ಮ ಖಾತೆಯಿಂದ 1 ಸಾವಿರ ರೂ.ಗಿಂತಾ ಹೆಚ್ಚು ಹಣ ತೆಗೆಯದಂತೆ ನಿರ್ಬಂಧ ಹೇರಲಾಗಿದೆ. ಹಗರಣದ ಕಿಂಗ್ ಪಿನ್, 6500 ಕೋಟಿ ರೂ. ಡೀಲಿಂಗ್‌ ರಾಜನನ್ನು ಬಂಧಿಸಿದೆ.

Vijaya Karnataka Web 4 Oct 2019, 8:38 pm
ಮುಂಬಯಿ: ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಜಾಯ್ ಥಾಮಸ್ ಎಂಬಾತನನ್ನು ಬಂಧಿಸಲಾಗಿದೆ. ಜಾಯ್ ಥಾಮಸ್ ವಿರುದ್ಧದ 6,500 ಕೋಟಿ ರೂ. ಹಗರಣದ ಆರೋಪ ಕೇಳಿ ಬಂದ ಕಾರಣ, ಈಗಾಗಲೇ ಅಮಾನತ್ತು ಮಾಡಲಾಗಿತ್ತು. ಇದೀಗ ಬೃಹತ್ ಹಗರಣಕ್ಕೆ ಸಾಕ್ಷ್ಯಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ, ಜಾಯ್ ಥಾಮಸ್ ಬಂಧನವನ್ನು ಮುಂಬಯಿಯ ಆರ್ಥಿಕ ಅಪರಾಧಗಳ ವಿಭಾಗ ಖಚಿತಪಡಿಸಿದೆ.
Vijaya Karnataka Web pmc bank


ಗೃಹ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿಗಮಕ್ಕೆ ಪಿಎಂಸಿ ಬ್ಯಾಂಕ್‌ ಸಾಲ ನೀಡಿತ್ತು. ಈ ನಿಗಮದ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ಸಾಗಾಟ ಪ್ರಕರಣ ದಾಖಲಿಸಿತ್ತು. ಇದೇ ನಿಗಮದ ಅಧಿಕಾರಿಗಳು ಪಿಎಂಸಿ ಬ್ಯಾಂಕ್‌ನ ಮಾಜಿ ಸದಸ್ಯರೂ ಆಗಿದ್ದರು. ಹೀಗಾಗಿ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

6,500 ಕೋಟಿ ರೂ. ಹಗರಣ ಸಂಬಂಧ ಮುಂಬೈನ 6 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಗೃಹ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿಗಮದ ಕೆಲವು ಅಧಿಕಾರಿಗಳು ಕಳೆದ ಅಕ್ಟೋಬರ್ 9 ರಿಂದಲೇ ಪೊಲೀಸರ ಅತಿಥಿಗಳಾಗಿದ್ದಾರೆ.

ಇದೀಗ ದಿವಾಳಿಯಾಗಿರುವ ಗೃಹ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿಗಮಕ್ಕೆ ಪಿಎಂಸಿ ಬ್ಯಾಂಕ್ ತನ್ನಲ್ಲಿದ್ದ ಶೇಕಡಾ 75ರಷ್ಟು ಹಣವನ್ನು ಸಾಲವಾಗಿ ನೀಡಿದೆ. ಪಿಎಂಸಿ ಬ್ಯಾಂಕ್‌ನಿಂದ ಬಂದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಲು ಗೃಹ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿಗಮದ ಸಿಬ್ಬಂದಿ ಬರೋಬ್ಬರಿ 21 ಸಾವಿರ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ! ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ಈ ನಿಗಮ, ಪಿಎಂಸಿ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ಈಗಾಗಲೇ ಹಲವು ಬ್ಯಾಂಕ್‌ಗಳಲ್ಲಿ ಬಾಕಿ ಉಳಿಸಿಕೊಂಡಿರುವ ಸಾಲದ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಪಿಎಂಸಿ ಬ್ಯಾಂಕ್ ಕೂಡಾ ತನಗೆ ಈ ವಿಚಾರ ಗೊತ್ತಿದ್ದರೂ ಮುಚ್ಚಿಟ್ಟಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕೂಡಾ ಪಿಎಂಸಿ ಬ್ಯಾಂಕ್ ಸುಳ್ಳು ಹೇಳಿದೆ. ಕಳೆದ 10 ವರ್ಷಗಳಿಂದ ಸುಳ್ಳು ವರದಿ ನೀಡುತ್ತಾ ಬಂದಿದೆ. ಪಿಎಂಸಿ ಬ್ಯಾಂಕ್‌ ಹಗರಣದ ಪರಿಣಾಮ, ದೇಶದ ಬ್ಯಾಂಕಿಂಗ್ ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.

ತಾನೂ ಸತ್ತಳು, ಜೊತೆಗೆ ವೃದ್ಧನ ಜೀವವನ್ನೂ ತೆಗೆದಳು!: ಗುಜರಾತ್‌ನಲ್ಲೊಂದು ಡಬಲ್ ಡೆತ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ