ಆ್ಯಪ್ನಗರ

ಆಕೆಯ ಬದುಕನ್ನು ನರಕವಾಗಿಸಿತು ಆ ಕರಾಳ ರಾತ್ರಿ !

ಹದಿ ವಯಸ್ಸಿನ ಆಕೆಯ ಬದುಕಲ್ಲಿ ದುರಂತವೇ ನಡೆದು ಹೋಗಿದೆ.

TIMESOFINDIA.COM 13 Aug 2019, 2:33 pm
ಜೈಪುರ್: ಆಕೆಗಿನ್ನು 19 ವರ್ಷ ವಯಸ್ಸು, ಯುವಕನೊಬ್ಬನ ಜತೆ ಪ್ರೇಮ ಸಂಬಂಧದಲ್ಲಿ 2 ತಿಂಗಳ ಗರ್ಭಿಣಿಯಾಗಿದ್ದಳು. ಸದ್ಯದಲ್ಲೇ ಹೊಸ ಜೀವನ ಪ್ರಾರಂಭಿಸುವ ಹೊಂಗನಸಿನಲ್ಲಿ ತೇಲಾಡುತ್ತಿದ್ದ ಆಕೆಯ ಬದುಕು ಏಕಾಏಕಿ ನರಕವಾಗಿಬಿಟ್ಟಿದೆ. ಅಷ್ಟಕ್ಕೂ ನಡೆದಿದ್ದೇನು?
Vijaya Karnataka Web Gang Rape


  • ಆಕೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದರು.
  • ಹೊಟ್ಟೆಯಲ್ಲಿದ್ದ ಭ್ರೂಣ ಸತ್ತು ಹೋಯಿತು.
  • ಆಕೆಯ ಮೇಲೆ ಅತ್ಯಾಚಾರವಾಗಿದ್ದಕ್ಕೆ, ರಕ್ಷಿಸಲು ತಾನು ಸೋತಿದ್ದಕ್ಕೆ ಆಘಾತಗೊಂಡ ಪ್ರೇಮಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು, ಮತ್ತೀಗ ಆಕೆಗೆ ಬದುಕೆಲ್ಲ ಕತ್ತಲಾಗಿ ಕಾಣುತ್ತಿದೆ. ಹೊಟ್ಟೆಯಲ್ಲಿದ್ದ ಮಗು ಧರೆಗಿಳಿಯುವ ಮುನ್ನವೇ ಸಾವು ಕಂಡಿದೆ. ನಾನಿದ್ದೇನೆ, ಎಂದು ಸಾಂತ್ವನ ಹೇಳಬೇಕಾದ ಪ್ರೇಮಿ ತನ್ನ ಜೀವನವನ್ನೇ ಮುಗಿಸಿದ್ದಾನೆ.

ಜುಲೈ 13 ಮತ್ತು 14ರ ನಡುವಿನ ರಾತ್ರಿ ರಾಜಸ್ಥಾನದ ಬನ್ಸಾರಾ ಜಿಲ್ಲೆಯಲ್ಲಿ ಈ ಕರಾಳ ಘಟನೆ ನಡೆದಿದ್ದು, ಸೋಮವಾರ ಆರೋಪಿಗಳನ್ನು ಬಂಧಿಸಿದ ಬಳಿಕ ದುರಂತ ಕಥಾನಕ ಬೆಳಕಿಗೆ ಬಂದಿದೆ.

ಪ್ರೇಮಿಯನ್ನು ರಕ್ಷಿಸಲಾಗದ ನೋವಲ್ಲಿ ಆತ್ಮಹತ್ಯೆ

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆ ರಾತ್ರಿ ಯುವತಿ ತನ್ನ ಪ್ರೇಮಿಯ ಜತೆ ಬೈಕ್‌ನಲ್ಲಿ ಹೋಗುತ್ತಿದ್ದು, ಮೂವರು ಆರೋಪಿಗಳು ( ಸುನಿಲ್, ವಿಕಾಸ್, ಜಿತೇಂದ್ರ)
ಅವರನ್ನು ಅಡ್ಡಗಟ್ಟಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಅವರು ಆಕೆಯ ಪ್ರೇಮಿಯ ಮೇಲೆ ತಲ್ವಾರ್ ಮತ್ತು ಕಬ್ಬಿಣದ ರಾಡ್‌ನಿಂದ ದಾಳಿ ನಡೆಸಿ , ಮೊಬೈಲ್ ಕಿತ್ತುಕೊಂಡು ಅಲ್ಲಿಂದ ಪಲಾಯನ ಮಾಡುವಂತೆ ಮಾಡಿದ್ದಾರೆ. ಊರಿಗೆ ಮರಳಿದ ಆತ ಆಕೆಯನ್ನು ರಕ್ಷಿಸಲಾಗದ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಳೆದೊಯ್ದು ಗ್ಯಾಂಗ್ ರೇಪ್

ಆತ ಹೋದ ಬಳಿಕ ಯುವತಿಯನ್ನು ಎಳೆದೊಯ್ದ ಮೂವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆರೋಪಿಗಳಲ್ಲೊಬ್ಬನ ಊರಿಗೆ ಕರೆದೊಯ್ದು ಅಲ್ಲಿ ಕೂಡ ಮತ್ತಿಬ್ಬರು ಸ್ನೇಹಿತರನ್ನು ( ನರೇಶ್, ವಿಜಯ್) ಸೇರಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಜುಲೈ 14ರ ನಸುಕಿನ ಜಾವ ಆಕೆಯನ್ನು ರಸ್ತೆಯಲ್ಲಿ ಎಸದು ಆರೋಪಿಗಳು ಪರಾರಿಯಾಗಿದ್ದಾರೆ. ಆಕೆ ಈ ವಿಷಯವನ್ನು ಯಾರಲ್ಲಿಯೂ ಹೇಳದ ಹಿನ್ನೆಲೆಯಲ್ಲಿ ಕೃತ್ಯ ಬೆಳಕಿಗೆ ಬರಲೇ ಇಲ್ಲ.

ಬೆಳಕಿಗೆ ಬಂದಿದ್ದು ಹೇಗೆ?

ಪೊಲೀಸರು ಆಕೆಯ ಪ್ರಿಯಕರನ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದಾಗ ನಡೆದ ಘೋರ ಕೃತ್ಯ ಬೆಳಕಿಗೆ ಬಂದಿದೆ. ಯುವಕನನ್ನು ಥಳಿಸಿ ಆತನಿಂದ ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳಲ್ಲಿ ಒಬ್ಬನಾದ ಜಿತೇಂದ್ರ , ಆ ಮೊಬೈಲ್‌ನ್ನು ಪತ್ನಿಗೆ ಕೊಟ್ಟಿದ್ದ. ಅದು ಸ್ವಿಚ್ಡ್ ಆನ್ ಆದಾಗ ಲೊಕೇಶನ್ ಹುಡುಕಿಕೊಂಡು ಹೋದ ಪೊಲೀಸರು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ. ಜುಲೈ 13ರಂದು ಅತ್ಯಾಚಾರ ಪೀಡಿತೆ ಮೊಬೈಲ್‌ನಿಂದ ಈ ನಂಬರ್‌ಗೆ ಕರೆ ಬಂದಿದ್ದು ಬೆಳಕಿಗೆ ಬಂದಿದೆ.

ಪೊಲೀಸರು ಹುಡುಕಿಕೊಂಡು ಹೋದಾಗ, ಆಕೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಳು. ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದನ್ನು ಆಕೆ ಯಾರಲ್ಲಿಯೂ ಹೇಳಿರಲಿಲ್ಲ. ಪೊಲೀಸರ ವಿಚಾರಣೆ ವೇಳೆ ಎಲ್ಲವನ್ನು ಬಾಯ್ಬಿಟ್ಟ ಆಕೆ ದೂರು ದಾಖಲಿಸಲು ಒಪ್ಪಿಕೊಂಡಿದ್ದಾಳೆ.

ಆರೋಪಿಗಳ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ, ಅಪಹರಣ, ಆತ್ಮಹತ್ಯೆಗೆ ಕುಮ್ಮಕ್ಕು ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ