ಆ್ಯಪ್ನಗರ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕಕ್ಕೆ ಭಾರತೀಯ ಪತ್ರಿಕಾ ಮಂಡಳಿ ಅಸಮಾಧಾನ

ರಿಪೋರ್ಟರ್ಸ್‌ ವಿತೌಟ್‌ ಬಾರ್ಡರ್ಸ್‌ (ಆರ್‌ಡಬ್ಲ್ಯೂಎಫ್‌) ಬಿಡುಗಡೆ ಮಾಡಿರುವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ದೇಶಗಳಿಗೆ ರ‍್ಯಾಂಕಿಂಗ್‌ ನೀಡಲು ಅನುಸರಿಸುವ ಕ್ರಮಗಳ ಬಗ್ಗೆ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಸಿಐ) ಅಸಮಾಧಾನ ವ್ಯಕ್ತಪಡಿಸಿದೆ.

Vijaya Karnataka 7 May 2018, 10:00 am
ಹೊಸದಿಲ್ಲಿ: ರಿಪೋರ್ಟರ್ಸ್‌ ವಿತೌಟ್‌ ಬಾರ್ಡರ್ಸ್‌ (ಆರ್‌ಡಬ್ಲ್ಯೂಎಫ್‌) ಬಿಡುಗಡೆ ಮಾಡಿರುವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ದೇಶಗಳಿಗೆ ರ‍್ಯಾಂಕಿಂಗ್‌ ನೀಡಲು ಅನುಸರಿಸುವ ಕ್ರಮಗಳ ಬಗ್ಗೆ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಸಿಐ) ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ಏಪ್ರಿಲ್‌ 25ರಂದು ಪ್ರಕಟಗೊಂಡಿರುವ ಸೂಚ್ಯಂಕ ಪಟ್ಟಿಯನ್ನು ನೋಡಿದರೆ ಇಲ್ಲಿ ಕೇವಲ ಅಭಿಪ್ರಾಯ ಇಲ್ಲವೇ ಊಹೆಗೆ ಮಹತ್ವಕೊಡಲಾಗಿದೆ. ನಿಖರವಾದ ಮಾಹಿತಿ ಮತ್ತು ಅಂಕಿ-ಅಂಶಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಪಿಸಿಐ ಹೇಳಿದೆ.
Vijaya Karnataka Web Freedom of the press


ವಿಶ್ವದ 180 ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ಆರ್‌ಡಬ್ಲ್ಯೂಎಫ್‌ ಪ್ರತಿ ವರ್ಷ ಸೂಚ್ಯಂಕ ಪಟ್ಟಿ ಪ್ರಕಟಿಸುತ್ತದೆ. ಅದರಂತೆ ಏ. 25ರಂದು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಭಾರತದ ಸ್ಥಾನ 138ಕ್ಕೆ ಇಳಿದಿದೆ (ಕಳೆದ ವರ್ಷದ ಸೂಚ್ಯಂಕದಲ್ಲಿ 136ನೇ ಸ್ಥಾನ ಪಡೆದಿತ್ತು). ಮಾಧ್ಯಮ ಸ್ವಾತಂತ್ರ್ಯ, ಮುಕ್ತ ವಾತಾವರಣ ಮತ್ತು ಸ್ವಯಂ ಸೆನ್ಸಾರ್‌ಶಿಪ್‌, ಕಾನೂನಿನ ಚೌಕಟ್ಟು, ಪಾರದರ್ಶಕತೆ, ಮಾಧ್ಯಮ ಕ್ಷೇತ್ರದಲ್ಲಿನ ಮೂಲಸೌಕರ್ಯ ಇತ್ಯಾದಿ ಮಾನದಂಡಗಳನ್ನು ಇಟ್ಟುಕೊಂಡು ದೇಶಗಳಿಗೆ ರ‍್ಯಾಂಕಿಂಗ್‌ ಪಟ್ಟಿ ನಿಗದಿಗೊಳಿಸಲಾಗುತ್ತದೆ.

ಪತ್ರಕತೆ ಗೌರಿ ಲಂಕೇಶ್‌ ಹತ್ಯೆ ಸೇರಿದಂತೆ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ದೈಹಿಕ ದಾಳಿ ಮತ್ತು ದೌರ್ಜನ್ಯಗಳ ಹಿನ್ನೆಲೆಯಲ್ಲಿ ಅದು ಸೂಚ್ಯಂಕದಲ್ಲಿ ಹಿಂದೆ ಉಳಿಯಲು ಕಾರಣ ಎಂದು ಆರ್‌ಡಬ್ಲ್ಯೂಎಫ್‌ ಹೇಳಿತ್ತು. ಅಲ್ಲದೇ ಹೀಗೆ ಮುಂದುವರಿದಲ್ಲಿ ಇನ್ನಷ್ಟು ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿತ್ತು.

ಆದರೆ ಪಿಸಿಐ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್‌ ಅವರು, ''ಈ ಪಟ್ಟಿಯಲ್ಲಿ ನಿಖರವಾದ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಕಡೆಗಣಿಸಲಾಗಿದ್ದು, ಕೇವಲ ಅಭಿಪ್ರಾಯ/ಗ್ರಹಿಕೆಯ ಆಧಾರಕ್ಕೆ ಮಾನ್ಯತೆ ನೀಡಲಾಗಿದೆ. ನಾವಿದನ್ನು ತಿರಸ್ಕರಿಸುತ್ತೇವೆ,'' ಎಂದು ಹೇಳಿದ್ದಾರೆ. ಸೂಚ್ಯಂಕವನ್ನು ಯಾವ ನೆಲೆಗಟ್ಟಿನಲ್ಲಿ ಮತ್ತು ಹೇಗೆ ಸಿದ್ಧಪಡಿಸುತ್ತೀರಿ ಎಂಬ ಬಗ್ಗೆ ಸ್ಪಷ್ಟತೆ ಕೋರಿ ಪಿಸಿಐ 2015ರಿಂದಲೂ ಆರ್‌ಡಬ್ಲ್ಯೂ ಎಫ್‌ಗೆ ಪತ್ರ ಬರೆಯುತ್ತಿದ್ದರೂ ಅದರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ