ಆ್ಯಪ್ನಗರ

ರಾಜಸ್ಥಾನ ಬಿಜೆಪಿಯಲ್ಲಿ ಭಿನ್ನಮತ; ಸಚಿವ ರಾಜೀನಾಮೆ, 21 ಶಾಸಕರಿಂದ ಪಕ್ಷ ತೊರೆಯುವ ಬೆದರಿಕೆ

ರಾಜಸ್ಥಾನ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ.

TIMESOFINDIA.COM 13 Nov 2018, 3:20 pm
[This story originally published in Times Of India on Nov 13, 2018]
Vijaya Karnataka Web rajasthan minister surendra goyal


ಜೈಪುರ: ಡಿಸೆಂಬರ್ 7 ರಂದು ನಡೆಯಲಿರುವ ರಾಜಸ್ಥಾನ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ತನ್ನ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ರಾಜ್ಯದ ಹಲವೆಡೆ ನಿನ್ನೆಯಿಂದ ಪ್ರತಿಭಟನೆ ಜೋರಾಗಿದೆ. ಪಕ್ಷದಿಂದ ಟಿಕೆಟ್ ಸಿಗದ 21 ಶಾಸಕರು ಸ್ವತಂತ್ರ ಅಭ್ಯರ್ಥಿಗಳಾಗಿ ನಿಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಟಿಕೆಟ್ ಸಿಗದ ವಸುಂಧರಾ ರಾಜೇ ಸಂಪುಟದ ಸಚಿವ ಹಾಗೂ ಐದು ಬಾರಿ ಶಾಸಕರಾಗಿದ್ದ ಸುರೇಂದ್ರ ಗೋಯಲ್‌ಗೆ ಟಿಕೆಟ್ ಸಿಗದ ಹಿನ್ನೆಲೆ ಪಕ್ಷವನ್ನೇ ತೊರೆದಿದ್ದು, ಅವರೂ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಇನ್ನು, ಮತ್ತೊಬ್ಬ ಸಚಿವ ನಂದಲಾಲ್‌ ಮೀನಾ ಬದಲಿಗೆ ಅವರ ಮಗನಿಗೆ ಟಿಕೆಟ್ ನೀಡಲಾಗಿದೆ. ಅಲ್ಲದೆ, ಕಲಿಚರಣ್ ಸರಫ್‌, ರಾಜ್‌ಪಾಲ್‌ ಸಿಂಗ್ ಶೇಖಾವತ್ ಹಾಗೂ ಯೂನುಸ್ ಖಾನ್‌ ಸೇರಿ ಮೂವರು ಸಚಿವರು ಇನ್ನೊಂದು ಹಂತದ ಟಿಕೆಟ್ ಬಿಡುಗಡೆ ಮಾಡುವವರೆಗೆ ಕಾಯಬೇಕಾಗುತ್ತದೆ. ಸಚಿವ ಶೇಖಾವತ್‌ಗೆ ಕ್ಷೇತ್ರ ಬದಲಿಸುವಂತೆ ಸಿಎಂ ರಾಜೇ ಸೂಚನೆ ನೀಡಿದ್ದರು ಎನ್ನಲಾಗಿದ್ದು, ಆದರೆ ಶೇಖಾವತ್ ಹಿಂದೇಟು ಹಾಕುತ್ತಿದ್ದಾರೆ.

ಸುರೇಂದ್ರ ಗೋಯಲ್‌ಗೆ ಟಿಕೆಟ್ ಸಿಗದಿದ್ದಕ್ಕೆ ಅವರ ಬೆಂಬಲಿಗರು ಜೈಪುರದ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಜನಸಂಘದ ದಿನಗಳಿಂದಲೂ ಪಕ್ಷದಲ್ಲಿದ್ದ ವ್ಯಕ್ತಿಗೆ ಬಿಜೆಪಿ ಮೋಸ ಮಾಡಿದೆ. ನಾನು ಒತ್ತಡಕ್ಕೆ ಮಣಿಯುವುದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ನನ್ನ ಕ್ಷೇತ್ರದ ಜನರೇ ನನ್ನ ಶಕ್ತಿ. ಸದ್ಯ, ಅವರೆಲ್ಲ ಶಾಕ್‌ಗೊಳಗಾಗಿದ್ದಾರೆ'' ಎಂದು ಗೋಯಲ್‌ ತಿಳಿಸಿದ್ದಾರೆ.

ಮತ್ತೊಂದೆಡೆ, ''ಆಡಳಿತ ವಿರೋಧಿ ಅಲೆ ಹೆಚ್ಚಾಗುತ್ತಿದ್ದಂತೆ 160 ಶಾಸಕರ ಪೈಕಿ ಸುಮಾರು ಅರ್ಧದಷ್ಟು ಶಾಸಕರನ್ನು ಬದಲಿಸುವ ಬಗ್ಗೆ ಹೇಳಲಾಗಿತ್ತು. ಬಹುತೇಕ ಹಿರಿಯ ನಾಯಕರನ್ನು ಬದಲಿಸುವ ಬಗ್ಗೆಯೂ ಹೇಳಲಾಗಿತ್ತು. ಆದರೆ, ಹಲವು ಹಂತಗಳಲ್ಲಿ ನಡೆಸಿದ್ದ ಸರ್ವೇಯ ವರದಿಗಳನ್ನು ಏಕೆ ಪಾಲಿಸಿಲ್ಲ'' ಎಂದು ಟಿಕೆಟ್ ಆಕಾಂಕ್ಷಿಗಳೊಬ್ಬರು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕರು ಮಾತನಾಡಿದ್ದು, ''ಬಹುತೇಕ ಎಂಎಲ್‌ಎಗಳನ್ನು ಬದಲಾಯಿಸಲು ಸಿಎಂ ವಸುಂಧರಾ ರಾಜೇಗೆ ಇಷ್ಟವಿರಲಿಲ್ಲ. ಶಾಸಕರನ್ನು ಬದಲಾಯಿಸಿದರೆ ಆಡಳಿತ ವಿರೋಧಿ ಅಲೆಯಿದೆ ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ'' ಎಂದು ಸಿಎಂ ಪಕ್ಷದ ನಾಯಕರ ಜತೆ ಮಾತುಕತೆ ನಡೆಸಿದ್ದರು ಎಂದು ಹೇಳಿದ್ದಾರೆ. ಸದ್ಯ, ಫಸ್ಟ್‌ ಲಿಸ್ಟ್‌ನಲ್ಲಿ ಟಿಕೆಟ್ ಸಿಕ್ಕಿರುವವರು ಬಹುತೇಕರು ರಾಜೇಯ ನಂಬಿಕಸ್ಥರಾಗಿದ್ದಾರೆ. ಇದರಿಂದಾಗಿ ಟಿಕೆಟ್ ಅಯ್ಕೆ ಸಮಿತಿಯಲ್ಲಿ ಸಿಎಂ ಪಾತ್ರ ಮಹತ್ತರವಾಗಿದೆ ಎಂಬುದು ಸ್ಪಷ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ